ಬಕ್ರೀದ್ ಹಬ್ಬದ ದಿನ 17ರ ಬಾಲಕ ಸೂರ್ಯ ಪ್ರತಾಪ್ ಚವ್ಹಾಣ್ ಮೇಲೆ ಅಸಾದ್ ಹಾಗೂ ಆತನ ಸಂಗಡಿಗರು ದಾಳಿ ಮಾಡಿ ಹತ್ಯೆ ಮಾಡಿದ್ದರು. ಇತ್ತ ಆರೋಪಿ ಅಸಾದ್‌ನ ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

ಘಾಜಿಯಾಬಾದ್ (ಮೇ.31) ಉತ್ತರ ಪ್ರದೇಶದಲ್ಲಿ ಕಾನೂನು ಕೈಗೆ ಎತ್ತಿಕೊಂಡರೆ ಪರಿಣಾಮ ಎನ್‌ಕೌಂಟರ್ ಅಥವಾ ಮನೆ ಮೇಲೆ ಬುಲ್ಡೋಜರ್ ಪ್ರಹಾರ ಮಾಡುತ್ತೆ. ಇಷ್ಟಿದ್ದರೂ ಇದರ ನಡುವೆ ಬಾಲಬಿಚ್ಚಿದ ಕೆಲ ಪುಂಡರ ವಿರುದ್ಧ ಯುಪಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಬಕ್ರೀದ್ ಹಬ್ಬದ ದಿನ 17ರ ಬಾಲಕ ಸೂರ್ಯ ಪ್ರತಾಪ್ ಚವ್ಹಾಣ್ ಮೇಲೆ ಅಸಾದ್ ಹಾಗೂ ಆತನ ಸಂಗಡಿಗರು ದಾಳಿ ಮಾಡಿದ್ದರು. ಚಾಕು ಇರಿದು ಕೊಂದಿದ್ದರು. ಹಬ್ಬದ ಆಚರಣೆಗೆ ಸೂರ್ಯ ಪ್ರತಾಪ್‌ಗೆ ಇದೇ ಅಸಾದ್ ಆಹ್ವಾನ ನೀಡಿದ್ದ ಎನ್ನಲಾಗಿದೆ. ಆದರೆ ಸಂಚು ರೂಪಿಸಿ ಆಹ್ವಾನ ನೀಡಿದ್ದ ಅಸಾದ್, ಬಳಿಕ ಸೂರ್ಯ ಪ್ರತಾಪ್ ಚವ್ಹಾಣ್ ಹತ್ಯೆ ಮಾಡಿದ್ದ. ಹತ್ಯೆ ಬಳಿಕ ನಾಪತ್ತೆಯಾಗಿದ್ದ ಅಸಾದ್ ಯುಪಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಗನಿಗೆ ಆದ ನೋವು ಎಲ್ಲಾ ಆರೋಪಿಗಳಿಗೆ ಆಗಬೇಕು

ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಅಸಾದ್ ಹಾಗೂ ಆತನ ಸಂಗಡಿಗರ ಪತ್ತೆ ಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಇತ್ತ ಸೂರ್ಯ ಪ್ರತಾಪ್ ಚವ್ಹಾಣ್ ಕುಟುಂಬಸ್ಥರು, ಸ್ಥಳೀಯರು ಪ್ರತಿಭಟನೆ ತೀವ್ರಗೊಳಿಸಿದ್ದರು. ತನ್ನ ಪಾಡಿಗೆ ಇದ್ದ ಸೂರ್ಯ ಪ್ರತಾಪ್ ಚವ್ಹಾಣ್‌ಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಯಾರ ತಂಟೆ ಹೋಗಿಲ್ಲ, ಯಾರಿಗೂ ಅನ್ಯಾಯ ಮಾಡಿಲ್ಲ. ಆದರೂ ಧರ್ಮ, ದ್ವೇಷದ ಹೆಸರಲ್ಲಿ ಕೊಲೆ ಮಾಡಿದ್ದಾರೆ. ತನ್ನ ಮಗನಿಗೆ ಆದ ನೋವು ಆರೋಪಿಗಳಿಗೂ ಆಗಬೇಕು. ಅವರ ಮನೆ ಮೇಲೆ ಬುಲ್ಡೋಜರ್ ಸವಾರಿ ಮಾಡಬೇಕು ಎಂದು ಸೂರ್ಯ ಪ್ರತಾಪ್ ತಾಯಿ ಕಣ್ಣೀರಿಟ್ಟು ಹೇಳಿದ್ದರು.

ಖೋಡಾ ಹಾಗೂ ಇಂದಿರಾಪುರ ಠಾಣಾ ಪೊಲೀಸರು ಅಸಾದ್ ಹಾಗೂ ಇತರ ಆರೋಪಿಗಳ ಪತ್ತೆ ಹಚ್ಚಲು ತನಿಖೆ ತೀವ್ರಗೊಳಿಸಿದ್ದರು. ಇದೇ ವೇಳೆ ಅಸಾದ್ ತನ್ನ ಸಹಚರರ ಭೇಟಿಯಾಗಿ ಹಣ ಪಡೆದು ಉತ್ತರ ಪ್ರದೇಶ ತೊರೆಯಲು ನಿರ್ಧರಿಸಿದ್ದ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ನಾಕಾಬಂದಿ ಹಾಕಿ ಪೊಲೀಸರು ಎಲ್ಲಾ ವಾಹನಗಳ ಪರಿಶೀಲನೆ ಆರಂಭಿಸಿದ್ದರು. ನಿನ್ನೆ ಸಂಜೆಯಿಂದಲೇ ತಪಾಸಣೆ ಆರಂಭಗೊಂಡಿತ್ತು.

ಪೊಲೀಸರಿಂದ ಎನ್‌ಕೌಂಟರ್

ತಡ ರಾತ್ರಿ ಇದೇ ರಸ್ತೆ ಮೂಲಕ ಬೈಕ್‌ನಲ್ಲಿ ಆಗಮಿಸಿದ ಅಸಾದ್ ಹಾಗೂ ಆತನ ಕೆಲ ಸಹಚರರಿಗೆ ಪೊಲೀಸರು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ. ಇತ್ತ ಅಸಾದ್ ಹಾಗೂ ಆತನ ಸಂಗಡಿಗರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ. ಇತ್ತ ಪ್ರತಿ ದಾಳಿಯಲ್ಲಿ ಅಸಾದ್ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಪೊಲೀಸರು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಅಸಾದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಎಲ್ಲಾ ಆರೋಪಿಗಳ ಮೇಲೆ ಕ್ರಮಕ್ಕೆ ಸೂರ್ಯ ತಾಯಿ ಆಗ್ರಹ

ನನ್ನ ಮಗನ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ ಅಸಾದ್ ಎನ್‌ಕೌಂಟರ್ ಫೋಟೋ ನನಗೆ ತೋರಿಸಿ. ಅಸಾದ್ ಮಾತ್ರವಲ್ಲ, ಇತರ ಆರೋಪಿಗಳಿಗೂ ಇದೇ ಗತಿಯಾಗಬೇಕು. ಅವರ ಮನೆ ಮೇಲೆ ಬುಲ್ಡೋಜರ್ ನುಗ್ಗಬೇಕು ಎಂದು ಮೃತ ಸೂರ್ಯ ತಾಯಿ ಆಗ್ರಹಿಸಿದ್ದಾರೆ.