ಅನುಮತಿಯಿಲ್ಲದೆ ಯುವತಿಯರ ಫೋಟೋ ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಜು.24): ಅನುಮತಿ ಇಲ್ಲದೆ ಯುವತಿಯರ ಫೋಟೋ, ವಿಡಿಯೋ ತೆಗೆದು ಅಪ್ ಲೋಡ್ ಮಾಡ್ತಿದ್ದ ಯುವಕನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಹುಸೇನ್‌ ಬಂಧಿತ ಆರೋಪಿ. ದಿಲ್ಬರ್ ಜಾನಿ ಎಂಬ ಇನ್ ಸ್ಟಾಗ್ರಾಮ್‌ಪೇಜ್‌ನಲ್ಲಿ ತಾನು ತೆಗೆದ ಯವತಿಯರ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿದ್ದ.

ಬೆಂಗಳೂರು ನೈಟ್ ಲೈಫ್ ಅಂತಾ ಯುವತಿಯರ ಫೋಟೋ ತೆಗೆದು ಸೋಶಿಯಲ್‌ ಮೀಡಿಯಾಕ್ಕೆ ಈತ ಅಪ್‌ಲೋಡ್‌ ಮಾಡುತ್ತಿದ್ದ. ಅಸಭ್ಯ ರೀತಿಯಲ್ಲಿ ಯುವತಿಯರ ಫೋಟೋ, ವಿಡಿಯೋ ತೆಗೆಯುತ್ತಿದ್ದ ಎಂದು ಆರೋಪಿಸಲಾಗಿದೆ. ಯುವತಿಯರ ಪರ್ಮಿಷನ್ ಇಲ್ಲದೆ ಫೋಟೋ, ವಿಡಿಯೋ ತೆಗೆದು ಅಪ್ ಲೋಡ್ ಮಾಡಿದ್ದ.

ಎಮ್ ಜಿ ರೋಡ್, ಬ್ರಿಗೆಡ್ ರೋಡ್ ನಂತಹ ಜಾಗಗಳಲ್ಲಿ ರಾತ್ರಿ ಫೋಟೋ, ವಿಡಿಯೋ ತೆಗೆದು ಇನ್ಸ್‌ಟಾಗ್ರಾಮ್‌ಗೆ ಹಾಕುತ್ತಿದ್ದ. ಈ ಸಂಬಂಧ ಸೊಮೊಟೊ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

ಯುವತಿಯರ ಫೋಟೋ ಮತ್ತು ವಿಡಿಯೋಗಳನ್ನ ಅಸಭ್ಯ ರೀತಿಯಲ್ಲಿ ಚಿತ್ರೀಕರಣ ಮಾಡಿದ್ದಲ್ಲದೆ, ಬೆಂಗಾಲಿ ಮತ್ತು ಇತರೆ ಭಾಷೆಯ ಸಾಂಗ್ ಹಾಕಿ ಎಡಿಟ್ ಮಾಡಿ ಅಪ್‌ಲೋಡ್‌ ಮಾಡುತ್ತಿದ್ದ. ಪ್ರಕರಣ ದಾಖಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಇಂಥದ್ದೇ ಪ್ರಕರಣವೊಂದರಲ್ಲಿ ಕೆ.ಆರ್.ಪುರಂ ನಿವಾಸಿ 26 ವರ್ಷದ ಗುರುದೀಪ್ ಸಿಂಗ್‌ನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದರು. ಅಸಭ್ಯವಾಗಿ ಕಾಣುವಂತೆ ಯುವತಿಯರ ಫೋಟೋ, ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಎಂದು ಆರೋಪಿಸಲಾಗಿತ್ತು. ಹೋಟೆಲ್‌ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದ ಗುರುದೀಪ್‌, ಕೆಲಸ ಹುಡುಕುತ್ತಿದ್ದ ಎನ್ನಲಾಗಿದೆ.

ದೂರು ದಾಖಲಿಸುವಂತೆ ಹೇಳಿದ್ದ ಸಿಎಂ ಸಿದ್ದರಾಮಯ್ಯ..

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಇಂಥ ಕೇಸ್‌ ಹೆಚ್ಚುತ್ತಿದ್ದ ಹಂತದಲ್ಲಿ ಸಿಎಂ ಸಿದ್ಧರಾಮಯ್ಯ ಈ ವಿಚಾರದ ಬಗ್ಗೆ ಟ್ವೀಟ್‌ ಮಾಡಿದ್ದರು. ಅದರ ವಿವರ ಇಲ್ಲಿದೆ.

'ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುವುದು ಹಾಗೂ ಅವರಿಗೆ ಕಿರುಕುಳ ನೀಡುವುದು, ವೀಡಿಯೋಗಳನ್ನು ಜಾಲತಾಣಗಳಲ್ಲಿ ಶೇರ್‌ ಮಾಡಿ ಅವರ ಮಾನಹಾನಿ ಮಾಡುವುದು ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡುತ್ತದೆ. ಇದು ನಮ್ಮ ಕರ್ನಾಟಕದ ಪರಂಪರೆಯಲ್ಲ.

ಕಳೆದ ಕೆಲವು ದಿನಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿದ್ದು, ತಕ್ಷಣವೇ ಕೃತ್ಯ ಎಸಗಿದವರನ್ನು ಬಂಧಿಸುವುದು ಸೇರಿದಂತೆ ಎಲ್ಲಾ ಅಗತ್ಯ ಕಾನೂನು ಕ್ರಮಗಳನ್ನು ಸರ್ಕಾರ ಜರುಗಿಸಿದೆ. ಇದರ ಜೊತೆಗೆ ನಾವು ಇಂತಹ ಕೃತ್ಯಗಳ ಮೇಲೆ ತೀವ್ರ ನಿಗಾ ವಹಿಸಿದ್ದೇವೆ.

ಮಹಿಳೆಯರು ಕೀಳುದೃಷ್ಟಿಯ ಅಥವಾ ಯಾವುದೇ ತರನಾದ ಕಿರುಕುಳಗಳ ಭಯವಿಲ್ಲದೆ ಧೈರ್ಯವಾಗಿ ನಡೆಯಲಾರದ ಸ್ಥಿತಿಗೆ ನಮ್ಮ ಸಮಾಜ ಹೋಗುತ್ತಿದೆ ಎಂದಾದರೆ, ನಾಗರಿಕರಾಗಿ ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ? ಎಂಬುದನ್ನು ಎಲ್ಲರೂ ತಮ್ಮ ಆತ್ಮಸಾಕ್ಷಿಯನ್ನೊಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ. ಇವು ನಮ್ಮ ಸಾಮಾಜಿಕ ಮೌಲ್ಯಗಳಿಗೆ ವಿರುದ್ಧವಾದವು ಮಾತ್ರವಲ್ಲ, ಕಾನೂನಿನ ರೀತಿಯಲ್ಲಿ ಶಿಕ್ಷಾರ್ಹ ಅಪರಾಧಗಳ ಕೂಡ ಹೌದು.

ನಾಡಿನ ಮಹಿಳೆಯರ ಜೊತೆ ನಮ್ಮ ಸರ್ಕಾರ ದೃಢವಾಗಿ ನಿಂತಿದೆ, ನಿಮ್ಮ ಸುರಕ್ಷೆ ಮತ್ತು ಘನತೆ ನಮ್ಮ ಸರ್ಕಾರದ ಆಧ್ಯತೆಯಾಗಿದೆ. ನಿಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆಗೆ ನಾವು ಬದ್ಧರಿದ್ದೇವೆ ಎಂಬುದನ್ನು ನಾಡಿನ ನನ್ನ ಎಲ್ಲಾ ತಾಯಂದಿರಿಗೆ, ಅಕ್ಕತಂಗಿಯರಿಗೆ ತಿಳಿಸಲು ಬಯಸುತ್ತೇನೆ.

ಯಾರೇ ಆಗಲಿ ಮಹಿಳೆಯರ ಘನತೆಗೆ ಚ್ಯುತಿಯುಂಟು ಮಾಡುವ ವಿಡಿಯೋಗಳು ಅಥವಾ ಖಾತೆಗಳನ್ನು ಆನ್‌ಲೈನ್‌ನಲ್ಲಿ ನೋಡಿದರೆ, ತಕ್ಷಣವೇ ಸೈಬರ್ ಸೆಲ್‌ನ ದೂರವಾಣಿ ಸಂಖ್ಯೆ: 1930ಗೆ ಕರೆಮಾಡಿ ಅಥವಾ ವೆಬ್‌ಸೈಟ್: http://cybercrime.gov.in ನಲ್ಲಿ ದೂರು ದಾಖಲಿಸಿ.