ವೀರೇಂದ್ರ ಹೆಗ್ಗಡೆ, ಪಿಟಿ ಉಷಾ, ವಿಜಯೇಂದ್ರ ಪ್ರಸಾದ್‌, ಇಳಯರಾಜ ರಾಜ್ಯಸಭೆಗೆ ನಾಮನಿರ್ದೇಶನ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ದೇಶ ಕಂಡ ಶ್ರೇಷ್ಠ ಅಥ್ಲೀಟ್‌ಗಳಲ್ಲಿ ಒಬ್ಬರಾದ ಪಿಟಿ ಉಷಾ, ತೆಲುವು ಚಿತ್ರರಂಗದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ, ಖ್ಯಾತ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್‌, ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರನ್ನು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ.
 

Veerendra Heggade PT Usha V Vijayendra Prasad nominated to the Rajya Sabha san

ನವದೆಹಲಿ (ಜುಲೈ 6): ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Veerendra Heggade), ಕೇರಳದ ಮಾಜಿ ಅಥ್ಲೀಟ್‌ ಪಿಟಿ ಉಷಾ (PT Usha) , ಆಂಧ್ರಪ್ರದೇಶದ ವಿ.ವಿಜಯೇಂದ್ರ ಪ್ರಸಾದ್‌ (V. Vijayendra Prasad ), ತಮಿಳುನಾಡಿನ ಇಳಯರಾಜ (Ilaiyaraaja) ಅವರನ್ನು ರಾಜ್ಯಸಭೆಗೆ (Rajya Sabha) ನಾಮನಿರ್ದೇಶನ ಮಾಡಲಾಗಿದೆ.

ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿ ಶುಭ ಕೋರಿದ್ದಾರೆ. "ಶವೀರೇಂದ್ರ ಹೆಗ್ಗಡೆಯವರು ಅತ್ಯುತ್ತಮ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಮತ್ತು ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಅವರು ಮಾಡುತ್ತಿರುವ ಮಹತ್ತರವಾದ ಕಾರ್ಯವನ್ನು ವೀಕ್ಷಿಸಲು ನನಗೆ ಅವಕಾಶವಿದೆ. ಅವರು ಖಂಡಿತವಾಗಿಯೂ ಸಂಸತ್ತಿನ ಕಲಾಪಗಳನ್ನು ಪುಷ್ಟೀಕರಿಸುತ್ತಾರೆ' ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಪಿ.ಟಿ.ಉಷಾ, ವಿ.ವಿಜಯೇಂದ್ರ ಪ್ರಸಾದ್, ವೀರೇಂದ್ರ ಹೆಗ್ಗಡೆ ಮತ್ತು ಇಳಯರಾಜ ಅವರನ್ನು ಅಭಿನಂದಿಸಿ ಪ್ರಧಾನಿ ಮೋದಿ ವೈಯಕ್ತಿಕ ಟ್ವೀಟ್‌ ಅನ್ನೂ ಮಾಡಿದ್ದಾರೆ. "ಪಿಟಿ ಉಷಾ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದ್ದಾರೆ. ಕ್ರೀಡೆಯಲ್ಲಿ ಅವರ ಸಾಧನೆಗಳ ಬಗ್ಗೆ ವ್ಯಾಪಕವಾಗಿ ಎಲ್ಲರಿಗೂ ತಿಳಿಸಿದೆ. ಕಳೆದ ಕೆಲವು ವರ್ಷಗಳಿಂದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುವ ಅವರ ಕೆಲಸವು ಶ್ಲಾಘನೀಯವಾಗಿದೆ. ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದಕ್ಕಾಗಿ ಅಭಿನಂದನೆಗಳು' ಎಂದು ಮೋದಿ, ಪಿಟಿ ಉಷಾ ಕುರಿತಾಗಿ ಟ್ವೀಟ್‌ ಮಾಡಿದ್ದಾರೆ.


ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ ಹಾಗೂ ಪ್ರಖ್ಯಾತ ಚಿತ್ರಕಥೆಗಾರ ವಿ.ವಿಜಯೇಂದ್ರ ಪ್ರಸಾದ್‌ ಅವರನ್ನು ನಾಮನಿರ್ದೇಶನ ಮಾಡಿರುವ ಸುದ್ದಿಯನ್ನು ಪ್ರಕಟಿಸಿ ಟ್ವೀಟ್ ಮಾಡಿರುವ ಮೋದಿ, "ವಿ.ವಿಜಯೇಂದ್ರ ಅವರು ದಶಕಗಳಿಂದ ಸೃಜನಾತ್ಮಕ ಲೋಕದೊಂದಿಗೆ ನಂಟು ಹೊಂದಿದ್ದಾರೆ. ಅವರ ಕೃತಿಗಳು ಭಾರತದ ವೈಭವಯುತ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಮತ್ತು ಜಾಗತಿಕವಾಗಿ ತಮ್ಮ ಛಾಪು ಮೂಡಿಸಿವೆ. ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಕ್ಕೆ ಅಭಿನಂದನೆಗಳು' ಎಂದು ಬರೆದಿದ್ದಾರೆ.


ಯುಗದಿಂದ ಯುಗಕ್ಕೆ ಇಳಯರಾಜ ಅವರ ಸಂಗೀತ ಸಾಕಷ್ಟು ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿದೆ. ಅವರ ಅನೇಕ ಸೃಷ್ಟಿಗಳು ಭಾವನೆಗಳನ್ನು ಬಹಳ ಸುಂದರವಾಗಿ ಚಿತ್ರಿಸಿದೆ. ಅವರ ಜೀವನ ಪಯಣ ಕೂಡ ಸ್ಫೂರ್ತಿದಾಯಕವಾಗಿದೆ. ವಿನಮ್ರ ಹಿನ್ನಲೆಯಿಂದ ಬಂದು ಇಂದು ಅಪಾರ ಸಾಧನೆ ಮಾಡಿದ್ದಾರೆ. ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.


ಯಾಂತ್ರಿಕೃತ ಭತ್ತ ಬೇಸಾಯ, ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆ ಚಾಲನೆ

20ನೇ ವಯಸ್ಸಿನಲ್ಲಿ ಧರ್ಮಸ್ಥಳದ ದೇವಸ್ಥಾನದ ಧರ್ಮಾಧಿಕಾರಿ ಪದವಿಗೆ ಏರಿದ್ದ ವೀರೇಂದ್ರ ಹೆಗ್ಗಡೆ ಅವರು, ಕಳೆದ ಐದು ದಶಕಗಳಿಂದ ಸಾಮಾಜಿಕ ಜೀವನದಲ್ಲಿರುವ ಇವರು, ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗದ ಉತ್ತೇಜನಕ್ಕಾಗಿ ವಿವಿಧ ಪರಿವರ್ತಕ ಉಪಕ್ರಮಗಳನ್ನು ಮುನ್ನಡೆಸಿದ್ದಾರೆ. ಸ್ವಯಂ ಉದ್ಯೋಗಾವಕಾಶಗಳ ಬಗ್ಗೆ ಅರಿವು ನೀಡಲು ಮತ್ತು ಗ್ರಾಮೀಣ ಯುವಕರಿಗೆ ತರಬೇತಿ ನೀಡಲು ಅವರು ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (RDSETI) ಅನ್ನು ಸ್ಥಾಪನೆ ಮಾಡಿದ್ದಾರೆ. ಅವರ ಈ ಯಶಸ್ವಿ ಮಾದರಿಯನ್ನು ಕೇಂದ್ರ ಸರ್ಕಾರ ಕೂಡ ಬಳಸಿಕೊಂಡು, ದೇಶದಾದ್ಯಂತ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳನ್ನು (RSETIs) ಸ್ಥಾಪಿಸಿತು.· ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕದ ಸಮಗ್ರ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕಾಗಿ ಕಾರ್ಯಕ್ರಮವನ್ನೂ ಸಹ ಯೋಜನೆ ಮಾಡಿದ್ದಾರೆ. ಪ್ರಸ್ತುತ, ಯೋಜನೆಯು 6 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳನ್ನು ಮತ್ತು 49 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.

ಅಡಕೆ ಕಳ್ಳಸಾಗಣೆ: ಪ್ರಧಾನಿ ಮೋದಿಗೆ ಪತ್ರ ಬರೆದು ವೀರೇಂದ್ರ ಹೆಗ್ಗಡೆ ಕಳವಳ

25ಕ್ಕೂ ಅಧಿಕ ಶಾಲೆಗಳು ಮತ್ತು ಕಾಲೇಜುಗಳ ಮೂಲಕ ಗುಣಮಟ್ಟದ ಮತ್ತು ಕೈಗೆಟುಕುವ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಟ್ರಸ್ಟ್‌ನ ಮುಖ್ಯಸ್ಥರಾಗಿದ್ದಾರೆ. ಇವುಗಳ ಹೊರತಾಗಿ, ಗುಣಮಟ್ಟದ ಆರೋಗ್ಯ ರಕ್ಷಣೆ, ಸಾಮಾಜಿಕ ಕಲ್ಯಾಣ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಅವರು ಹಲವಾರು ಕಾರ್ಯಕ್ರಮಗಳನ್ನು ಮುನ್ನಡೆಸಿದ್ದಾರೆ. ಸೇವೆ ಹಾಗೂ ಆಧ್ಯಾತ್ಮಿಕತೆ ಹೇಗೆ ಸುಂದರವಾಗಿ ವಿಲೀನಗೊಳ್ಳುತ್ತದೆ ಎನ್ನುವುದಕ್ಕೆ ವೀರೇಂದ್ರ ಹೆಗ್ಗಡೆಯವರೇ ಸಾಕ್ಷಿ ಎಂದು ಕೇಂದ್ರ ಸರ್ಕಾರ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಅವರು ನೀಡಿದ ಸೇವೆಗಾಗಿ ಕೇಂದ್ರ ಸರ್ಕಾರ 2015ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನೂ ನೀಡಿ ಗೌರವಿಸಿತ್ತು ಎಂದು ಬರೆದಿದೆ.

Latest Videos
Follow Us:
Download App:
  • android
  • ios