ಆ ಮಗು ಹುಟ್ಟಿ ಇನ್ನು ಮೂರು ದಿನಗಳು ಆಗಿರಲಿಲ್ಲ, ಅಷ್ಟರಲ್ಲೇ ಸಾಲದಿಂದ ಕಂಗೆಟ್ಟಿದ್ದ ಅಪ್ಪ ಅಮ್ಮ ಆಗಷ್ಟೇ ಕಣ್ಣು ಬಿಟ್ಟಿದ್ದ ಕಂದನ ಬಗ್ಗೆಯೂ ಯೋಚಿಸದೇ ಅದನ್ನು ತಬ್ಬಲಿ ಮಾಡಿ ಬದುಕಿಗೆ ಗುಡ್‌ಬಾಯ್ ಹೇಳಿದ್ದರು.

ಡೆಹರಾಡೂನ್‌: ಆ ಮಗು ಹುಟ್ಟಿ ಇನ್ನು ಮೂರು ದಿನಗಳು ಆಗಿರಲಿಲ್ಲ, ಅಷ್ಟರಲ್ಲೇ ಸಾಲದಿಂದ ಕಂಗೆಟ್ಟಿದ್ದ ಅಪ್ಪ ಅಮ್ಮ ಆಗಷ್ಟೇ ಕಣ್ಣು ಬಿಟ್ಟಿದ್ದ ಕಂದನ ಬಗ್ಗೆಯೂ ಯೋಚಿಸದೇ ಅದನ್ನು ತಬ್ಬಲಿ ಮಾಡಿ ಬದುಕಿಗೆ ಗುಡ್‌ಬಾಯ್ ಹೇಳಿದ್ದರು. ಅದಕ್ಕಿಂತಲೂ ಪವಾಡ ಎಂದರೆ, ಅಪ್ಪ ಅಮ್ಮ ಸತ್ತು ಮೂರು ದಿನಗಳಾದರೂ ಈ ಮಗು ಅಪ್ಪ ಅಮ್ಮ ಸತ್ತಿರುವುದರ ಅರಿವೂ ಕೂಡ ಇಲ್ಲದೇ ಕೊಳೆತ ಶವಗಳ ವಾಸನೆಯ ನಡುವೆ ಮೂರು ದಿನಗಳ ಕಾಲ ಜೀವಂತವಾಗಿ ಉಳಿದಿರುವುದು. ಉತ್ತರಾಖಂಡ್‌ನ ರಾಜಧಾನಿ ಡೆಹ್ರಾಡೂನ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಹುಟ್ಟಿ ಆರು ದಿನವೂ ಆಗದ ಮಗು ಕೊಳೆತ ಶವಗಳ ನಡುವೆ ಮೂರು ದಿನಗಳ ಕಾಲ ಜೀವಂತವಾಗಿ ಬದುಕುಳಿರುವುದಕ್ಕೆ ಖುಷಿ ಪಡಬೇಕು, ಅಪ್ಪ ಅಮ್ಮ ಸತ್ತಿರುವುದಕ್ಕೆ ದುಃಖ ಪಡಬೇಕು ಎಂಬ ಸಂದಿಗ್ಧತೆ ಅಲ್ಲಿ ನಿರ್ಮಾಣವಾಗಿತ್ತು. 

ಉತ್ತರಪ್ರದೇಶದ (Uttar Pradesh) ಸಹ್ರಾನ್ಪುರದ (Sahranpur) ನಿವಾಸಿ 25 ವರ್ಷದ ಕಸೀಫ್ (Kashif)ಹಾಗೂ ಆತನ ಪತ್ನಿ ಹಸಿ ಬಾಣಂತಿ 22 ವರ್ಷದ ಅನಾಂ (Anam) ತಮ್ಮ ಆಗಷ್ಟೇ ಹುಟ್ಟಿದ ಕಂದನ ಬಗ್ಗೆಯೂ ಯೋಚಿಸದೇ ಆತ್ಮಹತ್ಯೆಯ ದಾರಿ ಹಿಡಿದಿದ್ದರು, ಡೆಹ್ರಾಡೂನ್‌ನ (Dehradun) ಟರ್ನರ್‌ ರೋಡ್‌ನಲ್ಲಿ ಕಳೆದ ಮೂರು ತಿಂಗಳಿಂದ ಈ ದಂಪತಿ ವಾಸವಿದ್ದರು. ಜೂನ್ 8 ರಂದು ಅನಾಂ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಇದಾಗಿ ಮೂರೇ ದಿನಕ್ಕೆ ದಂಪತಿ ಸಾವಿಗೆ ಶರಣಾಗಿದ್ದಾರೆ. ಒಳಗಿನಿಂದ ಲಾಕ್ ಆಗಿದ್ದ ಮನೆಯಿಂದ ಕೊಳೆತ ವಾಸನೆ ಬರುತ್ತಿರುವುದನ್ನು ಗಮನಿಸಿದ ಸುತ್ತಮುತ್ತಲ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಕೊರೋನಾ 2ನೇ ಅಲೆ; ಏಪ್ರಿಲ್-ಮೇ ಅವಧಿಯಲ್ಲಿ 645 ಮಕ್ಕಳು ತಬ್ಬಲಿ!

ಘಟನಾ ಸ್ಥಳಕ್ಕೆ ಕ್ಲೆಮಂಟ್ ಟೌನ್ ಪೊಲೀಸರು ಹೋಗಿ ನೋಡಿದಾಗ ಮನೆ ಬಾಗಿಲು ಹಾಕಿರುವುದು ಕಂಡು ಬಂದಿದ್ದು, ಬಾಗಿಲು ಪಡೆದು ಒಳ ನುಗ್ಗಿದಾಗ ಮನೆಯೊಳಗೆ ನೆಲದಲ್ಲಿ ಇಬ್ಬರ ದೇಹಗಳು ಬಿದ್ದಿದ್ದು, ಈ ಮೃತದೇಹಗಳ ಪಕ್ಕದಲ್ಲೇ 4 ರಿಂದ ಐದು ದಿನಗಳ ಮಗು ಜೀವಂತವಾಗಿರುವುದು ಕಂಡು ಬಂದಿತ್ತು. ಮೃತದೇಹಗಳಿಗೆ ಮೂರು ದಿನಗಳಾಗಿದ್ದು ಅವು ಕೊಳೆಯಲು ಶುರುವಾಗಿದ್ದವು. ಕೂಡಲೇ ಮಗುವನ್ನು ಸಮೀಪದ ಡೂನ್ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಗು ನಿರ್ಜಲೀಕರಣದಿಂದ ಬಳಲುತ್ತಿತ್ತು. ಪ್ರಸ್ತುತ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. 

ಮೊದಲ ಪತ್ನಿ ಬಂದಾಗ ಪ್ರಕರಣ ಬೆಳಕಿಗೆ

ಕಸೀಫ್‌ಗೆ ಈಗಾಗಲೇ ಮದುವೆಯಾಗಿದ್ದು, ಒಂದು ಐದು ವರ್ಷದ ಗಂಡು ಮಗುವಿತ್ತು, ವರ್ಷದ ಹಿಂದೆ ಆತ ಅನಾಂಳನ್ನು ಮದುವೆಯಾಗಿದ್ದ, ಘಟನೆಗೆ ಸಂಬಂಧಿಸಿದಂತೆ ಕಸೀಫ್‌ಳ ಮೊದಲ ಪತ್ನಿ ನುಸ್ರತ್ (Nusrat)ಮಾತನಾಡಿ, ಕಳೆದ ಮೂರು ನಾಲ್ಕು ದಿನಗಳಿಂದ ನನ್ನ ಪತಿ ಫೋನ್ ಕರೆ ಸ್ವೀಕರಿಸುತ್ತಿರಲಿಲ್ಲ, ಮೂರು ದಿನದ ನಂತರ ಫೋನ್ ಸ್ವಿಚ್‌ಆಫ್ ಬರುತ್ತಿತ್ತು. ಇದಾದ ನಂತರ ನಾನು ಡೆಹ್ರಾಡೂನ್‌ಗೆ ಹೊರಟು ಬಂದೆ. ಇಲ್ಲಿ ಬಂದು ನೋಡಿದಾಗ ಮನೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನಂತರ ಮನೆಯವರಿಗೆ ಹಾಗೂ ನನ್ನ ಪತಿಯ ಕಡೆಯವರಿಗೆ ಈ ವಿಚಾರ ತಿಳಿಸಿದೆ. ಅವರು ಬಂದು ಪೊಲೀಸರಿಗೆ ವಿಚಾರ ತಿಳಿಸಿ ಪೊಲೀಸರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. 

ನಾನು ವಾರಕ್ಕೆ ಒಂದು ಅಥವಾ ಎರಡು ದಿನ ಬರುತ್ತೇನೆ ನಾನು ಐದು ಲಕ್ಷ ರೂಪಾಯಿ ಒಬ್ಬರ ಬಳಿ ಸಾಲ ಮಾಡಿದ್ದೇನೆ. ಅದನ್ನು ನಾನು ಮರಳಿಸಬೇಕಿದೆ. ಆತ ಸಾಲ ಮರುಪಾವತಿಗೆ ಜೂನ್‌ 10 ರಂದು ದಿನ ನಿಗದಿ ಮಾಡಿದ್ದಾರೆ. ಇದಕ್ಕೂ ಮೊದಲು ಅವರು ಹಣ ಪಾವತಿಗೆ ಹೇಳಿದ್ದರು ಆದರೆ ಸಾಧ್ಯವಾಗಲಿಲ್ಲ ಎಂದು ಪತಿ ಹೇಳಿದ್ದಾಗಿ ನುಸ್ರತ್ ಹೇಳಿದ್ದಾರೆ. ಕಸೀಫ್ ಕ್ರೇನ್ ಆಪರೇಟರ್ (Crane Operator) ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕೊರೋನಾಕ್ಕೆ ತಂದೆ-ತಾಯಿ ಬಲಿ, ತಬ್ಬಲಿಗಳಾದ ಮಕ್ಕಳಿಗೆ ಸೋನು ಶಿಕ್ಷಣ

ಒಟ್ಟಿನಲ್ಲಿ ತನ್ನದಲ್ಲದ ತಪ್ಪಿಗೆ ಮಗುವೊಂದು ಅನಾಥವಾಗಿದೆ. ನವಜಾತ ಶಿಶುಗಳಿಗೆ ಹುಟ್ಟಿದ ಮೊದಲ ವಾರ ಅರ್ಧಗಂಟೆಗೊಮ್ಮೆ ಒಂದು ಗಂಟೆಗೊಮ್ಮೆ ಹಾಲು ಕುಡಿಸುವಂತೆ ವೈದ್ಯರು ಹೇಳುತ್ತಾರೆ. ಆದರೆ ಇಲ್ಲಿ ಹಾಲು ನೀರು ಅಮ್ಮನ ಮಡಿಲ ಬಿಸಿ ಅಪ್ಪುಗೆ ಯಾವುದೂ ಕೂಡ ಇಲ್ಲದೇ ಕೊಳೆತ ಶವಗಳ ಮಧ್ಯೆ ಮೂರು ದಿನಗಳ ಕಾಲ ಮಗು ಬದುಕುಳಿದಿರುವುದು ಪವಾಡವಲ್ಲದೇ ಮತ್ತೇನು ಅಲ್ಲ?