ಉತ್ತರಾಖಂಡ ಸುರಂಗ ಕುಸಿದು 7 ದಿನ : ಇನ್ನೂ ಹೊರಬರದ 41 ಕಾರ್ಮಿಕರು: ಕುಟುಂಬಗಳಲ್ಲಿ ಆತಂಕ
ಉತ್ತರಾಖಂಡದ ಸಿಲ್‌ಕ್ಯಾರಾ ಸುರಂಗದಲ್ಲಿ ಭೂಕುಸಿತ ಸಂಭವಿಸಿ 150 ತಾಸು ಕಳೆದರೂ ಒಳಗೆ ಸಿಕ್ಕಿಬಿದ್ದ41 ಕಾರ್ಮಿಕರ ರಕ್ಷಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಡೀ ಕಾರ್ಯಾಚರಣೆಯನ್ನೇ ಹೊಸ ದಿಕ್ಕಿನಲ್ಲಿ ನಡೆಸಲು ಯೋಜಿಸಲಾಗಿದೆ.

ಉತ್ತರಕಾಶಿ: ಉತ್ತರಾಖಂಡದ ಸಿಲ್‌ಕ್ಯಾರಾ ಸುರಂಗದಲ್ಲಿ ಭೂಕುಸಿತ ಸಂಭವಿಸಿ 150 ತಾಸು ಕಳೆದರೂ ಒಳಗೆ ಸಿಕ್ಕಿಬಿದ್ದ41 ಕಾರ್ಮಿಕರ ರಕ್ಷಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಡೀ ಕಾರ್ಯಾಚರಣೆಯನ್ನೇ ಹೊಸ ದಿಕ್ಕಿನಲ್ಲಿ ನಡೆಸಲು ಯೋಜಿಸಲಾಗಿದೆ. ಇದುವರೆಗೂ ಸುರಂಗದ ಮುಖಭಾಗದಿಂದ ಮಣ್ಣು ಹೊರತೆಗೆದು, ಅದರೊಳಗೆ ದೊಡ್ಡ ಸ್ಟೀಲ್ ಪೈಪ್ ತೂರಿಸಿ ಕಾರ್ಮಿಕರ ರಕ್ಷಣೆಗೆ ನಿರ್ಧರಿಸಲಾಗಿತ್ತು. ಆದರೆ ಅದರ ಬದಲು ಸುರಂಗಕ್ಕೆ ಮೇಲ್ಬಾಗದಿಂದ ರಂಧ್ರ ಕೊರೆಯಲು ಯೋಜಿಸಲಾಗಿದೆ.
ಪ್ಲಾನ್ ಬದಲು: ಸಿಲ್‌ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರ ರಕ್ಷಣೆ 7ನೇ ದಿನವಾದ ಶನಿವಾರವೂ ಸಾಧ್ಯವಾಗಿಲ್ಲ. ಕಾರ್ಯಾಚರಣೆ ಸ್ಥಳದಲ್ಲಿ ಪದೇ ಪದೇ ಮಣ್ಣು ಕುಸಿಯುತ್ತಿರುವುದು, ಯಂತ್ರಗಳು ಕೈಕೊಡುತ್ತಿರುವುದು ಸಿಬ್ಬಂದಿಯನ್ನು ಕಂಗೆಡಿಸಿದೆ. ಜೊತೆಗೆ ಕಾರ್ಯಾಚರಣೆ ಮುಂದುವರೆಸಿದರೆ ಮತ್ತಷ್ಟು ಮಣ್ಣು ಕುಸಿತದ ಆತಂಕ ಎದುರಾಗಿದೆ.
ಹೀಗಾಗಿ ಸುರಂಗದ ಮೇಲ್ಬಾಗದಿಂದ ರಂಧ್ರ ಕೊರೆದು ಕಾರ್ಮಿಕರನ್ನು ರಕ್ಷಿಸುವ ಯೋಜನೆ ರೂಪಿಸಲಾಗಿದೆ. 'ನಾವು ಲಂಬವಾದ ರಂಧ್ರ ಕೊರೆಯುವ ಮೂಲಕ ಕಾರ್ಮಿಕರ ರಕ್ಷಿಸುವ ಯೋಜನೆ ರೂಪಿಸುತ್ತಿದ್ದೇವೆ. ಇದಕ್ಕಾಗಿ ಸುರಂಗದ ಮೇಲ್ಬಾಗದ ಸುಮಾರು 1 ಸಾವಿರ ಮೀ. ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗಿದೆ. ಶೀಘ್ರವೇ ರಂಧ್ರ ಕೊರೆಯುವ ಕೆಲಸ ಆರಂಭವಾಗಲಿದೆ. ಇದಕ್ಕೆ ಎಷ್ಟು ಸಮಯ ಹಿಡಿಯುತ್ತದೆ ಎಂಬ ಮಾಹಿತಿ ಭಾನುವಾರ ಮಧ್ಯಾಹ್ನದ ವೇಳೆಗೆ ಲಭ್ಯವಾಗಲಿದೆ ಎಂದು ಗಡಿ ರಸ್ತೆ ಪ್ರಾಧಿಕಾರದ ಮುಖ್ಯಸ್ಥ ಮೇಜರ್ ನಮನ್ ನರೂಲಾ ಹೇಳಿದ್ದಾರೆ.
ಸುರಂಗ ಕುಸಿದು ಒಳಗೆ ಸಿಲುಕಿದ 40 ಕಾರ್ಮಿಕರು: ಯಮುನೋತ್ರಿಗೆ ಸಂಪರ್ಕ ಕಲ್ಪಿಸುವ ಸುರಂಗ
ಇದಕ್ಕಾಗಿ ಇಂದೋರ್‌ನಿಂದ ಶಕ್ತಿಶಾಲಿಯಾದ ಸುರಂಗ ಕೊರೆಯುವ ಯಂತ್ರವನ್ನು ತರಿಸಿಕೊಳ್ಳಲಾಗಿದ್ದು, ಈ ಯಂತ್ರದ ಮೂಲಕ ರಂಧ್ರ ಕೊರೆಯುವ ಕಾರ್ಯ ನಡೆಸಲಾಗುತ್ತದೆ. ಈಗಾಗಲೇ ಭೂ ಕುಸಿತ ಸಂಭವಿಸಿರುವ ಭಾಗಕ್ಕಿಂತ ಮುಂದೆ ರಂಧ್ರ ಕೊರೆದು ಕಾರ್ಮಿಕರನ್ನು ರಕ್ಷಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಭೀರತೆ ಅರಿತು ಮೋದಿ ಕಚೇರಿಯಿಂದ ರಕ್ಷಣಾ ಮೇಲ್ವಿಚಾರಣೆ
ಉತ್ತರಕಾಶಿ (ಉತ್ತರಾಖಂಡ): ರಾಜ್ಯದ ಸಿಕ್‌ಲ್ಯಾರಾ ಸುರಂಗದಲ್ಲಿ ಭೂಕುಸಿತದ ಕಾರಣ 1 ವಾರದಿಂದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯ ಶುಕ್ರವಾರ ರಾತ್ರಿ ಕೆಲಕಾಲ ಸ್ಥಗಿತಗೊಂಡಿದ್ದರೂ, ಶನಿವಾರ ಮತ್ತೆ ಆರಂಭವಾಗಿದೆ. ಏತನ್ಮಧ್ಯೆ ಕಾರ್ಮಿಕರು 150ಕ್ಕೂ ಹೆಚ್ಚು ಗಂಟೆಗಳ ಕಾಲ ಸಿಲುಕಿರುವ ಕಾರಣ ಪರಿಸ್ಥಿತಿಯ ಗಂಭೀರತೆ ಅರಿತು ಪ್ರಧಾನಿ ಕಚೇರಿ ಅಧಿಕಾರಿಗಳು ಹಾಗೂ ಕೆಲವು ವಿದೇಶಿ ರಕ್ಷಣಾ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಕಚೇರಿ, ಉಪ ಕಾರ್ಯದರ್ಶಿ ಮಂಗೇಶ್ ಫಿಲ್ಟಿಯಾಲ್, ಪ್ರಧಾನಿ ಕಚೇರಿ ಮಾಜಿ ಸಲಹೆಗಾರ ಭಾಸ್ಕರ್ ಕುಲ್ಕ, ಪ್ರಖ್ಯಾತ ಸುರಂಗ ತಜ್ಞರಾದ ಕ್ರಿಸ್ ಕೂಪ ಅವರು ಸುರಂಗ ಸಳಕ್ಕೆ ಆಗಮಿಸಿದ್ದು, ಕೆಲವು ಸಲಹೆ ಸೂಚನೆ ನೀಡುತ್ತಿದ್ದಾರೆ.
Uttarkashi Avalanche ನಾಲ್ಕು ಮೃತದೇಹ ಹೊರಕ್ಕೆ, ನಾಪತ್ತೆಯಾಗಿರುವ 27 ಮಂದಿಗಾಗಿ ರಕ್ಷಣಾಕಾರ್ಯ!
ರಕ್ಷಣಾ ಕಾರ್ಯ ಮತ್ತೆ ಶುರು: ಅಮೆರಿಕ ನಿರ್ಮಿತ ರಕ್ಷಣಾ ಯಂತ್ರವು ತಾಂತ್ರಿಕ ಕಾರಣದಿಂದ ಶುಕ್ರವಾರ ರಾತ್ರಿ ವೈಫಲ್ಯ ಅನುಭವಿಸಿದ ಕಾರಣ ರಕ್ಷಣಾ ಕಾರ್ಯ ಕೆಲವು ಗಂಟೆಗಳ ಕಾಲ ಸ್ಥಗಿತವಾಗಿತ್ತು. ಈ ನಡುವೆ, ಭಾರತೀಯ ವಾಯುಪಡೆಯು ಮಧ್ಯಪ್ರದೇಶದಿಂದ ಇನ್ನೊಂದು ದ್ವಿಲಿಂಗ್ ಯಂತ್ರವನ್ನು ವಾಯುಪಡೆ ವಿಮಾನದಲ್ಲಿ ಕಳಿಸಿಕೊಟ್ಟಿದ್ದು, ಆ ಯಂತ್ರದ ಮೂಲಕ ಶನಿವಾರ ರಕ್ಷಣಾ ಕಾರ್ಯ ಆರಂಭವಾಗಿದೆ.
ಆರೋಗ್ಯದ ಬಗ್ಗೆ ಕುಟುಂಬ, ವೈದ್ಯರ ಆತಂಕ
150 ತಾಸಿಗಿಂತ ಹೆಚ್ಚು ಅವಧಿಯಿಂದ 41 ಕಾರ್ಮಿಕರು ಅವಶೇಷಗಳ ಅಡಿ ಸಿಲುಕಿದ್ದಾರೆ. ಈ ಮೊದಲು ಸಂಖ್ಯೆ 40 ಎನ್ನಲಾಗಿತ್ತಾದರೂ ಶುಕ್ರವಾರ ರಾತ್ರಿ ಅದನ್ನು ಪರಿಷ್ಕರಿಸಿ, 41 ಕ್ಕೆ ಹೆಚ್ಚಿಸಲಾಗಿದೆ. ಅವರಿಗೆ ಆಹಾರ, ನೀರು ಹಾಗೂ ಆಮ್ಲಜನಕವನ್ನು ಪೈಪ್ ಮೂಲಕ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಸಿಕ್ಕಿಬಿದ್ದ ಕಾರ್ಮಿಕರ ಕುಟುಂಬಗಳು ಅಪಘಾತ ಸ್ಥಳಕ್ಕೆ ಆಗಮಿಸಿದ್ದು, 'ದಿನಗಳೆದಂತೆ ನಾವು ಭರವಸೆ ಕಳೆದುಕೊಳ್ಳುತ್ತಿದ್ದೇವೆ. ಆರೋಗ್ಯ ಹದಗೆಡುವ ಮುನ್ನ ಕಾರ್ಮಿಕರನ್ನು ಶೀಘ್ರ, ರಕ್ಷಿಸಬೇಕು ಎಂದು ಕೋರಿದ್ದಾರೆ. ಈ ನಡುವೆ, ಸಿಲುಕಿರುವ ಕಾರ್ಮಿಕರ ಶೀಘ್ರ ರಕ್ಷಣೆ ಅಗತ್ಯವಿದೆ. ಅವರ ದೀರ್ಘಾವಧಿ ಬಂಧನವು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು' ಎಂದು ವೈದ್ಯರೂ ಆತಂಕ ವ್ಯಕ್ತಪಡಿಸಿದ್ದಾರೆ.
ಈವರೆಗೆ ಕೆಲಸ ಮಾಡಿದ ಅಮೆರಿಕ ನಿರ್ಮಿತ ಸುರಂಗ ಕೊರೆವ ಯಂತ್ರವು 24 ಮೀ.ನಷ್ಟು ಡ್ರಿಲ್ ಮಾಡಿ ಅವಶೇಷ ತೆರವು ಮಾಡಿದೆ. ಆದರೆ ಶುಕ್ರವಾರ ಸಂಜೆ ಭಾರಿ ಶಬ್ದ ಕೇಳಿ ಬಂದು ಯಂತ್ರವು ಕೆಟ್ಟು ಹೋಗಿದ್ದು, ಡ್ರಿಲ್ಲಿಂಗ್ ನಿಲ್ಲಿಸಿತ್ತು. ಈವರೆಗೂ 5 ಭಾರಿ ಗಾತ್ರದ ಪೈಪ್‌ಗಳನ್ನು ಡ್ರಿಲ್ ಮಾಡಿ ಹಾಕಲಾಗಿದ್ದು, ಇದೇ ಪೈಪ್‌ಗಳ ಮೂಲಕ ಕಾರ್ಮಿಕರನ್ನು ಹೊರಗೆ ಕರೆತರುವ ರೂಪಿಸಲಾಗಿದೆ.
ಬದಲಿ ಮಾರ್ಗ ಇಲ್ಲದ್ದಕ್ಕೆ ಇಷ್ಟು ಸಂಕಷ್ಟ
ಉತ್ತರಕಾಶಿ: ಇಲ್ಲಿನ ಸಿಲ್‌ಕ್ಯಾರಾ ಸುರಂಗ ನಿರ್ಮಾಣದ ಸಮಯದಲ್ಲಿ ತುರ್ತು ನಿರ್ಗಮನ ಮಾರ್ಗ ನಿರ್ಮಿಸದೇ ನಿರ್ಮಾಣ ಕಂಪನಿ ಲೋಪ ಎಸಗಿರುವುದು ಸಹ ಕಾರ್ಯಾಚರಣೆಗೆ ಬಹುದೊಡ್ಡ ತೊಡಕಾಗಿದೆ. ಸಿಲ್ ಕ್ಯಾರಾ ಸುರಂಗ ನಿರ್ಮಾಣ ಮಾಡುತ್ತಿರುವ ಸಂಸ್ಥೆ ತುರ್ತು ಮಾರ್ಗವನ್ನು ತನ್ನ ನಕ್ಷೆಯಲ್ಲಿ ತೋರಿಸಿದ್ದರೂ ನಿರ್ಮಾಣ ಮಾಡಿಲ್ಲ, ಹೀಗಾಗಿ ಕಾರ್ಮಿಕರನ್ನು ಕರೆತರಲು ಬದಲಿ ಮಾರ್ಗವೇ ಇಲ್ಲದಂತಾಗಿದೆ.
ಅಣ್ಣಾ ತಾಯಿಗೆ ಸುರಂಗದಲ್ಲಿ ನಾನು ಸಿಲುಕಿದ್ದೇನೆಂದು ಹೇಳಬೇಡ: ಕಾರ್ಮಿಕನ ಕೋರಿಕೆ
ಅಣ್ಣಾ ತಾಯಿಗೆ ನಾನು ಸುರಂಗದಡಿಯಲ್ಲಿ ಸಿಲುಕಿದ್ದೇನೆಂದು ತಿಳಿಸಬೇಡ ಎಂದು ಪುಷ್ಕರ್ ಎಂಬ ಕಾರ್ಮಿಕ ತನ್ನ ಸಹೋದರ ವಿಕ್ರಮ್ ಸಿಂಗ್‌ಗೆ ಕೋರಿಕೊಂಡ ಮನಕುಲುಕುವ ಘಟನೆ ರಕ್ಷಣಾ ಸ್ಥಳದಲ್ಲಿ ನಡೆದಿದೆ. ಸುರಂಗದಡಿ ಸಿಲುಕಿರುವ ಕಾರ್ಮಿಕರು ತಮ್ಮ ಬಂಧುಗಳೊಂದಿಗೆ ಅಲ್ಪಕಾಲ ಮಾತನಾಡಲು ವ್ಯವಸ್ಥೆ ಮಾಡಿ ಕೊಡಲಾಗಿತ್ತು. ಆಗ ಸಹೋದರರಿಬ್ಬರ ನಡುವಿನ ಸಂಭಾಷಣೆ ವೈರಲ್ ಆಗಿದ್ದು, ಅದರಲ್ಲಿ ಸುರಂಗದಡಿ ಸಿಲುಕಿರುವ ಕಾರ್ಮಿಕ 'ನನ್ನ ತಾಯಿಗೆ ಸುರಂಗದಡಿ ಸಿಲುಕಿರುವ ವಿಷಯ ತಿಳಿದರೆ ಘಾಸಿಗೊಳಗಾಗಬಹುದು' ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಬಹುತೇಕ ಕಾರ್ಮಿಕರು ತಮ್ಮ ಬಂಧುಗಳೊಂದಿಗೆ ಮಾತನಾಡುವಾಗ ತಾವು ಅಲ್ಲಿ ಸುರಕ್ಷಿತವಾಗಿದ್ದೇವೆಂದು ತಿಳಿಸಿದರೂ, 'ತಮ್ಮನ್ನು ಹೊರಗೆ ಕರೆತರಲು ಇನ್ನೆಷ್ಟು ಸಮಯ ಬೇಕಾಗಬಹುದು' ಎಂಬುದನ್ನು ಕೇಳಿದ್ದಾರೆ ಎಂದು ಹೇಳಲಾಗಿದೆ.