ಟೊಮೆಟೊ ಇದೀಗ ಅತ್ಯಂತ ದುಬಾರಿ. ಹಲವು ರಾಜ್ಯಗಳಲ್ಲಿ 200ರ ಗಡಿ ದಾಟಿದೆ. ರಾತ್ರೋರಾತ್ರೋ ಹೊಲದಿಂದ ಟೊಮೆಟೊ ಕದ್ದೊಯ್ದ ಘಟನೆಯೂ ನಡೆದಿದೆ. ಕೆಲ ಟೊಮೆಟೋ ಮಾರುಕಟ್ಟೆಯಲ್ಲಿ ಜಗಳವೇ ನಡೆದು ಹೋಗಿದೆ. ಹೀಗಾಗಿ ಈ ಉಸಾಬರಿ ಬೇಡ ಎಂದು ತರಕಾರಿ ವ್ಯಾಪಾರಿಯೊಬ್ಬ ಟೊಮೆಟೊ ಕಾಯಲು ಇಬ್ಬರು ಬೌನ್ಸರ್ ನೇಮಕ ಮಾಡಿದ್ದಾರೆ.
ವಾರಣಾಸಿ(ಜು.09) ದೇಶದಲ್ಲಿ ಇದೀಗ ಟೊಮೆಟೊ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಬಹುಚೇಕ ಕಡೆ ಟೊಮೆಟೊ ಬೆಲೆ 200 ರೂಪಾಯಿ ಗಡಿ ದಾಡಿದೆ. ಟೊಮೆಟೊಗೆ ಚಿನ್ನದ ಬೆಲೆಯಾಗಿರುವ ಕಾರಣ ಇದೀಗ ಮಾರಾಟಕ್ಕಿಂತ ಅದನ್ನು ಕಾಯುವುದೇ ಅತೀ ದೊಡ್ಡ ತಲೆನೋವಾಗಿದೆ. ರೈತರು ತಮ್ಮ ಟೊಮೆಟೊ ಬೆಳೆಯನ್ನು ಹಗಲು ರಾತ್ರಿ ಕಾಯುತ್ತಿದ್ದಾರೆ. ಆದರೂ ಕದ್ದೊಯ್ದ ಪ್ರಕರಣ ವರದಿಯಾಗಿದೆ.ಇನ್ನು ಅಂಗಡಿ, ಮಾರುಕಟ್ಟೆಗಳಲ್ಲಿ ಟೊಮೆಟೋ ಖರೀದಿ ವೇಳೆ ಚೌಕಾಸಿಗಳು ನಡೆದು ಹಲ್ಲೆಗಳು ನಡೆದಿದೆ. ಹೀಗಾಗಿ ಅಂಗಡಿಗಳಲ್ಲಿ ಟೊಮೆಟೋ ಮಾರಾಟವೇ ಸವಾಲಾಗಿದೆ. ಇದೀಗ ವಾರಣಾಸಿ ತರಕಾರಿ ವ್ಯಾಪಾರಿ ತನ್ನ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ಟೊಮೆಟೊ ಕಾಯಲು ಇಬ್ಬರು ಬೌನ್ಸರ್ ನೇಮಕ ಮಾಡಿದ್ದಾನೆ. ವ್ಯಾಪಾರಿಯ ಈ ನಡೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಉತ್ತರ ಪ್ರದೇಶದ ವಾರಣಸಿಯ ತರಕಾರಿ ವ್ಯಾಪಾರಿ ಅಜಯ್ ಫೌಜಿ ಟೊಮೆಟೊ ಕಾಯಲು ಇಬ್ಬರು ಬೌನ್ಸರ್ ನೇಮಿಸಿ ಭಾರತದಲ್ಲಿ ಸುದ್ದಿಯಾಗಿದ್ದಾರೆ. ಟೊಮೆಟೊ ಬೆಲೆ ಗಗನಕ್ಕೇರಿದೆ. ಹಲವೆಡೆ ಟೊಮೆಟೊಗಾಗಿ ಹಲ್ಲೆ, ಹೊಡೆದಾಟ ನಡೆದಿದೆ. ಕೆಲವೆಡೆ ಟೊಮೊಟೊ ಕಳ್ಳತನ ನಡೆದ ಘಟನೆಗಳು ನಡೆದಿದೆ. ಹೀಗಾಗಿ ಈ ಸಮಸ್ಯೆ ಇಲ್ಲಿ ಆಗಬಾರದು ಎಂದು ಇಬ್ಬರು ಬೌನ್ಸರ್ ನೇಮಕ ಮಾಡಿದ್ದೇನೆ ಎಂದು ಅಜಯ್ ಫೌಜಿ ಹೇಳಿದ್ದಾರೆ.
15 ದಿನದಲ್ಲಿ ಟೊಮೆಟೋ ಬೆಲೆ ಇಳಿಕೆ; ತೊಗರಿ ಬೇಳೆ ಬೆಲೆ ಕಡಿಮೆ ಮಾಡಲು ಹೆಚ್ಚು ಆಮದು: ಕೇಂದ್ರ ಸರ್ಕಾರ
ಟೊಮೆಟೊ ಬೆಲೆ ಯಾವ ರೀತಿ ಏರಿಕೆಯಾಗಿದೆ ಎಂದು ನಿಮಗೆ ಗೊತ್ತಿದೆ. ನಮ್ಮಲ್ಲಿ ಟೊಮೆಟೊ ಮಾರಟಕ್ಕೆ ಇಡಲಾಗಿದೆ. ಆದರೆ ಇಲ್ಲಿ ವಾದ , ವಿವಾದ, ಜಗಳ, ಹಲ್ಲೆಗಳು ನಡೆಯಬಾರದು. ಮೊದಲೇ ದುಬಾರಿಯಾಗಿರುವ ಟೊಮೆಟೊ ಕದ್ದೊಯ್ದರೆ ನಮ್ಮ ಪಾಡೇನು? ಹೀಗಾಗಿ ಈ ಸಮಸ್ಯೆಗಳು ತಲೆದೋರದಂತೆ ನೋಡಿಕೊಳ್ಳಲು ಬೌನ್ಸರ್ ನೇಮಕ ಮಾಡಿದ್ದೇನೆ. ನಾವು ಕೆಜಿಗೆ 160 ರೂಪಾಯಿಯಂತೆ ಟೊಮೆಟೋ ಮಾರಾಟ ಮಾಡುತ್ತಿದ್ದೇವೆ. ಗ್ರಾಹಕರು 100 ಗ್ರಾಂ, 50 ಗ್ರಾಂ ಖರೀದಿಸುತ್ತಿದ್ದಾರೆ ಎಂದು ಅಜಯ್ ಫೌಜಿ ಹೇಳಿದ್ದಾರೆ.
ಟೊಮೆಟೊ ಪಕ್ಕದಲ್ಲೇ ನಿಂತುಕೊಂಡಿರುವ ಇಬ್ಬರು ಬೌನ್ಸರ್ ಗ್ರಾಹಕರನ್ನು ಎಚ್ಚರಿಸುತ್ತಿದ್ದಾರೆ. ಗ್ರಾಹಕರನ್ನು ಟೊಮೆಟೊ ಮುಟ್ಟಲು ಈ ಬೌನ್ಸರ್ ಬಿಡುತ್ತಿಲ್ಲ. ನಿಮಗೆ ಎಷ್ಟು ಟೊಮೆಟೊ ಬೇಕು ಅಷ್ಟನ್ನು ಮಾಲೀಕರ ಬಳಿ ಕೇಳಿ. ಅವರು ಕೊಡುತ್ತಾರೆ. ಸುಖಾಸುಮ್ಮನ ಟೊಮೆಟೊ ಮುಟ್ಟಿ ಹಾಳುಮಾಡಬೇಡಿ ಎಂದು ಬೌನ್ಸರ್ ಗದರಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಅಜಯ್ ಫೌಜಿ ಅಂಗಡಿಯಲ್ಲಿ ಟೊಮೆಟೊ ಖರೀದಿಸಲು ಹೊಗುವ ಗ್ರಾಹಕರಿಗೆ ಇದೀಗ ಬೌನ್ಸರ್ ದರ್ಶನವಾಗುತ್ತಿದೆ. ಟೊಮೆಟೊ ಮುಟ್ಟಲು ಮಾತ್ರವಲ್ಲ, ಹತ್ತಿರದಿಂದ ದಿಟ್ಟಿಸಿ ನೋಡಲು ಕೂಡ ಬಿಡುತ್ತಿಲ್ಲ.
ಟೊಮೆಟೋ ನಂತರ 100 ರೂ. ದಾಟಿದ ಬೀನ್ಸ್, ಕ್ಯಾರೆಟ್: ಬೆಲೆ ಕೇಳಿ ಹೌಹಾರಿದ ಗ್ರಾಹಕ...!
ಕರ್ನಾಟಕದ ಬಹುತೇಕ ಕಡೆ ಟೊಮೆಟೊ ಬೆಲೆ 160 ರೂಪಾಯಿ ಗಡಿ ದಾಟಿದೆ. ಉತ್ತಮ ಗುಣಮಟ್ಟದ ಟೊಮೆಟೊಗಳು ಸಿಗುತ್ತಿಲ್ಲ. ಇತ್ತ ಇರವು ಟೊಮೆಟೊ ಬೆಲೆಯ ಕೈಗೆ ಎಟಕುತ್ತಿಲ್ಲ. ಉತ್ತರಖಂಡದಲ್ಲಿ ಟೊಮೆಟೊ ಬೆಲೆ 250 ರೂಪಾಯಿ ಗಡಿ ದಾಟಿದೆ. ಕೋಲ್ಕತಾದಲ್ಲಿ 160 ರೂಪಾಯಿ ದೆಹಲಿಯಲ್ಲಿ 130 ರಿಂದ 150 ರೂಪಾಯಿ, ಚೆನ್ನೈನಲ್ಲಿ 120 ರಿಂದ 130 ರೂಪಾಯಿ, ಬೆಂಗಳೂರಿನಲ್ಲಿ 110 ರಿಂದ 130 ರೂಪಾಯಿ ಹಾಗೂ ಮುಂಬೈನಲ್ಲಿ ಕೇಜಿಗೆ 110 ರಿಂದ 120 ರೂಪಾಯಿಗೆ ಎರಿಕೆಯಾಗಿದೆ.
