ಜ್ಞಾನವಾಪಿ ಕುರಿತಾದ ಎಲ್ಲಾ ಕೇಸ್‌ಗಳನ್ನು ಒಟ್ಟಾಗಿ ವಿಚಾರಣೆ ನಡೆಸಲು ವಾರಣಾಸಿ ಕೋರ್ಟ್ ನಿರ್ಧಾರ!
ವಾರಣಾಸಿ ಜಿಲ್ಲಾ ನ್ಯಾಯಾಲಯವು ಮಂಗಳವಾರ ವಿವಿಧ ನ್ಯಾಯಾಲಯಗಳಿಂದ ತನಗೆ ವರ್ಗಾಯಿಸಲಾದ ಜ್ಞಾನವಾಪಿ ಸಂಬಂಧಿತ ಎಲ್ಲಾ ಏಳು ಪ್ರಕರಣಗಳನ್ನು ಸಾಮೂಹಿಕವಾಗಿ ವಿಚಾರಣೆ ಮಾಡಲು ನಿರ್ಧರಿಸಿದೆ.
ನವದೆಹಲಿ (ಮೇ.23): ವಾರಣಾಸಿ ಜಿಲ್ಲಾ ನ್ಯಾಯಾಲಯವು ವಿವಿಧ ನ್ಯಾಯಾಲಯಗಳಿಂದ ತನಗೆ ವರ್ಗಾಯಿಸಲಾದ ಜ್ಞಾನವಾಪಿ ಸಂಬಂಧಿತ ಎಲ್ಲಾ ಏಳು ಪ್ರಕರಣಗಳನ್ನು ಸಾಮೂಹಿಕವಾಗಿ ವಿಚಾರಣೆ ಮಾಡಲು ಮಂಗಳವಾರ ನಿರ್ಧರಿಸಿದೆ. ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶೇಶ್ವರ್ ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿ, ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಎಲ್ಲಾ ಏಳು ಪ್ರಕರಣಗಳನ್ನು ಒಂದೇ ನ್ಯಾಯಾಲಯದಲ್ಲಿ ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ತೀರ್ಪು ನೀಡಿದರು. ಈ ನಡುವೆ, ಸೋಮವಾರ, ಇಡೀ ಜ್ಞಾನವಾಪಿ ಮಸೀದಿ ಸಂಕೀರ್ಣವನ್ನು ಸಮೀಕ್ಷೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಗೆ ಮುಸ್ಲಿಂ ಕಡೆಯವರು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದರು. ಮಸೀದಿ ಆವರಣದಲ್ಲಿ ಸಿಕ್ಕಿರುವ ಶಿವಲಿಂಗದ ಬಗ್ಗೆ ನಿರ್ಧಾರ ಮಾಡಲು ಕಾರ್ಬನ್ ಡೇಟಿಂಗ್ ಸೇರಿದಂತೆ ವೈಜ್ಞಾನಿಕ ಸಮೀಕ್ಷೆಯನ್ನು ಮಾಡದಂತೆ ಸುಪ್ರೀಂ ಕೋರ್ಟ್ ಮೇ 19 ರಂದು ತಡೆ ನೀಡಿತ್ತು. ಸಂಕೀರ್ಣದಲ್ಲಿ ಕಂಡುಬರುವ 'ಶಿವಲಿಂಗ' ಎಂದು ಹೇಳಿಕೊಳ್ಳಲಾದ ಆಕೃತಿಯ ಬಗ್ಗೆ ಕಾರ್ಬನ್ ಡೇಟಿಂಗ್ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶದ ಪರಿಣಾಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಅರ್ಹವಾಗಿದೆ ಎಂದು ಸುಪ್ರೀಂ ಹೇಳಿತ್ತು.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶಿವಲಿಂಗದ ಬಗ್ಗೆ ನಿರ್ಧಾರ ಮಾಡಲು ಮೇ 12 ರಂದು ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಈಗಲೂ ಕೂಡ ಮಸೀದಿಯ ಅಧಿಕಾರಿಗಳು 'ವಾಝು ಖಾನಾ'ದಲ್ಲಿರುವ ರಚನೆಯು ಕಾರಂಜಿಯ ಭಾಗವಾಗಿದ್ದು, ಶಿವಲಿಂಗವಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ, ಅಲ್ಲಿ ನಮಾಜ್‌ಗೆ ಮೊದಲು ಕೈಕಾಲುಗಳನ್ನು ತೊಳೆದುಕೊಳ್ಳಲಾಗುತ್ತದೆ.
ಹೈಕೋರ್ಟ್ ಆದೇಶದ ನಂತರ, ಜಿಲ್ಲಾ ನ್ಯಾಯಾಲಯವು ಮೇ 16 ರಂದು ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಸಂಪೂರ್ಣ ಜ್ಞಾನವಾಪಿ ಮಸೀದಿ ಆವರಣವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಯಿಂದ ಸಮೀಕ್ಷೆಗೆ ಒಳಪಡಿಸಲು ಸಮ್ಮತಿಸಿತ್ತು. ಸೋಮವಾರ, ಜ್ಞಾನವಾಪಿ ಮತ್ತು ಆದಿ ವಿಶ್ವೇಶ್ವರ್ ಪ್ರಕರಣಗಳ ವಿಶೇಷ ವಕೀಲ ರಾಜೇಶ್ ಮಿಶ್ರಾ ಅವರು, ಈ ಅರ್ಜಿಗೆ ಮಸೀದಿ ಸಮಿತಿಯು ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರ ನ್ಯಾಯಾಲಯದಲ್ಲಿ ತನ್ನ ಆಕ್ಷೇಪಣೆಯನ್ನು ಸಲ್ಲಿಸಿದೆ ಎಂದಿದ್ದಾರೆ. ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಮೇ 19 ರಂದು ತನ್ನ ಆಕ್ಷೇಪಣೆಯನ್ನು ಸಲ್ಲಿಸಬೇಕಾಗಿತ್ತು ಆದರೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಿಂದಾಗಿ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.
Gyanvapi Case: ಜ್ಞಾನವಾಪಿ ಶಿವಲಿಂಗದ ಕಾರ್ಬನ್ ಡೇಟಿಂಗ್‌ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ!
ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜುಲೈ 7ಕ್ಕೆ ನಿಗದಿ ಮಾಡಿದೆ ಎಂದು ಮಿಶ್ರಾ ಹೇಳಿದ್ದಾರೆ. ಆಗಸ್ಟ್ 2021 ರಲ್ಲಿ, ಮಸೀದಿಯ ಸಂಕಿರ್ಣದಲ್ಲಿರುವ ಶೃಂಗಾರ ಗೌರಿ ಹಾಗೂ ಇತರ ದೇವತೆಗಳನ್ನು ಪೂಜೆ ಮಾಡುವ ಹಕ್ಕುಗಳನ್ನು ನೀಡಬೇಕು ಎಂದು ವಾರಣಾಸಿ ಜಿಲ್ಲಾ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
ಸಂಪೂರ್ಣ ಜ್ಞಾನವಾಪಿ ಮಸೀದಿಯ ಎಎಸ್‌ಐ ಸರ್ವೇ ಮಾಡುವಂತೆ ವಾರಣಾಸಿ ಕೋರ್ಟ್‌ಗೆ ಅರ್ಜಿ!