ಭೂ ಕುಸಿತ ಸಂಭವಿಸಿ 190 ಗಂಟೆ ಆದರೂ ಇನ್ನೂ 41 ಕಾರ್ಮಿಕರ ರಕ್ಷಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ 5 ಹೊಸ ತಂಡ ಮತ್ತು 5 ಹೊಸ ತಂತ್ರಗಳೊಂದಿಗೆ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಇದುವರೆಗೆ ಒಂದು ಸ್ಥಳದಿಂದ ಮಾತ್ರ ಕೊರೆಯಲಾಗುತ್ತಿದ್ದ ಸುರಂಗವನ್ನು ಇನ್ನು 5 ಸ್ಥಳಗಳಿಂದ ಕೊರೆಯಲು ನಿರ್ಧರಿಸಲಾಗಿದೆ.

ನವದೆಹಲಿ (ನವೆಂಬರ್ 20, 2023): ಉತ್ತರಾಖಂಡದ ಸಿಲ್‌ಕ್ಯಾರಾ ಸುರಂಗದಲ್ಲಿ ಭೂ ಕುಸಿತ ಸಂಭವಿಸಿ 190 ಗಂಟೆ ಆದರೂ ಇನ್ನೂ 41 ಕಾರ್ಮಿಕರ ರಕ್ಷಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ 5 ಹೊಸ ತಂಡ ಮತ್ತು 5 ಹೊಸ ತಂತ್ರಗಳೊಂದಿಗೆ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.ಇದುವರೆಗೆ ಒಂದು ಸ್ಥಳದಿಂದ ಮಾತ್ರ ಕೊರೆಯಲಾಗುತ್ತಿದ್ದ ಸುರಂಗವನ್ನು ಇನ್ನು 5 ಸ್ಥಳಗಳಿಂದ ಕೊರೆಯಲು ನಿರ್ಧರಿಸಲಾಗಿದೆ.

ಈ ಕುರಿತು ಭಾನುವಾರ ಮಾಹಿತಿ ನೀಡಿರುವ ಅಧಿಕಾರಿಗಳು, ಸುರಂಗದ ಒಂದು ಮುಖಭಾಗವಾದ ಸಿಲ್‌ಕ್ಯಾರಾದ ಕಡೆಯಿಂದ 60 ಮೀ. ದೂರದ ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿ 41 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಕಾರ್ಮಿಕರು ಸಿಕ್ಕಿಬಿದ್ದ ಸ್ಥಳ 2 ಕಿ.ಮೀ ಉದ್ದವಿದ್ದು ಸುಮಾರು 8.5 ಮೀಟರ್‌ ಎತ್ತರವಿದೆ. ಈ ಪ್ರದೇಶದ ಸುರಂಗವನ್ನು ಕಾಂಕ್ರೀಟೀಕರಣಗೊಳಿಸಲಾಗಿದೆ. ಈ ಪ್ರದೇಶದಿಂದ ಕಾರ್ಮಿಕರ ರಕ್ಷಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, 5 ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಾಚರಣೆ ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಉತ್ತರಾಖಂಡ ಸುರಂಗ ಕುಸಿದು 7 ದಿನ : ಇನ್ನೂ ಹೊರಬರದ 41 ಕಾರ್ಮಿಕರು: ಕುಟುಂಬಗಳಲ್ಲಿ ಆತಂಕ

ಪಂಚತಂತ್ರ:
ಸುರಂಗ ಕೊರೆಯುವ ಹೊಣೆಯನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಳಿ, ರೈಲ್‌ ವಿಕಾಸ ನಿಗಮ್‌ ಲಿ., ತೆಹ್ರಿ ಹೈಡ್ರೋಎಲೆಕ್ಟ್ರಿಕ್‌ ಅಭಿವೃದ್ಧಿ ಮಂಡಳಿ, ಸಟ್ಲೇಜ್‌ ಜಲ್‌ ವಿದ್ಯುತ್‌ ನಿಗಮ ಮತ್ತು ಆಯಿಲ್‌ ಅಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಶನ್‌ ವಹಿಸಿಕೊಂಡಿವೆ. ಈ ಐದೂ ಸಂಸ್ಥೆಗಳು 5 ಬೇರೆ ಬೇರೆ ಸ್ಥಳಗಳಿಂದ ಕಾರ್ಮಿಕರ ರಕ್ಷಣೆ ಮತ್ತು ಅವರಿಗೆ ಅಗತ್ಯ ಆಹಾರ, ನೀರು ಹಾಗೂ ಇತರೆ ವಸ್ತುಗಳ ಪೂರೈಕೆ ಸಲುವಾಗಿ ಕಾರ್ಯಾಚರಣೆ ನಡೆಸಲಿವೆ.

ಎಲ್ಲೆಲ್ಲಿ ಸುರಂಗ?:
ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ಈಗಾಗಲೇ ಸಿಲ್‌ಕ್ಯಾರಾ ಭಾಗದಿಂದ ಸುರಂಗ ಕೊರೆಯುವ ಕೆಲಸ ಆರಂಭಿಸಿದ್ದು, ಆಹಾರ ಪೂರೈಕೆಗೆ ಬಳಸುತ್ತಿರುವ ಒಂದು ಪೈಪ್‌ ಜೊತೆಗೆ ಮತ್ತೊಂದು 6 ಇಂಚಿನ ಪೈಪ್‌ಲೈನ್‌ ಅಳವಡಿಸುತ್ತಿದೆ. 60 ಮೀ.ನಲ್ಲಿ ಈಗಾಗಲೇ 39 ಮೀ.ಗಳನ್ನು ಪೂರ್ಣಗೊಳಿಸಿದೆ. ಇದು ಒಮ್ಮೆ ಪೂರ್ಣಗೊಂಡ ಬಳಿಕ ಹೆಚ್ಚುವರಿ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತದೆ.

ಸುರಂಗ ಕುಸಿದು ಒಳಗೆ ಸಿಲುಕಿದ 40 ಕಾರ್ಮಿಕರು: ಯಮುನೋತ್ರಿಗೆ ಸಂಪರ್ಕ ಕಲ್ಪಿಸುವ ಸುರಂಗ

ರೈಲ್‌ ವಿಕಾಸ್‌ ನಿಗಮ್‌ ಲಿಮಿಟೆಡ್‌ ಸಂಸ್ಥೆ ಸುರಂಗದ ಮೇಲ್ಭಾಗದಿಂದ ರಂಧ್ರ ಕೊರೆಯಲು ಆರಂಭಿಸಲಿದ್ದು, ಇಲ್ಲಿಂದಲೂ ಅಗತ್ಯ ಸಾಮಗ್ರಿಗಳನ್ನು ಪೂರೈಸಲಾಗುತ್ತದೆ. ತೆಹ್ರಿ ಹೈಡ್ರೋ ಎಲೆಕ್ಟ್ರಿಕ್‌ ಅಭಿವೃದ್ಧಿ ಮಂಡಳಿ ಸುರಂಗದ ಇನ್ನೊಂದು ತುದಿಯಾದ ಬಾರ್‌ಕೋಟ್‌ ಕಡೆಯಿಂದ ಸುರಂಗ ಕೊರೆಯುವ ಕೆಲಸ ಆರಂಭಿಸಲಿದ್ದು, ಇದಕ್ಕಾಗಿ ಅಗತ್ಯವಿರುವ ಎಲ್ಲಾ ಯಂತ್ರಗಳನ್ನು ಸಾಗಿಸಲಾಗಿದೆ.

ಸಟ್ಲೇಜ್‌ ಜಲ್‌ ವಿದ್ಯುತ್‌ ನಿಗಮ ಸುರಂಗದ ಮೇಲ್ಭಾಗದಿಂದ ಸುರಂಗ ಕೊರೆಯುವ ಕೆಲಸ ಮಾಡಲಿದ್ದು, ಇದಕ್ಕಾಗಿ 75 ಟನ್‌ ತೂಕದ ಸಾಮಾಗ್ರಿಗಳನ್ನು ಏರ್‌ಲಿಫ್ಟ್‌ ಮಾಡಲಾಗಿದೆ. ಆಯಿಲ್‌ ಅಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಶನ್‌ ಸಹ ಮೇಲ್ಭಾಗದಿಂದ ಸುರಂಗ ಕೊರೆಯಲಿದ್ದು, ಇದು ಬಾರ್‌ಕೋಟ್‌ ಕಡೆಯಿಂದ ತನ್ನ ಕೆಲಸ ಆರಂಭಿಸಲಿದೆ.

ಆಹಾರ, ನೀರು, ಅನಿಲ ಪೂರೈಕೆ ಹೇಗೆ?
ಸುರಂಗದಲ್ಲಿ ಭೂಕುಸಿತ ಸಂಭವಿಸುವ ಮುನ್ನವೇ ಸುರಂಗದೊಳಗಿನ ಕಾರ್ಮಿಕರಿಗೆ ಉಸಿರಾಟದ ತೊಂದರೆ ಆಗದಿರಲೆಂದು ಪೈಪ್‌ ಅಳವಡಿಸಲಾಗಿತ್ತು. ಅದರ ಮೂಲಕ ಸುರಂಗದೊಳಗೆ ಆಮ್ಲಜನಕ ಪೂರೈಸಲಾಗುತ್ತಿತ್ತು. ಪೈಪ್‌ ಹೋಗಿದ್ದ ಮಾರ್ಗದಲ್ಲೇ ಭೂಕುಸಿತ ಸಂಭವಿಸಿದರೂ ಅದೃಷ್ಟವಶಾತ್‌ ಪೈಪ್‌ಗೆ ಏನೂ ಆಗಿರಲಿಲ್ಲ. ಆ ಪೈಪ್‌ ಮೂಲಕವೇ ಕಾರ್ಮಿಕರಿಗೆ ವಾಕಿ ಟಾಕಿ ಕಳುಹಿಸಿ ಸಂವಹನ ನಡೆಸಲಾಗುತ್ತಿದೆ. ಜೊತೆಗೆ ಅವರಿಗೆ ಅದರ ಮೂಲಕವೇ ಆಮ್ಲಜನಕ, ನೀರು, ಆಹಾರ ಪದಾರ್ಥ ಪೂರೈಸಲಾಗುತ್ತಿದೆ.

Uttarkashi Avalanche ನಾಲ್ಕು ಮೃತದೇಹ ಹೊರಕ್ಕೆ, ನಾಪತ್ತೆಯಾಗಿರುವ 27 ಮಂದಿಗಾಗಿ ರಕ್ಷಣಾಕಾರ್ಯ!

ಸುರಂಗದಲ್ಲಿ ಸಿಲುಕಿದ ಕಾರ್ಮಿಕರಿಗೆ ಖಿನ್ನತೆ ತಡೆ, ವಿಟಮಿನ್‌ ಮಾತ್ರೆ
ಉತ್ತರಕಾಶಿ: ಉತ್ತರಾಖಂಡದ ಸಿಲ್‌ಕ್ಯಾರಾ ಬೆಟ್ಟದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಭಾನುವಾರ 8ನೇ ದಿನ ಪೂರೈಸಿದೆ. ಇದೇ ವೇಳೆ, ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ವಿಟಮಿನ್‌ ಮಾತ್ರೆಗಳು ಹಾಗೂ ಖಿನ್ನತೆ ನಿಗ್ರಹಕ್ಕೆ ಮಾತ್ರೆಗಳನ್ನು ನೀಡಿರುವುದಾಗಿ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.