ವಿಜಯ್ ಮತ್ತು ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಸಂಗೀತಾ ಸೋರ್ಣಲಿಂಗಂ ಅವರು ಚೆನ್ನೈನಲ್ಲಿ ನಡೆದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಅವರ ವಿವಾಹ ಆರತಕ್ಷತೆಯಲ್ಲಿ ಪ್ರತ್ಯೇಕವಾಗಿ ಭಾಗವಹಿಸಿದ್ದಾರೆ.
ನವೆಂಬರ್ 21ರಂದು ಚೆನ್ನೈನಲ್ಲಿ ನಡೆದ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ವಿವಾಹ ಆರತಕ್ಷತೆಯಲ್ಲಿ ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸೋರ್ಣಲಿಂಗಂ ಪ್ರತ್ಯೇಕವಾಗಿ ಭಾಗವಹಿಸಿದ್ದರು. ಇವರಿಬ್ಬರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸನ್ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ನವೆಂಬರ್ 21ರಂದು ಚೆನ್ನೈನಲ್ಲಿ ತಮ್ಮ ವಿವಾಹ ಆರತಕ್ಷತೆ ಆಯೋಜಿಸಿದ್ದರು. ತಮಿಳುನಾಡು ಮುಖ್ಯಮಂತ್ರಿ, ನಟ ಸಿ. ಜೋಸೆಫ್ ವಿಜಯ್ ಮತ್ತು ಅವರಿಂದ ದೂರವಾಗಿರುವ ಪತ್ನಿ ಸಂಗೀತಾ ಸೋರ್ಣಲಿಂಗಂ ಈ ಕಾರ್ಯಕ್ರಮದ ಪ್ರಮುಖ ಅತಿಥಿಗಳಾಗಿದ್ದರು. ಇಬ್ಬರೂ ಪ್ರತ್ಯೇಕವಾಗಿ ರಿಸೆಪ್ಷನ್ಗೆ ಬಂದಿದ್ದರು.
ಈ ಕಾರ್ಯಕ್ರಮದಲ್ಲಿ ಸಂಗೀತಾ ಅವರು ಅಪರೂಪಕ್ಕೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಫೋಟೋಗ್ರಾಫರ್ಗಳ ಗಮನ ಸೆಳೆದರು. ಮಗ ಜೇಸನ್ ಸಂಜಯ್ ಅವರ ಮೊದಲ ಸಿನಿಮಾ ನಿರ್ದೇಶನಕ್ಕೆ ಶುಭಕೋರಲು ಅವರು ಈ ಹಿಂದೆ ಕಾಣಿಸಿಕೊಂಡಿದ್ದರು. ಇದೀಗ ತಿಂಗಳುಗಳ ನಂತರ ಮತ್ತೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಇನ್ನೊಂದೆಡೆ, ಸಾಂಪ್ರದಾಯಿಕ ಉಡುಗೆಯಲ್ಲಿ ರಿಸೆಪ್ಷನ್ಗೆ ಬಂದ ಸಿಎಂ ವಿಜಯ್, ನವಜೋಡಿಗೆ ಶುಭಕೋರಿ ಅನಿರುದ್ಧ್ ಹಾಗೂ ಕಾವ್ಯಾ ಜೊತೆ ಫೋಟೋಗೆ ಪೋಸ್ ನೀಡಿದರು.
ವಿಜಯ್ ಮತ್ತು ಸಂಗೀತಾ ಆಗಸ್ಟ್ 1999ರಲ್ಲಿ ವಿವಾಹವಾಗಿದ್ದರು. ಇವರಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ವೈಯಕ್ತಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ಈ ದಂಪತಿ ಕಳೆದ ಕೆಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ರಾಜಕೀಯ ಪ್ರಚಾರಗಳು ಹಾಗೂ ಸಿನಿಮಾ ಕಾರ್ಯಕ್ರಮಗಳಿಂದ ಸಂಗೀತಾ ಬಹುತೇಕ ದೂರವೇ ಉಳಿದಿದ್ದಾರೆ.
ವಿಜಯ್ ಅವರು ನಟಿಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಸಂಗೀತಾ ಈ ವರ್ಷದ ಆರಂಭದಲ್ಲಿ ವಿಚ್ಛೇದನ ಅರ್ಜಿಯಲ್ಲಿ ಆರೋಪಿಸಿದ್ದರು. ತಮ್ಮ ವಿರೋಧದ ನಡುವೆಯೂ ವಿಜಯ್ ಆ ಸಂಬಂಧ ಮುಂದುವರಿಸಿದ್ದು, ತನಗೆ ತೀವ್ರ ಮಾನಸಿಕ ಹಿಂಸೆಯಾಗಿದೆ ಎಂದು ಅವರು ದೂರಿದ್ದರು. ಹಲವು ಕೋರ್ಟ್ ವಿಚಾರಣೆಗಳ ಬಳಿಕ ಸಂಗೀತಾ ವಿಚ್ಛೇದನ ಪ್ರಕರಣವನ್ನು ಹಿಂಪಡೆದಿದ್ದರು. ಮಗ ಜೇಸನ್ ಸಂಜಯ್ ಅವರ 'ಸಿಗ್ಮಾ' ಸಿನಿಮಾ ಬಿಡುಗಡೆ ವೇಳೆ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದ ಸಂಗೀತಾ, ಇದೀಗ ಎರಡನೇ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಗ್ರೀಸ್ನಲ್ಲಿ ವಿವಾಹ
ನವೆಂಬರ್ 11ರಂದು ಗ್ರೀಸ್ನಲ್ಲಿ ಅನಿರುದ್ಧ್ ಮತ್ತು ಕಾವ್ಯಾ ವಿವಾಹವಾಗಿದ್ದರು. ಆನಂತರ ಚೆನ್ನೈನಲ್ಲಿ ಆಪ್ತರು ಹಾಗೂ ಕುಟುಂಬಸ್ಥರಿಗಾಗಿ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ಐಟಿಸಿ ಗ್ರ್ಯಾಂಡ್ ಚೋಳಾದಲ್ಲಿ ನಡೆದ ಈ ಸಂಭ್ರಮದಲ್ಲಿ ಸಿದ್ಧಾರ್ಥ್, ಅದಿತಿ ರಾವ್ ಹೈದರಿ, ಕೇನ್ ವಿಲಿಯಮ್ಸನ್, ಡೇಲ್ ಸ್ಟೇನ್ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸೇರಿದಂತೆ ರಾಜಕೀಯ, ಕ್ರೀಡಾ ಮತ್ತು ಸಿನಿಮಾ ರಂಗದ ಗಣ್ಯರು ಭಾಗವಹಿಸಿದ್ದರು.
ಇನ್ನು ಮದುವೆಗೂ ಮುನ್ನ ಅನಿರುದ್ಧ್ ಹಾಗೂ ಕಾವ್ಯಾ ತಮ್ಮ ಪ್ರೇಮವಿಚಾರವನ್ನು ಗುಟ್ಟಾಗಿಟ್ಟಿದ್ದರು. ಆದರೆ ಕಳೆದ ಒಂದು ವರ್ಷದಿಂದ ಸನ್ರೈಸರ್ಸ್ ಹೈದರಾಬಾದ್ ಪಂದ್ಯಗಳು ಹಾಗೂ ಸಂಗೀತ ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ಪುಷ್ಟಿ ನೀಡಿದ್ದರು. ಕೆಲವು ದಿನಗಳ ಹಿಂದಷ್ಟೇ ಅನಿರುದ್ಧ್ ತಮ್ಮ ಪ್ರಿ-ವೆಡ್ಡಿಂಗ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
















