ಉತ್ತರಾಖಂಡದ ಚಮೋಲಿಯ ಮಾನಾ ಗ್ರಾಮದಲ್ಲಿ ಹಿಮಪಾತ ಸಂಭವಿಸಿದ್ದು, 57 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, 10 ಕಾರ್ಮಿಕರನ್ನು ರಕ್ಷಿಸಲಾಗಿದೆ. ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ.
ನವದೆಹಲಿ (ಫೆ.28): ಉತ್ತರಾಖಂಡದ ಚಮೋಲಿಯ ಮಾನಾ ಗ್ರಾಮದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸುಮಾರು 57 ಕಾರ್ಮಿಕರು ಸಿಲುಕಿರುವ ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಭಾರೀ ಪ್ರಮಾಣದಲ್ಲಿ ನಡೆಯುತ್ತಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಜಿಲ್ಲಾಡಳಿತ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ತಂಡಗಳು ಸ್ಥಳದಲ್ಲಿವೆ. 10 ಕಾರ್ಮಿಕರನ್ನು ರಕ್ಷಿಸಿ, ಗಂಭೀರ ಸ್ಥಿತಿಯಲ್ಲಿ ಮನ ಬಳಿಯ ಸೇನಾ ಶಿಬಿರಕ್ಕೆ ಕಳುಹಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಫೆಬ್ರವರಿ 28 ರ ರಾತ್ರಿಯವರೆಗೆ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುವ (20 ಸೆಂ.ಮೀ ವರೆಗೆ) ಮುನ್ಸೂಚನೆ ನೀಡಿದೆ.
ಪೊಲೀಸ್ ಪ್ರಧಾನ ಕಚೇರಿಯ ವಕ್ತಾರ ಐಜಿ ನಿಲೇಶ್ ಆನಂದ್ ಭರಣೆ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದು, "ಮಾನಾದ ಗಡಿ ಪ್ರದೇಶದಲ್ಲಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಶಿಬಿರದ ಬಳಿ ಭಾರಿ ಹಿಮಪಾತ ಸಂಭವಿಸಿದೆ. ರಸ್ತೆ ನಿರ್ಮಾಣದಲ್ಲಿ ತೊಡಗಿದ್ದ 57 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಈ ಕಾರ್ಮಿಕರಲ್ಲಿ 10 ಕಾರ್ಮಿಕರನ್ನು ರಕ್ಷಿಸಿ, ಮನ ಬಳಿಯ ಸೇನಾ ಶಿಬಿರಕ್ಕೆ ಗಂಭೀರ ಸ್ಥಿತಿಯಲ್ಲಿ ಕಳುಹಿಸಲಾಗಿದೆ' ಎಂದಿದ್ದಾರೆ.
ಈ ನಡುವೆ BRO (ಬಾರ್ಡರ್ ರೋಡ್ಸ್ ಆರ್ಗನೈಸೇಶನ್) ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಆರ್. ಮೀನಾ ಅವರು 57 ಕಾರ್ಮಿಕರು ಸ್ಥಳದಲ್ಲಿ ಹಾಜರಿದ್ದರು ಎಂದು ಹೇಳಿದರು. ಮೂರರಿಂದ ನಾಲ್ಕು ಆಂಬ್ಯುಲೆನ್ಸ್‌ಗಳನ್ನು ಸಹ ಕಳುಹಿಸಲಾಗಿದೆ, ಆದರೆ ಭಾರೀ ಹಿಮಪಾತದಿಂದಾಗಿ ರಕ್ಷಣಾ ತಂಡವು ಅಲ್ಲಿಗೆ ತಲುಪಲು ಸಮಸ್ಯೆಯಾಗಿದೆ. ಗರ್ವಾಲ್ ಸೇನೆಯ 9 ನೇ ಬ್ರಿಗೇಡ್ ಮತ್ತು BRO ರಕ್ಷಣಾ ಪ್ರಯತ್ನಗಳನ್ನು ಮುನ್ನಡೆಸುತ್ತಿವೆ.
ಹವಾಮಾನ ಪರಿಸ್ಥಿತಿಗಳ ಬಗ್ಗೆ ಡಿಎಂ ಸಂದೀಪ್ ತಿವಾರಿ ಮಾತನಾಡಿದ್ದು "ಹವಾಮಾನ ಇಲಾಖೆಯ ಪ್ರಕಾರ, ನಾವು ಸ್ವೀಕರಿಸಿದ ಆರೆಂಜ್ ಅಲರ್ಟ್ ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಹಿಮಪಾತವಾಗುತ್ತಿದೆ ಎಂದು ಸೂಚಿಸುತ್ತದೆ. ಬದರಿನಾಥ ಧಾಮ್, ಹನುಮಾಂಚಟ್ಟಿ, ಮಲಾರಿ ಪ್ರದೇಶ ಮತ್ತು ಔಲಿಯಂತಹ ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿದೆ, ಆದರೆ ಇತರ ತಹಸಿಲ್‌ಗಳಲ್ಲಿ ನಿರಂತರ ಮಳೆಯಾಗುತ್ತಿದೆ..." ಎಂದು ಹೇಳಿದರು.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ X (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದು, "ಚಮೋಲಿ ಜಿಲ್ಲೆಯ ಮಾನಾ ಗ್ರಾಮದ ಬಳಿ BRO ನಿರ್ವಹಿಸುತ್ತಿರುವ ನಿರ್ಮಾಣ ಕಾರ್ಯದ ವೇಳೆ ಹಿಮಪಾತದಿಂದ ಅನೇಕ ಕಾರ್ಮಿಕರು ಸಿಲುಕಿರುವ ದುಃಖದ ಸುದ್ದಿ ಬಂದಿದೆ. ITBP, BRO ಮತ್ತು ಇತರ ರಕ್ಷಣಾ ತಂಡಗಳಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಕಾರ್ಮಿಕ ಸಹೋದರರ ಸುರಕ್ಷತೆಗಾಗಿ ನಾನು ಭಗವಾನ್ ಬದರಿ ವಿಶಾಲರನ್ನು ಪ್ರಾರ್ಥಿಸುತ್ತೇನೆ." ಎಂದು ಬರೆದಿದ್ದಾರೆ.
ಚಳಿಗಾಲದ ಚಂಡಮಾರುತಕ್ಕೆ ಅಮೆರಿಕಾ ತತ್ತರ: ಲಕ್ಷಾಂತರ ಜನರಿಗೆ ಕರೆಂಟೇ ಇಲ್ಲ, 2400 ವಿಮಾನಗಳು ರದ್ದು
ಹಿಮಪಾತ ನೋಡೋದಕ್ಕೆ ಮನಾಲಿಗೆ ಹೋಗ್ತೀರಾ? ಹಾಗಿದ್ರೆ ಈ ತಾಣಗಳನ್ನ ಮಿಸ್ ಮಾಡ್ಬೇಡಿ!
