Asianet Suvarna News Asianet Suvarna News

ಯಾಂತ್ರಿಕೃತ ಭತ್ತ ಬೇಸಾಯ, ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆ ಚಾಲನೆ

* ಯಾಂತ್ರಿಕೃತ ಭತ್ತ ಬೇಸಾಯ, ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆ ಚಾಲನೆ
 * ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆ ಚಾಲನೆ
* ಕ್ಷೀಣಿಸುತ್ತಿರುವ ಭತ್ತ ಬೇಸಾಯ ಪ್ರದೇಶವನ್ನು ಪುನಶ್ಚೇತನಗೊಳಿಸಲು ಈ ಯೋಜನೆ

Veerendra Heggade inaugurates mechanized paddy farming in Udupi rbj
Author
Bengaluru, First Published Jun 28, 2022, 3:43 PM IST

ಉಡುಪಿ, (ಜೂನ್.28): ಭತ್ತ ಕೃಷಿ ಕರಾವಳಿ ಭಾಗದ ಜೀವನಾಡಿಯಾಗಿತ್ತು . ಆದರೆ ಕಾಲಕ್ರಮೇಣ ವ್ಯವಸಾಯದಿಂದ ಜನ ದೂರವಾದರು. ಸಾವಿರಾರು ಎಕರೆ ಭೂಮಿ ಪಾಳು ಬಿದ್ದಿದ್ದು ಗದ್ದೆಗಳಾಗಿವೆ. ಭತ್ತದ ಕೃಷಿಯನ್ನು ಪ್ರೋತ್ಸಾಹಿಸಲು ಹಡಿಲು ಭೂಮಿಯನ್ನು ಹಸನುಗೊಳಿಸುವ ನಾನಾ ಪ್ರಯೋಗಗಳು ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿವೆ . ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಅಡಿಲು ಭೂಮಿ ದತ್ತು ಪಡೆದು ಕೃಷಿ ಮಾಡುವ ಕಾಯಕ ಕಳೆದ ಬಾರಿ ಯಶಸ್ವಿಯಾಗಿತ್ತು . ಈ ಬಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯವರು ದೊಡ್ಡಪ್ರಮಾಣದಲ್ಲಿ ರಾಜ್ಯಾದ್ಯಂತ ಭತ್ತದ ಕೃಷಿ ಪ್ರೋತ್ಸಾಹಿಸುವ ಕಾರ್ಯಕ್ರಮ ನಡೆಸುತ್ತಿದ್ದಾರೆ .

ಶ್ರೀ ಕ್ಷೇತ್ರ ಧರ್ಮಸ್ಥಾಳ ಗ್ರಾಮಾಭಿವೃದ್ದಿ ಯೋಜನೆಯ ಅಡಿಯಲ್ಲಿ 2022-23 ನೇ ಸಾಲಿನಲ್ಲಿ ರಾಜ್ಯದ 20000 ಹೆಕ್ಟೇರ್‌ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ ಯಾಂತ್ರಿಕೃತ ಭತ್ತ ಬೇಸಾಯ ಯಂತ್ರಶ್ರೀ ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು.ಬ್ರಹ್ಮಾವರ ತಾಲೂಕಿನ ಬಾರ್ಕೂರಿನ ಶ್ರೀನಿವಾಸ ಉಡುಪರ ಕೃಷಿ ಪ್ರದೇಶದಲ್ಲಿ ರಾಜ್ಯಮಟ್ಟದ ಕೃಷಿ ಕ್ರಾಂತಿಗೆ ಚಾಲನೆ ನೀಡಿದರು. 

ಕಡಿಮೆ ಖರ್ಚಿನಲ್ಲಿ ಯಾಂತ್ರೀಕೃತ ಭತ್ತದ ನಾಟಿ

ಗ್ರಾಮಾಭಿವೃದ್ಧಿ ಯೋಜನೆಯು ಕಳೆದ ನಾಲ್ಕು ದಶಕಗಳಿಂದ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರ ಸರ್ವತೋಮುಖ ಅಭಿವೃದ್ಧಿ ಮತ್ತು ನೆಮ್ಮದಿಯ ನಾಳೆಗಾಗಿ ಶ್ರಮವಹಿಸುತ್ತಿದೆ. ವಿವಿಧ ಕೃಷಿ ವಿಸ್ತರಣೆ ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾಲಾನುಸಾರ ನೀಡುತ್ತಾ ಬಂದಿದೆ. ಕ್ಷೀಣಿಸುತ್ತಿರುವ ಭತ್ತ ಬೇಸಾಯ ಪ್ರದೇಶವನ್ನು ಪುನಶ್ಚೇತನಗೊಳಿಸಲು ಯೋಜನೆಯ ವತಿಯಿಂದ ಶ್ರೀ ಪದ್ದತಿ, ಯಾಂತ್ರೀಕರಣ, ರೈತ ಉತ್ಪಾದಕ ಸಂಸ್ಥೆ ರಚನೆ ಮುಂತಾದ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. 

2010-14ರ ಅವಧಿಯಲ್ಲಿ ನಬಾರ್ಡ್ ಸಹಕಾರದೊಂದಿಗೆ ರೈತರಿಗೆ ಪ್ರೇರಣೆ ನೀಡಿ ಭತ್ತ ಬೇಸಾಯದಲ್ಲಿ ”ಶ್ರೀ ಪದ್ಧತಿ” ಹಾಗೂ 2014-20 ರ ಅವಧಿಯಲ್ಲಿ ಕರ್ನಾಟಕ ಸರಕಾರದ ಸಹಯೋಗದೊಂದಿಗೆ ‘ಕೃಷಿ ಯಂತ್ರಧಾರ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ ರೈತ ಸಮುದಾಯದ ಆದಾಯ ವೃದ್ಧಿಗೆ ಸಹಕಾರ ನೀಡಲಾಗಿದೆ.

ಈ ಎರಡೂ ಕಾರ್ಯಕ್ರಮಗಳನ್ನು ಜೋಡಿಸಿ ರೈತರಿಗೆ ಪ್ರೇರಣೆ ನೀಡಲು ಭತ್ತ ಬೇಸಾಯದ ಯಾಂತ್ರಿಕರಣ “ಯಂತ್ರಶ್ರೀ” ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಹೆಸರೇ ಸೂಚಿಸುವಂತೆ ಭತ್ತ ಬೇಸಾಯವನ್ನು ಸಂಪೂರ್ಣ ಯಾಂತ್ರೀಕರಣಕ್ಕೊಳಪಡಿಸಿ ಉಳುಮೆಯಿಂದ ಒಕ್ಕಣೆಯವರೆಗೆ ಯಂತ್ರೋಪಕರಣಗಳನ್ನು ರೈತರಿಗೆ ಅವರ ಹೊಲದ ಬಾಗಿಲಿಗೆ ರಿಯಾಯಿತಿ ಬಾಡಿಗೆ ದರದಲ್ಲಿ ಒದಗಣೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. 

ಕಳೆದ 2 ವರ್ಷಗಳಿಂದ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಅನುಷ್ಠಾನಿಸಲಾಗುತ್ತಿದ್ದು ‘ಯಂತ್ರಶ್ರೀ ಕರಾವಳಿಯ ರೈತರಿಗೆ ಬಹಳಷ್ಟು ಉಪಯೋಗವಾಗಿದೆ. ಹೀಗಾಗಿ ಇದನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸಲಾಗುತ್ತಿದೆ.

ಇದರನ್ವಯ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಒಟ್ಟು 20,000 ಹೆಕ್ಟೇರ್ ಪ್ರದೇಶದಲ್ಲಿ ಯಂತ್ರಶ್ರೀ” ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಗುರಿ ಹೊಂದಲಾಗಿದೆ. ಈ ಬೃಹತ್ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದರು .

ಯಂತ್ರಶ್ರೀ ಯೋಜನೆಗೆ ಚಾಲನೆ
ಬ್ರಹ್ಮಾವರ ತಾಲೂಕಿನ ಬಾರ್ಕೂರಿಮ ಶ್ರೀನಿವಾಸ ಉಡುಪರ ಕೃಷಿ ಪ್ರದೇಶದಲ್ಲಿ ಈ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದ್ದು,ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೀರೇಂದ್ರ ಹೆಗ್ಗಡೆಯವರು, ಶುಭ ಹಾರೈಸಿದರು. ಕೇಂದ್ರ ರಾಜ್ಯ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ  ಯಂತ್ರಶ್ರೀ ಸಾಧಕರಿಗೆ ಪ್ರಮಾಣ ಪತ್ರ ವಿತರಣೆಯನ್ನು ನೆರವೇರಿಸಿಕೊಟ್ಟರು.  ನರ್ಸರಿ ಟ್ರೇ ವಿತರಣೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ನೆರವೇರಿಸಿದರು. 

ರೈತರಿಗೆ ಭತ್ತ ಯಾಂತ್ರೀಕರಣದ ಕೌಶಲ್ಯವನ್ನು ತೋರಿಸಿಕೊಡಲು ಉಳುಮೆಯಿಂದ ಮೊದಲ್ಗೊಂಡು ಒಕ್ಕಣೆಯವರೆಗೆ ಬಳಕೆ ಮಾಡುವ ಮಾನವ ಚಾಲಿತ ಮತ್ತು ಸ್ವಯಂ ಚಾಲಿತ ಯಂತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.ನುರಿತ ತಜ್ಞರು, ಯಂತ್ರೋಪಕರಣಗಳ ಬಳಕೆಯ ಮಾಹಿತ ಮಾರ್ಗದರ್ಶನ ನೀಡಿದರು. ಹಸಿರೆಲೆ ಗೊಬ್ಬರ ಗಿಡ ತಯಾರಿ, ನರ್ಸರಿ ತಯಾರಿ ಮತ್ತು ಭತ್ತ ನಾಟಿ ಯಂತ್ರದ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಯಂತ್ರಶ್ರೀ ಯೋಜನೆಯಲ್ಲಿ ಸಾಧನೆ ಮಾಡಿದ ವಿವಿಧ ಸಾಧಕರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯ್ತು.

Follow Us:
Download App:
  • android
  • ios