ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟದಿಂದ ಭಾರೀ ಪ್ರವಾಹ ಸೃಷ್ಟಿಯಾಗಿ ಜೀವ ಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಹಲವು ಮನೆಗಳು ಕೊಚ್ಚಿ ಹೋಗಿವೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ.

ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಧರಾಲಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 1.45ರ ವೇಳೆ ಸಂಭವಿಸಿದ ಭೀಕರ ವಮೇಘಸ್ಫೋಟ ಹಾಗೂ ಆ ಬಳಿಕ ಸೃಷ್ಟಿಯಾದ ದಿಢೀರ್‌ ಪ್ರವಾಹದಿಂದಾಗಿ ಅರ್ಧಹಳ್ಳಿಯೇ ಭೂಸಮಾಧಿಯಾಗಿದ್ದು, ಭಾರೀ ಪ್ರಮಾಣದ ಆಸ್ತಿಪಾಸ್ತಿ, ಜೀವ ಹಾನಿಯಾಗಿದೆ. ಘಟನೆಯಲ್ಲಿ ಕನಿಷ್ಠ 4 ಜನರು ಸಾವನ್ನಪ್ಪಿದ್ದು, 60-70 ಜನರು ನಾಪತ್ತೆಯಾಗಿದ್ದಾರೆ.

ಖೀರ್‌ ಗಂಗಾ ನದಿಯ ಅಚ್ಟುಕಟ್ಟು ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಭಾರೀ ಪ್ರವಾಹ ಹಾಗೂ ಗುಡ್ಡಕುಸಿತ ಉಂಟಾಗಿ ಅಪಾರ ಕೆಸರು ಮಿಶ್ರಿತ ನೀರು ಧರಾಲಿ ಗ್ರಾಮಕ್ಕೆ ನುಗ್ಗಿದೆ. ಹಿಂದೂಗಳ ಪವಿತ್ರ ಚಾರ್‌ಧಾಮ್‌ಗಳಲ್ಲಿ ಒಂದಾಗಿರುವ ಗಂಗೋತ್ರಿಗೆ ಸಾಗುವ ಮಾರ್ಗದಲ್ಲೇ ಇರುವ ಈ ಗ್ರಾಮದಲ್ಲಿ ಹಲವು ಮನೆಗಳು, ಹೋಟೆಲ್‌ಗಳು, ಹೋಮ್‌ ಸ್ಟೇ, ವಾಹನಗಳು ಪ್ರವಾಹದ ತೀವ್ರತೆಗೆ ಕೊಚ್ಚಿಕೊಂಡು ಹೋಗಿವೆ. ನದಿಯ ಕೆಳಪಾತ್ರದಲ್ಲಿ ಬರುವ ಕಟ್ಟಡಗಳೆಲ್ಲಾ ಪ್ರವಾಹದ ತೀವ್ರತೆಗೆ ತರಗೆಲೆಗಳಂತೆ ಉರುಳಿಬಿದ್ದಿದ್ದು, ಅಳಿದುಳಿದ ಕಟ್ಟಡಗಳು ಭೂಸಮಾಧಿಯಾಗಿವೆ.

ಧರಾಲಿ ಗ್ರಾಮ ಮಾತ್ರವಲ್ಲದೇ, ಖೀರ್‌ಗಂಗಾ ನದಿ ಪಾತ್ರದಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಒಂದೇ ಬೆಟ್ಟದ ಎರಡು ಕಡೆ ಪ್ರವಾಹ ಸೃಷ್ಟಿಯಾಗಿದೆ. ಒಂದು ಪ್ರವಾಹ ಖೀರ್‌ಗಂಗಾ ನದಿಯ ಮೂಲಕ ಧರಾಲಿ ಗ್ರಾಮವನ್ನು ಆವರಿಸಿಕೊಂಡಿದ್ದರೆ, ಇನ್ನೊಂದು ಸುಕ್ಕಿ ಗ್ರಾಮದ ಮೇಲೆ ನುಗ್ಗಿದೆ. ಪ್ರವಾಹ ಪೀಡಿತ ಎರಡೂ ಗ್ರಾಮಗಳಲ್ಲೀ ಭಾರೀ ಪ್ರಮಾಣ ಮಳೆ ಸುರಿಯುತ್ತಿರುವ ಕಾರಣ ಪರಿಹಾರದ ಕೆಲಸಗಳಿಗೆ ಅಡ್ಡಿಯಾಗಿದೆ.

ಸಂಚಾರ ಅಸ್ತವ್ಯಸ್ಥ:ಭಾರೀ ಮಳೆ ಮತ್ತು ಪ್ರವಾಹದ ಪರಿಣಾಮ ಉತ್ತರಾಖಂಡದ ವಿವಿಧೆಡೆ 5 ರಾಷ್ಟ್ರೀಯ ಹೆದ್ದಾರಿ, 7 ರಾಜ್ಯ ಹೆದ್ದಾರಿ ಸೇರಿ 163 ರಸ್ತೆಗಳಲ್ಲಿ ಸಂಚಾರ ಬಂದ್‌ ಮಾಡಲಾಗಿದೆ.

ಮೋದಿ-ಶಾ ಕರೆ:ಪ್ರಧಾನಿ ನರೇಂದ್ರ ಮೋದಿ,ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಕರೆ ಮಾಡಿ ವಿವರ ಪಡೆದಿದ್ದು, ಪರಿಹಾರ ಕಾರ್ಯಕ್ಕೆ ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಏಳು ರಕ್ಷಣಾ ತಂಡವನ್ನು ಉತ್ತರಾಖಂಡಕ್ಕೆ ಕಳುಹಿಸಿಕೊಡಲಾಗಿದೆ. ಈ ನಡುವೆ, ಸಂತ್ರಸ್ತರ ರಕ್ಷಣೆಗೆ ಯೋಧರು, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ ಪಡೆ ಕೂಡ ತನ್ನ ತಂಡ ಕಳುಹಿಸಿಕೊಟ್ಟಿದೆ.

Scroll to load tweet…

ನಡುಕ ಹುಟ್ಟಿಸಿದ ವಿಡಿಯೋಗಳು

ಗುಡ್ಡದ ಮೇಲಿಂದ ಭಾರೀ ಪ್ರಮಾಣದಲ್ಲಿ ಕೆಸರುಮಿಶ್ರಿತ ನೀರು ಧರೇಲಿ ಗ್ರಾಮಕ್ಕೆ ನುಗ್ಗಿದಾಗ ಜನ ರಕ್ಷಣೆಗಾಗಿ ಮೊರೆಯಿಡುತ್ತಿರುವ, ಮನೆ-ಮಠಗಳು ಪ್ರವಾಹದಲ್ಲಿ ಕೊಚ್ಚಿಹೋಗುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ನಮ್ಮ ಜೀವಮಾನದಲ್ಲೇ ಇಂಥ ದುರಂತ ನೋಡಿಲ್ಲ ಎಂದು ಕೆಲವರು ಹೇಳಿಕೊಂಡಿದ್ದಾರೆ. 10-12 ಮಂದಿ ದುರಂತದ ವೇಳೆ ಸಮಾಧಿಯಾಗಿದ್ದಾರೆ, 20-25 ಹೋಟೆಲ್‌ಗಳು, ಹೋಮ್‌ಸ್ಟೇಗಳು ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ..

1,000 ಮಂದಿ ಇರುವ ಪುಟ್ಟ ಗ್ರಾಮ

ಪುಟ್ಟ ಗ್ರಾಮ ಧರಾಲಿಯ ಜನಸಂಖ್ಯೆ ಸರಿಸುಮಾರು ಒಂದು ಸಾವಿರದಷ್ಟಿದೆ. ಗಂಗೋತ್ರಿಗೆ ತೆರಳುವ ರಾಷ್ಚ್ರೀಯ ಹೆದ್ದಾರಿ-34ರ ಕೊನೆಯ ನಿಲ್ದಾಣ ಇದಾಗಿರುವ ಕಾರಣ ಹೋಟೆಲ್‌, ಹೋಮ್‌ ಸ್ಟೇಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಭಾಗೀರತಿ ನದಿ ಈ ಗ್ರಾಮದ ಸನಿಹದಲ್ಲೇ ಹರಿಯುತ್ತಿದ್ದು, ಹಲವು ಹಳ್ಳ-ಕೊಳ್ಳಗಳು ಗ್ರಾಮದ ನಡುವೆ ಮತ್ತು ಸುತ್ತಹರಿದು ಈ ನದಿ ಸೇರುತ್ತವೆ. ಇದೇ ತೊರೆಗಳಲ್ಲಿ ಗುಡ್ಡಮೇಲಿಂದ ಹರಿದು ಬಂದ ಕೆಸರುಮಿಶ್ರಿತ ನೀರು ಗ್ರಾಮಕ್ಕೆ ನುಗ್ಗಿ ಭಾರೀ ಅನಾಹುತ ಸೃಷ್ಟಿಸಿದೆ.

Scroll to load tweet…

ಮೂರು ಗಂಟೆ ಬಳಿಕ ಮತ್ತೊಂದು ಮೇಘಸ್ಫೋಟ

ಧರಾಲಿ ಗ್ರಾಮದ ಬಳಿಕ 16 ಕಿ.ಮೀ. ದೂರದಲ್ಲಿರುವ ಸುಖು ಗ್ರಾಮದಲ್ಲಿ ಮೂರು ಗಂಟೆಗಳ ಬಳಿಕ ಮತ್ತೊಂದು ಮೇಘಸ್ಫೋಟ ಸಂಭವಿಸಿದ್ದು, ಇದರಿಂದ ಗುಡ್ಡದ ಮೇಲಿಂದ ಭಾರೀ ಪ್ರಮಾಣದಲ್ಲಿ ನೀರು-ಕೆಸರಿನ ಪ್ರವಾಹ ಹರಿದು ಬಂದಿದೆ. ಈವರೆಗೆ ಯಾವುದೇ ಸಾವು-ನೋವು ವರದಿಯಾಗಿಲ್ಲವಾದರೂ ಮೂಲಗಳ ಪ್ರಕಾರ ಈ ಗ್ರಾಮದಲ್ಲೂ ಹಲವು ಮನೆಗಳಿಗೆ ಹಾನಿಯಾಗಿದೆ.

Scroll to load tweet…