ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ಪಕ್ಷ ಬಹುಮತದ ಅಂಚಿನಲ್ಲಿದೆ. ವಿಜಯ್‌ರನ್ನು ಅಧಿಕಾರದಿಂದ ದೂರವಿಡಲು, ದ್ರಾವಿಡ ಪಕ್ಷಗಳು 2 ಸ್ಥಾನ ಗೆದ್ದ ವಿಸಿಕೆ ನಾಯಕ ತಿರುಮಾವಳವನ್ ಅವರನ್ನೇ ಮುಖ್ಯಮಂತ್ರಿ ಮಾಡುವ ಅಚ್ಚರಿಯ ತಂತ್ರ ರೂಪಿಸುತ್ತಿವೆ.
ಚೆನ್ನೈ (ಮೇ.9): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ 'ಟಿವಿಕೆ' ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚಿಸಲು ಅಗತ್ಯವಿರುವ ಬಹುಮತದ ಗಡಿ (118) ತಲುಪಲು ವಿಫಲವಾಗಿದೆ. ಈ ಅತಂತ್ರ ಸ್ಥಿತಿಯ ನಡುವೆಯೇ ಈಗ ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ಆರಂಭವಾಗಿದ್ದು, ಕೇವಲ 2 ಸ್ಥಾನ ಗೆದ್ದಿರುವ ವಿಸಿಕೆ (VCK) ಮುಖ್ಯಸ್ಥ ತೋಳ್ ತಿರುಮಾವಳವನ್ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ಶುರುವಾಗಿದೆ.

ದಳಪತಿ ವಿಜಯ್ ಅವರ ಟಿವಿಕೆ ಸದ್ಯ 116 ಶಾಸಕರ ಬೆಂಬಲ ಹೊಂದಿದೆ (ಟಿವಿಕೆ 107, ಕಾಂಗ್ರೆಸ್ 5, ಎಡಪಕ್ಷಗಳು 4). ಬಹುಮತಕ್ಕೆ ಇನ್ನು ಕೇವಲ 2 ಶಾಸಕರ ಕೊರತೆಯಿದೆ. ವಿಸಿಕೆ ಪಕ್ಷವು 2 ಸ್ಥಾನಗಳನ್ನು ಗೆದ್ದಿದ್ದು, ಒಂದು ವೇಳೆ ಅವರು ವಿಜಯ್‌ಗೆ ಬೆಂಬಲ ನೀಡಿದರೆ ಟಿವಿಕೆ ಸರ್ಕಾರ ರಚನೆ ಸುಗಮವಾಗಲಿದೆ. ಇಂದು ಸಂಜೆ 4 ಗಂಟೆಗೆ ವಿಜಯ್ ತಮ್ಮ ಮುಂದಿನ ನಿಲುವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ, ವಿಸಿಕೆಯ ಇಬ್ಬರು ಶಾಸಕರ ಪೈಕಿ ಒಬ್ಬರು ಇನ್ನೂ ಚೆನ್ನೈ ತಲುಪಿಲ್ಲ. ಇಬ್ಬರ ಸಹಿ ಸಿಕ್ಕ ಬಳಿಕವಷ್ಟೇ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ವಿಸಿಕೆ ಪಟ್ಟು ಹಿಡಿದಿದೆ. ಅತ್ತ ಟಿಟಿವಿ ದಿನಕರನ್ ಅವರ ಎಎಮ್‌ಎಂಕೆ ಮತ್ತು ಐಯುಎಂಎಲ್ ಈಗಾಗಲೇ ವಿಜಯ್‌ಗೆ ಬೆಂಬಲ ನೀಡಲು ನಿರಾಕರಿಸಿವೆ.
ದ್ರಾವಿಡ ಪಕ್ಷಗಳ 'ಅಪವಿತ್ರ' ಮೈತ್ರಿ ಮತ್ತು ಮಾಸ್ಟರ್ ಪ್ಲಾನ್!
ಕಳೆದ 60 ವರ್ಷಗಳಿಂದ ಪರಸ್ಪರ ಬದ್ಧ ವೈರಿಗಳಾಗಿದ್ದ ಡಿಎಂಕೆ (59 ಸೀಟು) ಮತ್ತು ಎಐಎಡಿಎಂಕೆ (47 ಸೀಟು), ವಿಜಯ್ ಎಂಬ ಸುನಾಮಿಯನ್ನು ತಡೆಯಲು ಈಗ ಒಂದಾಗುವ ಮಾತುಕತೆ ನಡೆಸುತ್ತಿವೆ. ಈ ಎರಡೂ ಪಕ್ಷಗಳ ಒಟ್ಟು ಬಲ 106 ಆಗುತ್ತದೆ. ಈ ಮೈತ್ರಿಗೆ ವಿಸಿಕೆಯ 2 ಶಾಸಕರು ಸೇರಿದರೆ ಒಟ್ಟು ಸಂಖ್ಯೆ 108 ಆಗಲಿದೆ. ಆದರೆ, ಇಲ್ಲಿನ ಅಸಲಿ ಟ್ವಿಸ್ಟ್ ಎಂದರೆ, ವಿಜಯ್ ಅವರನ್ನು ಅಧಿಕಾರದಿಂದ ದೂರವಿಡಲು ದ್ರಾವಿಡ ಪಕ್ಷಗಳು ವಿಸಿಕೆ ಮುಖ್ಯಸ್ಥ ತಿರುಮಾವಳವನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಸಮಾಲೋಚನೆ ನಡೆಸುತ್ತಿವೆ ಎನ್ನಲಾಗಿದೆ.
ಸಾಧ್ಯವೇ ಈ ಲೆಕ್ಕಾಚಾರ?
ಒಕ್ಕೂಟ ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ. ಆದರೆ ಇಲ್ಲಿಯೂ ಒಂದು ತಾಂತ್ರಿಕ ಅಡಚಣೆಯಿದೆ. ಡಿಎಂಕೆ+ಎಐಎಡಿಎಂಕೆ+ವಿಸಿಕೆ ಸೇರಿದರೂ ಒಟ್ಟು ಸಂಖ್ಯೆ 108 ಮಾತ್ರ ಆಗುತ್ತದೆ. ಇದು ವಿಜಯ್ ಅವರ ಮೈತ್ರಿಕೂಟದ ಬಲಕ್ಕಿಂತ (116) ಕಡಿಮೆ. ಬಹುಮತಕ್ಕೆ ಬೇಕಾದ 118 ತಲುಪಲು ಈ 'ಮಹಾಮೈತ್ರಿ'ಗೆ ಇನ್ನೂ ಹೆಚ್ಚಿನ ಶಾಸಕರ ಅಗತ್ಯವಿದೆ. ಯಾರು ಯಾರಿಗೆ ಗಾಳ ಹಾಕಲಿದ್ದಾರೆ? ಅಂತಿಮವಾಗಿ ತಮಿಳುನಾಡಿನ ಸಿಎಂ ಪೀಠ ಯಾರ ಪಾಲಾಗಲಿದೆ ಎಂಬುದು ಈಗ ಇಡೀ ದೇಶದ ಕುತೂಹಲ ಕೆರಳಿಸಿದೆ.


