ದಟ್ಟಾರಣ್ಯದಲ್ಲಿ ಕಬ್ಬಿಣ ಸರಪಳಿಯಿಂದ ಪತ್ನಿಯನ್ನು ಬಂಧಿಸಿದ ಪತಿ! ಪೊಲೀಸರಿಂದ ರಕ್ಷಣೆ
ಅರಣ್ಯ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಯಲ್ಲಿ ಆಹಾರವಿಲ್ಲದೇ ಮಹಿಳೆ ದಿನಗಳನ್ನು ಕಳೆದಿದ್ದಾರೆ.
ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗದ ಜಿಲ್ಲೆಯ (Maharashtra's Sindhudurg district) ಅರಣ್ಯ ಪ್ರದೇಶದ ಮರಕ್ಕೆ ಕಟ್ಟಿದ ಕಬ್ಬಿಣದ ಸರಪಳಿಯಲ್ಲಿ ಬಂಧಿತ ಸ್ಥಿತಿಯಲ್ಲಿ ವಿದೇಶಿ ಮೂಲದ 50 ವರ್ಷದ ಮಹಿಳೆಯೊಬ್ಬರು (American Woman) ಪತ್ತೆಯಾಗಿದ್ದಾರೆ. ಮಹಿಳೆ ಬಳಿ ಅಮೆರಿಕದ ಪಾಸ್‌ಪೋರ್ಟ್ ಪ್ರತಿ, ತಮಿಳುನಾಡಿನ ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲಾತಿಗಳು ಲಭ್ಯವಾಗಿವೆ ಎಂದು ಸೋಮವಾರ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ಲಲಿತಾ ಕಾಯಿ ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಆಕೆಯನ್ನು ಮುಂಬೈನಿಂದ ಸುಮಾರು 450 ಕಿಲೋ ಮೀಟರ್ ದೂರದಲ್ಲಿರುವ ಸಿಂಧುದುರ್ಗದ ಅರಣ್ಯ ಪ್ರದೇಶದಲ್ಲಿ ಬಂಧಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಿಳೆ ಆರೋಗ್ಯ ಕ್ಷೀಣಿಸಿತ್ತು ಮತ್ತು ಆಕೆ ಮಾನಸಿಕ ಅಸ್ವಸ್ಥಳಂತೆ ಕಾಣಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಲಲಿತಾ ಕಾಯಿ ಮೂಲತಃ ಅಮೆರಿಕಾ ನಿವಾಸಿಯಾಗಿದ್ದು, ಕಳೆದ 10 ವರ್ಷಗಳಿಂದ ತಮಿಳುನಾಡಿನಲ್ಲಿದ್ದರು. ಮಹಿಳಾ ಪತಿ ತಮಿಳುನಾಡು ಮೂಲದವನು ಎಂದು ತಿಳಿದು ಬಂದಿದೆ. ಸದ್ಯ ಮಹಿಳೆಯನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರು ಮಹಿಳೆಯ ಪತಿ ಹಾಗೂ ಕುಟುಂಬಸ್ಥರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನಿರತರಾಗಿದ್ದಾರೆ. ಮಹಿಳೆ ಬಳಿ ಲಭ್ಯವಾಗಿರುವ ಪಾಸ್ ಪೋರ್ಟ್ ಅಧರಿಸಿ ಕೇಂದ್ರ ಸರ್ಕಾರದಿಂದಲೂ ಸಹಾಯ ಕೇಳಲಾಗಿದೆ. ಮಹಿಳೆ ಬಳಿ ಸಿಕ್ಕ ಎಲ್ಲಾ ದಾಖಲಾತಿಗಳನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಮಹಿಳೆಯ ಹೇಳಿಕೆ ದಾಖಲಿಸಿಕೊಂಡ ನಂತರವೇ ಏನಾಯ್ತು ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಸಿಂಧುದುರ್ಗ ಎಸ್‌ಪಿ ಸೌರಭ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಮಹಿಳೆ ಪತ್ತೆಯಾಗಿದ್ದು ಹೇಗೆ?
ನಾವು ಇದುವರೆಗೂ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. ಮುಂಬೈ ನಗರದಿಂದ ಸುಮಾರು 450 ಕಿ.ಮೀ. ದೂರದಲ್ಲಿರುವ ಸಿಂಧದುರ್ಗ ಜಿಲ್ಲೆಯ ಸೊನುರಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶನಿವಾರ ಮಹಿಳೆಯ ಚೀರಾಟ ಕೇಳಿಸಿದೆ. ಗ್ರಾಮಸ್ಥರು ತೆರಳಿ ನೋಡಿದಾಗ ಕಬ್ಬಿಣದ ಸರಪಳಿಯಲ್ಲಿ ಬಂಧಿಯಾಗಿದ್ದ ಮಹಿಳೆಯನ್ನು ನೋಡಿದ್ದಾರೆ. ಕೂಡಲೇ ಗ್ರಾಮಸ್ಥರು ಸ್ಥಳೀಯ ಠಾಣೆ ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಎಸ್‌ಪಿ ಸೌರಭ್ ಹೇಳಿದ್ದಾರೆ.
ಅಕ್ರಮ ಸಂಬಂಧಕ್ಕೆ ಮಕ್ಕಳ ಮುಂದೆ ಮಹಿಳೆ ಮರಕ್ಕೆ ಕಟ್ಟಿ ಕೂದಲು ಕತ್ತರಿಸಿ ಕ್ರೌರ್ಯ, ಇದು ಪಂಚಾಯತ್ ಆಜ್ಞೆ!
ಮಹಿಳೆಯನ್ನು ರಾಜ್ಯದ ಕೊಂಕಣ ಕ್ಷೇತ್ರದ ಸಾವಂತವಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿಂಧುದುರ್ಗದ ಓರೋಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಮಹಿಳೆಯ ಮಾನಸಿಕ ಸ್ಥಿತಿಯನ್ನು ಗಮನಿಸಿ ಅಗತ್ಯ ಚಿಕಿತ್ಸೆ ಹಿನ್ನೆಲೆ ಆಕೆಯನ್ನು ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಮಹಿಳೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರೋದನ್ನು ವೈದ್ಯಾಧಿಕಾರಿಗಳು ದೃಢೀಕರಿಸಿದ್ದಾರೆ. ಪಾಸ್‌ಪೋರ್ಟ್ ಮಾಹಿತಿ ಪ್ರಕಾರ ಮಹಿಳೆಯ ವಿಸಾ ಅವಧಿ ಅಂತ್ಯವಾಗಿದೆ. ಮಹಿಳೆ ರಾಷ್ಟ್ರೀಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕಳೆದ 10 ವರ್ಷಗಳಿಂದ ತಮಿಳುನಾಡಿನಲ್ಲಿ ನೆಲೆಸಿದ್ದ ಮಹಿಳಾ, ಸಿಂಧುದುರ್ಗ ಅರಣ್ಯ ಪ್ರದೇಶಕ್ಕೆ ಬಂದಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಆಹಾರವಿಲ್ಲದೇ ಭಾರೀ ಮಳೆಯಲ್ಲಿ ದಿನ ಕಳೆದ ಮಹಿಳೆ
ಮಹಿಳೆ ಮಾನಸಿಕ ಮತ್ತು ದೈಹಿಕವಾಗಿ ದುರ್ಬಲರಾಗಿದ್ದು, ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಕಳೆದ ಕೆಲವು ದಿನಗಳಿಂದ ಆಹಾರ ಸೇವಿಸದ ಹಿನ್ನೆಲೆ ಮಹಿಳೆಯಲ್ಲಿ ಯಾವುದೇ ದೈಹಿಕ ಶಕ್ತಿ ಉಳಿದಿಲ್ಲ. ಅರಣ್ಯ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಯಲ್ಲಿ ಆಹಾರವಿಲ್ಲದೇ ಮಹಿಳೆ ದಿನಗಳನ್ನು ಕಳೆದಿದ್ದಾರೆ. ಎಷ್ಟು ದಿನದಿಂದ ಮಹಿಳೆ ಬಂಧನಕ್ಕೊಳಗಾಗಿದ್ದರು ಎಂಬುದರ ಬಗ್ಗೆಯೂ ತಿಳಿದು ಬಂದಿಲ್ಲ.
Wayanad Landslide: ಪ್ರವಾಹದಲ್ಲಿ ತೇಲಿಬಂದ ಶವಗಳು, ಸೇನಾ ಹೆಲಿಕಾಪ್ಟರ್ ಲ್ಯಾಂಡ್ ಆಗೋಕು ಸ್ಥಳವಿಲ್ಲ!