ಪರಸ್ಪರ ಜುಟ್ಟು ಹಿಡಿದುಕೊಂಡು ಜಗಳ ಮಾಡಿದ ವಿದ್ಯಾರ್ಥಿನಿಯರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮೊದಲೆಲ್ಲಾ ಕಾಲೇಜು ಆವರಣದಲ್ಲಿ ಹುಡುಗರು ಗ್ಯಾಂಗ್ ಕಟ್ಟಿಕೊಂಡು ತಿರುಗುವುದು. ಪರಸ್ಪರ ಹೊಡೆದಾಡಿಕೊಳ್ಳುವುದು. ಕಾಲೇಜಿನಿಂದ ಈ ಕಾರಣಕ್ಕೆ ಸಸ್ಪೆಂಡ್ ಆಗಿರುವುದು ಮುಂತಾದ ಘಟನೆಗಳನ್ನು ನೀವು ಈಗಾಗಲೇ ಕೇಳಿರುತ್ತೀರಿ. ಆದರೆ ಈಗ ಶಾಲೆಯ ಮುಂಭಾಗದಲ್ಲಿ ವಿದ್ಯಾರ್ಥಿನಿಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಾಗಂತ ಇದೇನು ಕೇವಲ ಇಬ್ಬರ ನಡುವಿನ ಜಗಳವಾಗಿ ಉಳಿದಿಲ್ಲ. ಸಿನಿಮಾ ಸ್ಟೈಲ್‌ನಲ್ಲಿ ಈ ಕಿತ್ತಾಟ ನಡೆದಿದ್ದು, ಹುಡುಗಿಯರು ಬೇರೆ ಬೇರೆ ಗುಂಪುಗಳಾಗಿ ಪರಸ್ಪರ ಹೊಡೆದಾಡಿರುವ ವಿಡಿಯೋ ವೈರಲ್ ಆಗಿದೆ. ಆದರೆ ಯಾಕೆ ಈ ಹೊಡೆದಾಟ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. 

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ಮುಂಭಾಗ ನಡೆದ ಘಟನೆ ಇದು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಆದರೆ ಘಟನೆ ಯಾವಾಗ ನಡೆದಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಹೊಡೆದಾಟದ ಕಾರಣವೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಆದರೆ ಕೆಲವು ವಿದ್ಯಾರ್ಥಿನಿಯರು ಶಾಲಾ ಸಮವಸ್ತ್ರದಲ್ಲಿದ್ದರೆ ಮತ್ತೆ ಕೆಲವರು ಮಾಮೂಲಿ ಡ್ರೆಸ್‌ನಲ್ಲಿದ್ದಾರೆ. ಜಗಳದಲ್ಲಿ ತೊಡಗಿದ್ದ ವಿದ್ಯಾರ್ಥಿನಿಯರ ಸಮವಸ್ತ್ರವನ್ನು ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಈ ಹೊಡೆದಾಟವು ಎರಡು ಶಾಲೆಗಳ ವಿದ್ಯಾರ್ಥಿನಿಯರ ನಡುವಿನ ಘರ್ಷಣೆಯಂತಿದೆ ಅವುಗಳಲ್ಲಿ ಒಂದು ಬೆಂಗಳೂರಿನ ಪ್ರಸಿದ್ಧ ಬಿಷಪ್ ಕಾಟನ್ ಬಾಲಕಿಯರ ಶಾಲೆ ಎಂದು ಕಾಮೆಂಟ್ ಮಾಡಿದ್ದಾರೆ.

Scroll to load tweet…

ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗಿಯರು ಒಬ್ಬರಿಗೊಬ್ಬರು ಕಪಾಳ ಮೋಕ್ಷ ಮಾಡುತ್ತಿರುವುದು ಮತ್ತು ಪರಸ್ಪರ ಕೂದಲು ಎಳೆದುಕೊಳ್ಳುವುದನ್ನು ಕಾಣಬಹುದು. ಒಬ್ಬ ಹುಡುಗಿ ಇತರರನ್ನು ಹೊಡೆಯಲು ದೊಣ್ಣೆಯೊಂದನ್ನು ಕೈಯಲ್ಲಿ ಹಿಡಿದಿರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು. ಈ ವೇಳೆ ಕೆಲವು ಹುಡುಗರು ಕೂಡ ಸ್ಥಳದಲ್ಲಿ ಹಾಜರಿದ್ದು, ಜಗಳ ಬಿಡಿಸಲು ಪ್ರಯತ್ನಿಸಿದ ಘಟನೆಯೂ ನಡೆದಿದೆ. ಆದರೆ ಹುಡುಗಿಯರು ಮಾತ್ರ ಯಾರಿಗೂ ಕೇರ್ ಮಾಡದೇ ಬೀದಿ ಎಂಬುದನ್ನು ಗಮನಿಸದೇ ಹೋರಾಡಿದ್ದಾರೆ. ಹೊಡೆದಾಟದ ಜೊತೆ ಕೂಗಾಡುವುದು ಕಿರುಚಾಡುತ್ತಿರುವುದು ಕಂಡು ಬರುತ್ತಿದೆ. ವಿಭಿನ್ನ ಕೋನದಿಂದ ತೆಗೆದ ವೀಡಿಯೊವು ಸ್ವಲ್ಪ ಹೊಡೆದಾಟದ ಬಳಿಕ ಅಸ್ವಸ್ಥಗೊಂಡಂತೆ ಕಾಣುವ ಹುಡುಗಿಯನ್ನು ಕೂಡ ತೋರಿಸುತ್ತಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿ ಮಧ್ಯಪ್ರವೇಶಿಸಿಲ್ಲ ಅಲ್ಲದೇ ಯಾವುದೇ ಹೇಳಿಕೆ ನೀಡಿಲ್ಲ.

ಕಾಲೇಜ್ ಆವರಣದಲ್ಲಿ ಕೂದಲಿಡಿದು ಕಿತ್ತಾಡಿಕೊಂಡ ಹುಡುಗಿಯರು, ನೋಡಿ ಮಜಾ ತಗೊಂಡ ಹುಡುಗ್ರು

ಪರಸ್ಪರ ಹುಡುಗಿಯರು ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಘಟನೆ ಬೆಳಕಿಗೆ ಬಂದಿದ್ದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಕಾಲೇಜು ಆವರಣದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪರಸ್ಪರ ಕೂದಲಿಡಿದು ಕಿತ್ತಾಡಿಕೊಂಡು ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಬರೀ ಹುಡುಗರ ಜಗಳ ನೋಡಿ ಬೋರಾಗಿದ್ದ ಜನ ಹುಡುಗಿಯರ ಕಿತ್ತಾಟ ನೋಡಿ ಮಜಾ ತೆಗೆದುಕೊಂಡಿದ್ದರು. ಮಹಾರಾಷ್ಟ್ರದ ನಾಸಿಕ್ ಪಟ್ಟಣದ ಹೆಸರಾಂತ ಕಾಲೇಜಿನಲ್ಲಿ ನಡೆದ ಈ ಕಿತ್ತಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಣ್ಣ ಕಾರಣಕ್ಕೆ ಹುಡುಗಿಯರು ಕೂದಲು ಹಿಡಿದು ಕಿತ್ತಾಡಿದ್ದರು ಎಂಬುದು ತಿಳಿದು ಬಂದಿತ್ತು. 
ಗಂಡುಮೆಟ್ಟಿದ ನಾಡಲ್ಲಿ ಬಾಯ್‌ಫ್ರೆಂಡ್‌ಗಾಗಿ ಯುವತಿಯರ ಮಾರಾಮಾರಿ!

ಹಾಗೆಯೇ ಹುಬ್ಬಳ್ಳಿಯಲ್ಲಿಯೂ ಕೆಲ ವರ್ಷಗಳ ಹಿಂದೆ ಯುವತಿಯರ ಬೀದಿ ಜಗಳ ಜನರಿಗೆ ಪುಕ್ಕಟೆ ಮನರಂಜನೆ ನೀಡಿತ್ತು. ಮೂವರು ಯುವತಿಯರು ನಡುರಸ್ತೆಯಲ್ಲಿ ಬಡಿದಾಡಿಕೊಂಡಿದ್ದರು. ನಗರದ ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ ಎದುರು ಜಗಳ ನಡೆದಿತ್ತು. ಯುವತಿಯರ ಕಾದಾಟವನ್ನು ಮೊಬೈಲ್ ನಲ್ಲಿ ಸೆರೆಹಿಡಿದ ನೋಡುಗರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ವೈರಲ್ ಮಾಡಿದ್ದರು. ಇವರು ಕಾಲೇಜು ಯುವತಿಯರಾಗಿದ್ದು ಬಾಯ್ ಫ್ರೆಂಡ್ ವಿಚಾರಕ್ಕೆ ಮಾರಾಮಾರಿ ನಡೆದಿದೆ ಎನ್ನುವುದು ಸ್ಥಳೀಯರ ಮಾತಾಗಿತ್ತು.