ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದರೂ, ಬಹುಮತಕ್ಕೆ ಕೆಲ ಶಾಸಕರ ಕೊರತೆಯಿಂದಾಗಿ ರಾಜ್ಯಪಾಲರು ಅವಕಾಶ ನಿರಾಕರಿಸಿದ್ದಾರೆ. ಈ ರಾಜಕೀಯ ಬೆಳವಣಿಗೆಯು ಕಾಂಗ್ರೆಸ್, ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳ ನಡುವೆ ಹೊಸ ಸಮೀಕರಣ ಮತ್ತು ಸಂಘರ್ಷಕ್ಕೆ ಕಾರಣವಾಗಿದೆ.
ಚೆನ್ನೈ (ಮೇ.6): ತಮಿಳುನಾಡು ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆ ನಡೆದಿದೆ. ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ಅವರು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಆದರೆ, ರಾಜ್ಯಪಾಲರು 118 ಶಾಸಕರ ಬೆಂಬಲ ಪಡೆದು ಮರಳಿ ಬರುವಂತೆ ಸೂಚಿಸಿದ್ದಾರೆ. ಮೂಲಗಳ ಪ್ರಕಾರ, ವಿಜಯ್ ಕೇವಲ 112 ಶಾಸಕರ ಬೆಂಬಲದ ಪತ್ರವನ್ನು ಮಾತ್ರ ಸಲ್ಲಿಸಿದ್ದರು ಎನ್ನಲಾಗಿದ್ದು, ಇದರಿಂದಾಗಿ ತಮಿಳುನಾಡಿನಲ್ಲಿ ಹೊಸ ಸರ್ಕಾರದ ಪ್ರಮಾಣವಚನ ತಡವಾಗಲಿದೆ
ತಮಿಳುನಾಡಿನಲ್ಲಿ ಸಂಖ್ಯೆಗಳ ಆಟ ಆರಂಭವಾಗಿದ್ದು, ಪರಿಸ್ಥಿತಿ ಈಗಾಗಲೇ ಉದ್ವಿಗ್ನಗೊಂಡಿದೆ. ನಟ-ರಾಜಕಾರಣಿ ವಿಜಯ್ ಅವರು 112 ಶಾಸಕರ ಬೆಂಬಲದೊಂದಿಗೆ ರಾಜಭವನಕ್ಕೆ ಪ್ರವೇಶಿಸಿದರು, ಆದರೆ ಆ ಸಂಖ್ಯೆ ಸಾಕಾಗುವುದಿಲ್ಲ ಎಂಬ ಉತ್ತರ ಲಭಿಸಿದೆ. "118ರ ಸಂಖ್ಯಾಬಲದೊಂದಿಗೆ ಬನ್ನಿ" ಎಂದು ರಾಜ್ಯಪಾಲರು ವಿಜಯ್‌ಗೆ ತಿಳಿಸಿದ್ದು, ಇದು ರಾಜಕೀಯ ಚದುರಂಗದಾಟಕ್ಕೆ ಹೊಸ ವೇಗ ನೀಡಿದೆ. ಕಾಂಗ್ರೆಸ್‌ನ ಐವರು ಶಾಸಕರ ಬೆಂಬಲ ತಮಗೆ ಇದೆ ಎಂದು ವಿಜಯ್ ಮೌಖಿಕವಾಗಿ ಹೇಳಿದ್ದಾರಾದರೂ, ಅದನ್ನು ಅಧಿಕೃತವಾಗಿ ಸಾಬೀತುಪಡಿಸಲು ಕಾಲಾವಕಾಶ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯ್ ಅವರ ಟಿವಿಕೆ ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲಿ 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದು ಅದ್ಭುತ ಪ್ರದರ್ಶನ ನೀಡಿದೆ. ಆದರೆ ಬಹುಮತಕ್ಕೆ 10 ಸ್ಥಾನಗಳ ಕೊರತೆಯಿದೆ. ಮಿತ್ರಪಕ್ಷಗಳು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಡಿಎಂಕೆ ಮಿತ್ರಪಕ್ಷವಾಗಿರುವ ವಿಡುತಲೈ ಚಿರುತ್ತೈಗಲ್ ಕಚ್ಚಿ (VCK), ಗುರುವಾರ ಬೆಳಗ್ಗೆ 10 ಗಂಟೆಗೆ ಪ್ರಮುಖ ಸಭೆ ನಡೆಸಿ ತನ್ನ ನಿಲುವು ಪ್ರಕಟಿಸಲಿದೆ. ಎಡಪಕ್ಷಗಳು ತಮ್ಮ ನಿರ್ಧಾರವನ್ನು ಮೇ 8ಕ್ಕೆ (ಶುಕ್ರವಾರ) ಮುಂದೂಡಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ವಿಜಯ್ ಪರ ನಿಂತಿಲ್ಲ. ವಿಸಿಕೆ ಮತ್ತು ಎಡಪಕ್ಷಗಳು ಸದ್ಯ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟದ ಭಾಗವಾಗಿವೆ. ಸದ್ಯಕ್ಕೆ ಹಕ್ಕು ಮಂಡನೆಯಾಗಿದ್ದರೂ, ಮುಖ್ಯಮಂತ್ರಿ ಗದ್ದುಗೆ ಇನ್ನೂ ವಿಜಯ್ ಅವರಿಂದ ಸ್ವಲ್ಪ ದೂರದಲ್ಲೇ ಉಳಿದಿದೆ.
ಕಳೆದ 48 ಗಂಟೆಗಳಲ್ಲಿ ನಡೆದ ಪ್ರಮುಖ ವಿದ್ಯಮಾನಗಳ ಅವಲೋಕನ
ಎಐಎಡಿಎಂಕೆ ಆಂತರಿಕ ಅಸಮಾಧಾನ: 2019, 2024ರ ಲೋಕಸಭೆ ಮತ್ತು 2021, 2026ರ ವಿಧಾನಸಭಾ ಚುನಾವಣೆಗಳಲ್ಲಿ ಸತತ ಸೋಲು ಕಂಡಿರುವ ಕಾರಣ, ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ಸೇರಿದಂತೆ ಹಲವು ಎಐಎಡಿಎಂಕೆ ನಾಯಕರು ವಿಜಯ್‌ಗೆ ಬೆಂಬಲ ನೀಡುವಂತೆ ಒತ್ತಡ ಹೇರಿದ್ದಾರೆ. ಸರ್ಕಾರದಲ್ಲಿ ಭಾಗಿಯಾಗುವ ಬದಲು ಹೊರಗಿನಿಂದ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆದಿದೆ.
ಪತ್ರ ರವಾನೆ: ಬುಧವಾರ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ನಿವಾಸಕ್ಕೆ ಟಿವಿಕೆ ನಾಯಕ ಆಧವ್ ಅರ್ಜುನ್ ಅವರಿಗೆ ಸಂಬಂಧಿಸಿದ ವಾಹನವೊಂದು ಬೆಂಬಲ ಕೋರುವ ಅಧಿಕೃತ ಪತ್ರದೊಂದಿಗೆ ತಲುಪಿತ್ತು. ಆದರೆ ಆ ಸಮಯದಲ್ಲಿ ಆಧವ್ ಅರ್ಜುನ್ ಅಥವಾ ಬುಸ್ಸಿ ಆನಂದ್ ಇಬ್ಬರೂ ಇರಲಿಲ್ಲ ಎಂದು ತಿಳಿಸಲಾಗುದೆ.
ಕಾಂಗ್ರೆಸ್ ಎಂಟ್ರಿ ಮತ್ತು ಮೈತ್ರಿ ಬದಲಾವಣೆ: ಟಿವಿಕೆ-ಎಐಎಡಿಎಂಕೆ ಮೈತ್ರಿಯ ಮಾತುಕತೆ ನಡೆಯುತ್ತಿದ್ದಾಗಲೇ ಕಾಂಗ್ರೆಸ್ ವಿಜಯ್‌ಗೆ ಬೆಂಬಲ ಘೋಷಿಸಿ ಅಖಾಡಕ್ಕಿಳಿಯಿತು. ಇದರಿಂದಾಗಿ ಟಿವಿಕೆ ಎಐಎಡಿಎಂಕೆ ಜೊತೆಗಿನ ಮಾತುಕತೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದೆ.
ಕಾಂಗ್ರೆಸ್‌ನ ಷರತ್ತು: "ಭಾರತದ ಸಂವಿಧಾನವನ್ನು ನಂಬದ ಯಾವುದೇ ಕೋಮುವಾದಿ ಶಕ್ತಿಗಳನ್ನು ಮೈತ್ರಿಯಿಂದ ದೂರವಿಡಬೇಕು" ಎಂಬ ಷರತ್ತಿನ ಮೇಲೆ ಕಾಂಗ್ರೆಸ್ ಬೆಂಬಲ ನೀಡಿದೆ. ಇದು ಪರೋಕ್ಷವಾಗಿ ಈ ಹಿಂದೆ ಎನ್‌ಡಿಎ ಜೊತೆಗಿದ್ದ ಎಐಎಡಿಎಂಕೆಗೆ ನೀಡಿದ ಟಾಂಗ್ ಎನ್ನಲಾಗುತ್ತಿದೆ.
ದೆಹಲಿಯಲ್ಲಿ ಚರ್ಚೆ: ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಸಭೆ ನಡೆಸಿದ ನಂತರ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ದೆಹಲಿಯಲ್ಲಿ ಚರ್ಚಿಸಿ ಬೆಂಬಲದ ನಿರ್ಧಾರ ಕೈಗೊಂಡಿದ್ದಾರೆ. ಎಡಪಕ್ಷಗಳು ಮತ್ತು ಐಯುಎಂಎಲ್ ಪಕ್ಷಗಳನ್ನು ವಿಜಯ್ ಪರ ತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ: ಮೇ 8 ರಂದು ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ಅವರ ಪ್ರಮಾಣ ವಚನ ಸಮಾರಂಭ ನಡೆಯುವ ಸಾಧ್ಯಯಿತ್ತು.. ಇದಕ್ಕೆ ರಾಹುಲ್ ಗಾಂಧಿ ಕೂಡ ಹಾಜರಾಗುತ್ತಾರೆ ಎನ್ನಲಾಗಿತ್ತು. ಈಗ ಇದು ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್: ಡಿಎಂಕೆ ಆಕ್ರೋಶ
ಕಾಂಗ್ರೆಸ್‌ನ ಈ ನಡೆಯನ್ನು ಡಿಎಂಕೆ "ವಿಶ್ವಾಸದ್ರೋಹ" ಎಂದು ಕರೆದಿದೆ. ಡಿಎಂಕೆ ನಾಯಕಿ ಕನಿಮೋಳಿ ಸೋಮು ಈ ಬಗ್ಗೆ ಕಿಡಿಕಾರಿದ್ದು, "ನಂಬಿದವರನ್ನು ಕೈಬಿಟ್ಟು ಹೊಸ ಅವಕಾಶಕ್ಕಾಗಿ ಹಾತೊರೆಯುವುದು ಕಾಂಗ್ರೆಸ್ ರಕ್ತದಲ್ಲೇ ಇದೆ. ಡಿಎಂಕೆಯ ಬಲದ ಮೇಲೆ ಬೆಳೆದು ಈಗ ಡಿಎಂಕೆಗೆ ಸವಾಲು ಹಾಕುವುದು 'ಏರಿದ ಏಣಿಯನ್ನೇ ಒದೆಯುವ' ಕೆಳಮಟ್ಟದ ಕೃತ್ಯ" ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ, "ಚುನಾವಣೋತ್ತರ ಮೈತ್ರಿಗಳು ಹೇಗೆ ಕೆಲಸ ಮಾಡುತ್ತವೆ ಎಂಬುದು ತಿಳಿಯದವರು ಇಂತಹ ಪ್ರತಿಕ್ರಿಯೆ ನೀಡುತ್ತಾರೆ, ಇದು ದುರದೃಷ್ಟಕರ" ಎಂದು ತಿರುಗೇಟು ನೀಡಿದ್ದಾರೆ.


