ದೇಶಭ್ರಷ್ಟ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್‌ ಭಂಡಾರಿ ಜತೆ ನಂಟು ಹೊಂದಿರುವ ಶಂಕೆ ಮೇರೆಗೆ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್‌ ವಾದ್ರಾ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್‌ ಜಾರಿ ಮಾಡಿದೆ.

ನವದೆಹಲಿ: ದೇಶಭ್ರಷ್ಟ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್‌ ಭಂಡಾರಿ ಜತೆ ನಂಟು ಹೊಂದಿರುವ ಶಂಕೆ ಮೇರೆಗೆ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್‌ ವಾದ್ರಾ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್‌ ಜಾರಿ ಮಾಡಿದೆ. ಮಂಗಳವಾರವೇ ಈ ಪ್ರಕರಣದ ವಿಚಾರಣೆಗೆ ವಾದ್ರಾ ಹಾಜರಾಗಬೇಕಿತ್ತಾದರೂ ಅವರು ಹೊಸ ದಿನಾಂಕ ಕೋರಿ ಮಂಗಳವಾರದ ವಿಚಾರಣೆಗೆ ಗೈರಾಗಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ತಮಗೆ ಸಿಕ್ಕಿದ್ದ ರಕ್ಷಣಾ ಸಾಮಗ್ರಿಗಳ ಗುತ್ತಿಗೆಯಿಂದ ಅಕ್ರಮವಾಗಿ ಸಂಪಾದಿಸಿದ್ದ ಹಣವನ್ನು ಭಂಡಾರಿ ವಿದೇಶಗಳಲ್ಲಿ, ಪ್ರಮುಖವಾಗಿ ಲಂಡನ್‌ನಲ್ಲಿ ರಿಯಲ್‌ ಎಸ್ಟೇಟ್‌(ಭೂಮಿ) ಖರೀದಿಸಲು ಬಳಸಿದ್ದರು ಎಂಬ ಆರೋಪವಿದೆ. ಈ ಪೈಕಿ ವಾದ್ರಾ ಸೂಚನೆ ಮೇರೆಗೆ ಭಂಡಾರಿ ಲಂಡನ್‌ನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿಸಿ ಅದನ್ನು ನವೀಕರಣ ಮಾಡಿದ್ದರು ಎಂದು ಇ.ಡಿ. ಆರೋಪಿಸಿದೆ. ಆದರೆ ಈ ಆರೋಪವನ್ನು ವಾದ್ರಾ ತಳ್ಳಿಹಾಕಿದ್ದಾರೆ. ಜೊತೆಗೆ ‘ಇದು ರಾಜಕೀಯ ಸೇಡು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಬ್ರಿಟನ್‌ನಲ್ಲಿ ನೆಲೆಸಿರುವ ಭಂಡಾರಿ, ತೆರಿಗೆ ವಂಚನೆ, ಕಪ್ಪು ಹಣ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳ ಅಡಿಯಲ್ಲಿ ಭಾರತಕ್ಕೆ ಬೇಕಾಗಿದ್ದಾರೆ. ಆದರೆ ಈತನ ಗಡೀಪಾರಿಗೆ ಇತ್ತೀಚೆಗೆ ಬ್ರಿಟನ್ ಸುಪ್ರೀಂಕೋರ್ಟ್‌ ನಿರಾಕರಿಸಿತ್ತು.