Gyanvapi Case: ಜ್ಞಾನವಾಪಿ ಶಿವಲಿಂಗದ ಕಾರ್ಬನ್ ಡೇಟಿಂಗ್‌ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ!
ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಕಂಡಿರುವ ಶಿವಲಿಂಗದಂಥ ಆಕೃತಿಯ ಕಾರ್ಬನ್ ಡೇಟಿಂಗ್ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ನವದೆಹಲಿ (ಮೇ.19): ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗದ ರೀತಿಯಲ್ಲಿರುವ ಆಕೃತಿಯನ್ನು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಬನ್ ಡೇಟಿಂಗ್ ಮಾಡುವಂತೆ ನೀಡಿದ್ದ ಅಲಹಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಹಾಗೂ ಜೆಬಿ ಪರ್ದಿವಾಲಾ ಪೀಠದ ಮುಂದೆ ಜ್ಞಾನವಾಪಿ ಮಸೀದಿ ವ್ಯವಸ್ಥಾಪಕ ಸಮಿತಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು. ಎಎಸ್‌ಐ ಅಧಿಕಾರಿಗಳ ಮೂಲಕ ಅದು ಶಿವಲಿಂಗ ಹೌದೋ ಅಲ್ಲವೋ, ಹಾಗೇನಾದರೂ ಶಿವಲಿಂಗವೇ ಆಗಿದ್ದಲ್ಲಿ ಅದು ಎಷ್ಟು ವರ್ಷ ಹಳೆಯದು ಎನ್ನುವ ಮಾಹಿತಿಯನ್ನು ವೈಜ್ಞಾನಿಕ ತನಿಖೆ ಮಾಡಿ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಶಿವಲಿಂಗದ ಅರ್ಹತೆಯ ಕಾರ್ಬನ್ ಡೇಟಿಂಗ್ ಅನ್ನು ಅನುಮತಿಸಿದ ಅಲಹಾಬಾದ್ ಹೈಕೋರ್ಟ್ ಆದೇಶದ ಪರಿಣಾಮಗಳಿಂದಾಗಿ, ಆದೇಶದಲ್ಲಿ ಸಂಬಂಧಿಸಿದ ನಿರ್ದೇಶನಗಳ ಅನುಷ್ಠಾನವನ್ನು ಮುಂದಿನ ದಿನಾಂಕದವರೆಗೆ ಮುಂದೂಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜ್ಞಾನವಾಪಿ ಮಸೀದಿ ಆವರಣದಲ್ಲಿ ದೊರೆತಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್‌ನೊಂದಿಗೆ ವೈಜ್ಞಾನಿಕ ಸರ್ವೆಯನ್ನು ಮಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಕಳೆದ ವರ್ಷ ಇಡೀ ಮಸೀದಿಯ ವಿಡಿಯೋಗ್ರಫಿ ಸರ್ವೇ ಮಾಡುವ ವೇಳೆ ಜ್ಞಾನವಾಪಿ ಸಮೀದಿಯ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಇದನ್ನು ಮುಸ್ಲಿಮರು ವಜುಕಾನಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದರು. ಸರ್ವೆಯ ವಿಡಿಯೋಗಳನ್ನು ನೋಡಿದ ಬಳಿಕ ಹಿಂದುಗಳ ಪಕ್ಷದವರು ಇದು ಶಿವಲಿಂಗ ಎಂದು ಹೇಳಿದ್ದರೆ, ಮುಸ್ಲಿಮರು ಇದನ್ನು ಕಾರಂಜಿ ಎಂದಿದ್ದರು. ವಜುಕಾನಾ ಎನ್ನುವುದು ಮುಸ್ಲಿಮರು ಮಸೀದಿಗೆ ಹೊಕ್ಕುವ ಮುನ್ನ ಕೈಕಾಲುಗಳನ್ನ ತೊಳೆದುಕೊಳ್ಳುವ ಸ್ಥಳವಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿಯೇ ಇರುವ ಮಸೀದಿಯ ಆವರಣದ ಸಂಪೂರ್ಣ ವಿಡಿಯೋಗ್ರಫಿ ಸರ್ವೇ ಮಾಡಬೇಕು ಎಂದು ಕೋರ್ಟ್ ಸೂಚನೆ ನೀಡಿದ ಬಳಿಕ, ಕಳೆದ ವರ್ಷದ ಮೇ 16 ರಂದು ಇಲ್ಲಿ ಶಿವಲಿಂಗ ಇರುವ ಬಗ್ಗೆ ಪತ್ತೆಯಾಗಿತ್ತು.
ಅಲಹಾಬಾದ್ ಹೈಕೋರ್ಟ್ ಕಳೆದ ಶುಕ್ರವಾರ, ವಾರಣಾಸಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಶಿವಲಿಂಗ ಎಂದು ಹೇಳಲಾಗುವ ಈ ಆಕೃತಿಯ ಬಗ್ಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಇದರ ಆಯಸ್ಸು ಹಾಗೂ ಇದರ ರೂಪದ ಬಗ್ಗೆ ಮಾಹಿತಿ ನೀಡಬೇಕು ಎಂದು ಆದೇಶ ನೀಡಿತ್ತು. ಯಾವುದೇ ಕಾರಣಕ್ಕೂ ಇದರ ಮೇಲಿನ 10 ಗ್ರಾಮ್‌ಗಿಂತ ಹೆಚ್ಚಿನ ಅಂಶಗಳನ್ನು ತೆಗೆದುಕೊಳ್ಳಬಾರದು ಎಂದು ಆದೇಶ ನೀಡಿತ್ತು. ಈ ವರ್ಷದ ಮಾರ್ಚ್ 20 ರಂದು ನಡೆದ ವಿಚಾರಣೆಯಲ್ಲಿ, ಶಿವಲಿಂಗಕ್ಕೆ ಹಾನಿಯಾಗದಂತೆ ಕಾರ್ಬನ್ ಡೇಟಿಂಗ್ ತನಿಖೆಯನ್ನು ಮಾಡಬಹುದೇ ಎಂದು ಅಲಹಾಬಾದ್ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು (ಎಎಸ್‌ಐ) ಕೇಳಿತ್ತು. ಈ ತನಿಖೆಯ ಮೂಲಕ ಶಿವಲಿಂಗ ಎಷ್ಟು ವರ್ಷ ಹಳೆಯದು ಎನ್ನುವುದು ತಿಳಿಯಲಿದೆ ಎಂದು ಅರ್ಜಿದಾರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದರು.
ಇದನ್ನೂ ಓದಿ: Gyanvapi Case: ಶಿವಲಿಂಗದ ಕಾರ್ಬನ್ ಡೇಟಿಂಗ್‌ಗೆ ಒಪ್ಪಿಗೆ ನೀಡಿದ ಅಲಹಾಬಾದ್ ಹೈಕೋರ್ಟ್!
ಇದಕ್ಕೂ ಮುನ್ನ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ವಾರಣಾಸಿ ಜಿಲ್ಲಾ ಕೋರ್ಟ್, ಕಾರ್ಬನ್ ಡೇಟಿಂಗ್ ಸೇರಿದಂತೆ ಶಿವಲಿಂಗದ ವೈಜ್ಞಾನಿಕ ತನಿಖೆಯನ್ನು ಮಾಡುವ ಅರ್ಜಿಯನ್ನು ತಿರಸ್ಕರಿಸಿತ್ತು. ಆಗಸ್ಟ್ 2021 ರಲ್ಲಿ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ, ವಾರಣಾಸಿ ನ್ಯಾಯಾಲಯವು ವಕೀಲ ಕಮಿಷನರ್ ಅನ್ನು ನೇಮಿಸಿತು ಮತ್ತು ಸಂಕೀರ್ಣದ ವೀಡಿಯೊಗ್ರಫಿ ಸಮೀಕ್ಷೆಯನ್ನು ಸಹ ಆದೇಶಿಸಿತು. ಈ ನಿರ್ಧಾರವನ್ನು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮತ್ತೊಮ್ಮೆ ಪ್ರಶ್ನೆ ಮಾಡಿತ್ತು. ಆದರೆ ಈ ಬಾರಿ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ನಂತರ, ಪಕ್ಷವು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅರ್ಜಿಯನ್ನು ಸಹ ಸಲ್ಲಿಕೆ ಮಾಡಿತ್ತು.
ಇದನ್ನೂ ಓದಿ: ಸಂಪೂರ್ಣ ಜ್ಞಾನವಾಪಿ ಮಸೀದಿಯ ಎಎಸ್‌ಐ ಸರ್ವೇ ಮಾಡುವಂತೆ ವಾರಣಾಸಿ ಕೋರ್ಟ್‌ಗೆ ಅರ್ಜಿ!