ಸಂಪೂರ್ಣ ಜ್ಞಾನವಾಪಿ ಮಸೀದಿಯ ಎಎಸ್‌ಐ ಸರ್ವೇ ಮಾಡುವಂತೆ ವಾರಣಾಸಿ ಕೋರ್ಟ್‌ಗೆ ಅರ್ಜಿ!
ಜ್ಞಾನವಾಪಿ ಮಸೀದಿಯ ಶಿವಲಿಂಗ ಮಾತ್ರವಲ್ಲ, ಇಡೀ ಮಸೀದಿಯ ಆವರಣವನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳ ಮೂಲಕ ಸರ್ವೇ ಮಾಡಿಸಬೇಕು ಎಂದು ವಾರಣಾಸಿ ಜಿಲ್ಲಾ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ವಾರಣಾಸಿ (ಮೇ.16): ಅಲಹಾಬಾದ್ ಹೈಕೋರ್ಟ್‌ನ ಆದೇಶದಂತೆ 'ಶಿವಲಿಂಗ' ಮಾತ್ರವಲ್ಲದೆ ಜ್ಞಾನವಾಪಿ ಸಂಕೀರ್ಣದ ಸಂಪೂರ್ಣ ಆವರಣವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆ ಮಾಡಬೇಕೆಂದು ಕೋರಿ ಮಂಗಳವಾರ ಇಲ್ಲಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 22ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ. ಹಿಂದೂಗಳು ಸಲ್ಲಿಸಿರುವ ಹೊಸ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿಗೆ ನ್ಯಾಯಾಲಯವು ಮೇ 19 ರವರೆಗೆ ಕಾಲಾವಕಾಶ ನೀಡಿದೆ. ಅರ್ಜಿಯ ಪ್ರತಿಯನ್ನು ಮಸೀದಿ ಸಮಿತಿಗೂ ನೀಡಲಾಗಿದೆ. ಆರು ಅರ್ಜಿದಾರರ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಅವರು ಇಡೀ ಪ್ರದೇಶದ ಸಮೀಕ್ಷೆಗೆ ಮನವಿ ಮಾಡಿದ್ದಾರೆ.
"ನಾವು ಆಪಾದಿತ ಮಸೀದಿಯ ಸಂಪೂರ್ಣ ಆವರಣವನ್ನು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ಬಳಸಿ ಸಮೀಕ್ಷೆ ನಡೆಸಬೇಕು ಎಂದು ಅರ್ಜಿ ಸಲ್ಲಿಸಿದ್ದೇವೆ. ಇಂದು, ಜಿಲ್ಲಾ ನ್ಯಾಯಾಲಯ, ವಾರಣಾಸಿ ಅಂಜುಮನ್ ಇಂತೇಜಾಮಿಯಾ , ಯುಪಿ ಸರ್ಕಾರಕ್ಕೆ ಮೇ 19 ರೊಳಗೆ ತನ್ನ ಆಕ್ಷೇಪಣೆಯನ್ನು ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿದೆ, ಮುಂದಿನ ವಿಚಾರಣೆ ಮೇ 22ಕ್ಕೆ ನಡೆಯಲಿದೆ ಎಂದು ವಕೀಲ ವಿಷ್ಣು ಶಂಕರ್ ಜೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಮ್ ಪ್ರಸಾದ್ ಸಿಂಗ್, ಮಹಂತ್ ಶಿವಪ್ರಸಾದ್ ಪಾಂಡೆ, ಲಕ್ಷ್ಮಿ ದೇವಿ, ಸೀತಾ ಸಾಹು, ಮಂಜು ವ್ಯಾಸ್ ಮತ್ತು ರೇಖಾ ಪಾಠಕ್ ಪರವಾಗಿ ಅರ್ಜಿ ಸಲ್ಲಿಸಲಾಗಿದೆ. ಶುಕ್ರವಾರ ಅಲಹಾಬಾದ್ ಹೈಕೋರ್ಟ್, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಗ್ಯಾನ್ವಾಪಿ ಮಸೀದಿ ಕ್ಯಾಂಪಸ್‌ನಲ್ಲಿ ಸಮೀಕ್ಷೆಯ ಸಂದರ್ಭದಲ್ಲಿ ಕಂಡುಬಂದ ಶಿವಲಿಂಗ ಎಂದು ಹೇಳಲಾದ ಆಕೃತಿಯ ಕಾರ್ಬನ್ ಡೇಟಿಂಗ್ ನಡೆಸಲು ಅನುಮತಿ ನೀಡಿದೆ.
ಜ್ಞಾನವಾಪಿ ಮಸೀದಿಯ 'ವಾಜುಕಾನಾ' ಎನ್ನಲಾಗುವ ಪ್ರದೇಶವು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಾಲಯದ ವಿವಾದದ ಕೇಂದ್ರವಾಗಿದೆ, ಏಕೆಂದರೆ ಆ ಸ್ಥಳದಲ್ಲಿ 'ಶಿವಲಿಂಗ' ಕಂಡುಬಂದಿದೆ ಎಂದು ಹಿಂದೂ ಪಕ್ಷಗಳು ಹೇಳಿಕೊಂಡಿದ್ದರೂ, ಮುಸ್ಲಿಂ ಕಡೆಯವರು ಇದನ್ನು ನಿರಾಕರಿಸಿದ್ದು, ಇದು ಕೇವಲ ನೀರಿನ ಕಾರಂಜಿ ಎಂದು ಹೇಳಿದ್ದರು.
Gyanvapi Case: ಶಿವಲಿಂಗದ ಕಾರ್ಬನ್ ಡೇಟಿಂಗ್‌ಗೆ ಒಪ್ಪಿಗೆ ನೀಡಿದ ಅಲಹಾಬಾದ್ ಹೈಕೋರ್ಟ್!
2022ರ ಮೇ 20 ರಂದು, ಸುಪ್ರೀಂ ಕೋರ್ಟ್ ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಸಂಬಂಧಿಸಿದ ಪ್ರಕರಣವನ್ನು ಸಿವಿಲ್ ನ್ಯಾಯಾಧೀಶರಿಂದ ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಲು ಆದೇಶಿಸಿತು. 2022ರ ಮೇ 17 ರಂದು, ಮಧ್ಯಂತರ ಆದೇಶದಲ್ಲಿ, 'ಶಿವಲಿಂಗ' ಕಂಡುಬಂದಿದೆ ಎಂದು ವರದಿಯಾದ 'ವಜುಕಾನಾ' ಪ್ರದೇಶವನ್ನು ರಕ್ಷಿಸಲು ಮತ್ತು ಮುಸ್ಲಿಮರಿಗೆ ನಮಾಜ್‌ಗೆ ಪ್ರವೇಶವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
Gyanvapi: ರಂಜಾನ್ ಸಮಯದಲ್ಲಿ ವುಜುಕಾನಾ ಬಳಕೆಗೆ ಅನುಮತಿ ಕೇಳಿದ ಮುಸ್ಲಿಮರು, ಸುಪ್ರೀಂ ಕೋರ್ಟ್ ಹೇಳಿದ್ದೇನು?