Asianet Suvarna News Asianet Suvarna News

ಸುರಂಗದಲ್ಲಿ ಸಿಲುಕಿರುವ 41 ಜನರ ನೆರವಿಗೆ ಪೈಪ್‌: ಘನಾಹಾರ ಪೂರೈಕೆ, ರಕ್ಷಣಾ ಕಾರ್ಯಕ್ಕೆ ಮೊದಲ ಯಶಸ್ಸು

ಈಗ ಸುರಂಗದ ಮೂಲಕ 53 ಮೀಟರ್ ಒಳಗೆ 6 ಇಂಚಿನ ‘ಲೈಫ್ ಲೈನ್ ಪೈಪ್’ ಅಳವಡಿಸಲಾಗಿದೆ. ಇವುಗಳ ಮೂಲಕ ರೊಟ್ಟಿ, ಪಲ್ಯದಂಥ ಘನಾಹಾರ ನೀಡಬಹುದು. ಜೊತೆಗೆ ಈ ಮೊದಲಿನಂತೆ ಔಷಧ,  ನೀರು, ದ್ರವಾಹಾರ ಕೊಡಬಹುದು.

vertical shaft wider pipe plan for uttarakhand rescue operation ash
Author
First Published Nov 21, 2023, 8:06 AM IST

ಉತ್ತರಕಾಶಿ (ನವೆಂಬರ್ 21, 2023): ಉತ್ತರಕಾಶಿ ಸುರಂಗ ಕುಸಿದ ಘಟನೆಗೆ ಸಂಬಂಧಿಸಿದಂತೆ 9ನೇ ದಿನ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದ್ದು, ದೊಡ್ಡ ‘ಜೀವರಕ್ಷಕ ಪೈಪ್‌’ ಅಳವಡಿಸುವ ಕೆಲಸ ಯಶಸ್ವಿಯಾಗಿದೆ. ಈ ಮೂಲಕ ಸಿಕ್ಕಿಬಿದ್ದ 41 ಕಾರ್ಮಿಕರಿಗೆ 9 ದಿನದಲ್ಲಿ ಇದೇ ಮೊದಲ ಬಾರಿ ಘನ ಆಹಾರ ಪೂರೈಸಲು ಸಾಧ್ಯವಾಗಲಿದೆ.

ಈವರೆಗೂ ಕೇವಲ ಸಣ್ಣ ಪೈಪ್‌ ಮೂಲಕ ಕಾರ್ಮಿಕರಿಗೆ ದ್ರವಾಹಾರ, ಒಣಹಣ್ಣು, ನೀರು, ಔಷಧ ನೀಡಲಾಗುತ್ತಿತ್ತು. ಆದರೆ ಈಗ ಸುರಂಗದ ಮೂಲಕ 53 ಮೀಟರ್ ಒಳಗೆ 6 ಇಂಚಿನ ‘ಲೈಫ್ ಲೈನ್ ಪೈಪ್’ ಅಳವಡಿಸಲಾಗಿದೆ. ಇವುಗಳ ಮೂಲಕ ರೊಟ್ಟಿ, ಪಲ್ಯದಂಥ ಘನಾಹಾರ ನೀಡಬಹುದು. ಜೊತೆಗೆ ಈ ಮೊದಲಿನಂತೆ ಔಷಧ,  ನೀರು, ದ್ರವಾಹಾರ ಕೊಡಬಹುದು.

ಇದನ್ನು ಓದಿ: 2 ಕಿ.ಮೀ. ಸುರಂಗದಲ್ಲಿ 41 ಜೀವ: ರಕ್ಷಣೆಗೆ ‘ಪಂಚತಂತ್ರ’ ಕಾರ್ಯಾಚರಣೆ

ಅಲ್ಲದೆ, ಕ್ಯಾಮರಾದಂಥ ಉಪಕರಣವನ್ನು ಅದರಲ್ಲಿ ಕಳಿಸಿ ಕಾರ್ಮಿಕರ ಸ್ಥಿತಿಗತಿ ಅರಿಯಬಹುದು. ಪೈಪ್‌ ಮೂಲಕ ಜೋರಾಗಿ ಮಾತನಾಡಿ, ಕಾರ್ಮಿಕರ ಜತೆ ನೈಜ ಸಂವಹನ ಸಾಧಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. 

ವಿದೇಶಿ ತಜ್ಞ ಭೇಟಿ:
ಚಾರ್‌ಧಾಮ್‌ ಯಾತ್ರೆಗೆ ಸರ್ವಋತು ರಸ್ತೆ ನಿರ್ಮಿಸುವ ಯೋಜನೆಯಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಭೂಕುಸಿತ ಉಂಟಾಗಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಲು ವಿದೇಶಿ ತಜ್ಞ ಅರ್ನಾಲ್ಡ್‌ ಡಿಕ್ಸ್‌ ಆಗಮಿಸಿದ್ದಾರೆ. ಕಾರ್ಮಿಕರನ್ನು ಎಷ್ಟು ವೇಗವಾಗಿ ರಕ್ಷಿಸುತ್ತೇವೆ ಎಂಬುದಕ್ಕಿಂತ ಎಷ್ಟು ಸುರಕ್ಷಿತವಾಗಿ ರಕ್ಷಿಸುತ್ತೇವೆ ಎಂಬುದು ಮುಖ್ಯ. ಪರ್ವತದ ಎತ್ತರದಿಂದ ಕೊರೆಯುವ ಮೂಲಕ ಅವರ ರಕ್ಷಣಾ ಕಾರ್ಯ ಆರಂಭಿಸಲು ಸದ್ಯಕ್ಕೆ ಯೋಜಿಸಲಾಗಿದೆ’ ಎಂದಿದ್ದಾರೆ.

ಇದನ್ನು ಓದಿ: ಉತ್ತರಾಖಂಡ ಸುರಂಗ ಕುಸಿದು 7 ದಿನ : ಇನ್ನೂ ಹೊರಬರದ 41 ಕಾರ್ಮಿಕರು: ಕುಟುಂಬಗಳಲ್ಲಿ ಆತಂಕ

ಇದರ ನಡುವೆ, ಸುರಂಗದಲ್ಲಿ ರಂಧ್ರ ಕೊರೆವ ಇನ್ನೊಂದು ಯಂತ್ರವನ್ನು ತರಿಸಿಕೊಳ್ಳಲಾಗುತ್ತಿದೆ. ಆದರೆ ಅದು ತುಂಬಾ ಭಾರ ಇರುವ ಕಾರಣ ವಿಮಾನದಲ್ಲಿ ತರಲು ಆಗುತ್ತಿಲ್ಲ. ಬದಲಾಗಿ ರೈಲಿನಲ್ಲಿ ತರಲಾಗುತ್ತಿದೆ. ಅಲ್ಲದೆ, ರೈಲು ನಿಲ್ದಾಣದಿಂದ ಘಟನಾ ಸ್ಥಳಕ್ಕೆ ಅದನ್ನು ತರಲು ಗುಡ್ಡ ಅಗೆದು ಅಗಲವಾದ ರಸ್ತೆ ನಿರ್ಮಿಸಲಾಗುತ್ತಿದೆ.

ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು, ಕಾರ್ಮಿಕರ ಮಾನಸಿಕ ಸ್ಥೈರ್ಯ ಕಾಪಾಡಬೇಕೆಂದು ಸೂಚಿಸಿರುವ ಹಿನ್ನೆಲೆಯಲ್ಲಿ ಕೆಲವು ಮನೋವೈದ್ಯರನ್ನು ಸುರಂಗ ಸ್ಥಳಕ್ಕೆ ಕರೆಸಿಕೊಂಡು ಕಾರ್ಮಿಕರಿಗೆ ಧೈರ್ಯ ತುಂಬುವ ಕಾರ್ಯ ಮಾಡಲಾಗುತ್ತಿದೆ. ಈ ನಡುವೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಸುರಂಗದಡಿ ಸಿಲುಕಿರುವ 41 ಕಾರ್ಮಿಕರ ಕುಟುಂಬದ ವಸತಿ, ಆಹಾರ ಮತ್ತು ಪ್ರಯಾಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದಾರೆ.

ಇದನ್ನು ಓದಿ: ಸುರಂಗ ಕುಸಿದು ಒಳಗೆ ಸಿಲುಕಿದ 40 ಕಾರ್ಮಿಕರು: ಯಮುನೋತ್ರಿಗೆ ಸಂಪರ್ಕ ಕಲ್ಪಿಸುವ ಸುರಂಗ

Follow Us:
Download App:
  • android
  • ios