ಹೆಲ್ಮೆಟ್ ಧರಿಸದ್ದಕ್ಕೆ ದಂಡ: ಸಿಟ್ಟಿಗೆದ್ದು ಬಿಲ್ ಕಟ್ಟದ ಪೊಲೀಸ್ ಠಾಣೆಯ ಪವರ್‌ ಕಟ್ ಮಾಡಿದ ಲೈನ್‌ಮ್ಯಾನ್‌

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದಿದ್ದಕ್ಕೆ ಪೊಲೀಸರು ದಂಡ ವಿಧಿಸಿದರು ಎಂದು ಸಿಟ್ಟಿಗೆದ್ದ ಲೈನ್‌ಮ್ಯಾನ್‌ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ. ಉತ್ತರಪ್ರದೇಶದ ಶಾಮ್ಲಿಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. 

UP lineman cuts power to police station after traffic police fine him for not wearing helmet akb

ಲಕ್ನೋ: ಕೆಲ ದಿನಗಳ ಹಿಂದೆ ಬಿಹಾರದ ಯಾವುದೋ ಗ್ರಾಮದಲ್ಲಿ ಪ್ರೇಯಸಿಯನ್ನು ರಹಸ್ಯವಾಗಿ ಭೇಟಿ ಮಾಡುವುದಕ್ಕಾಗಿ ಇಡೀ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ್ ಕಡಿತಗೊಳಿಸಿ ಬಳಿಕ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಸರಿಯಾಗಿ ಒದೆ ತಿಂದ ಲೈನ್‌ಮ್ಯಾನ್‌ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಅದೇ ರೀತಿ ಈಗ ಉತ್ತರಪ್ರದೇಶದ ಲೈನ್‌ಮ್ಯಾನ್‌ ಓರ್ವ ಇದೇ ರೀತಿಯ ವಿಚಿತ್ರ ಕಾರಣಕ್ಕೆ ಸುದ್ದಿಯಾಗಿದ್ದಾನೆ. ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ಈತನಿಗೆ ಪೊಲೀಸರು ದಂಡ ವಿಧಿಸಿದರು ಎಂದು ಸಿಟ್ಟಿಗೆದ್ದ ಲೈನ್‌ಮ್ಯಾನ್‌ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ. ಉತ್ತರಪ್ರದೇಶದ ಶಾಮ್ಲಿಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. 

ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡುವುದಕ್ಕೆ ಬಹಳ ಫೇಮಸ್‌, ಜನ ಕೆಲವೊಮ್ಮೆ ಟ್ರಾಫಿಕ್‌  ಪೊಲೀಸರ ಕಣ್ಣು ತಪ್ಪಿಸಿ ಓಡಾಡಲು ಹೋಗಿಯೇ ಅನಾಹುತ ತಂದು ಕೊಳ್ಳುತ್ತಾರೆ. ಮನೆಯಲ್ಲಿ ಹೆಲ್ಮೆಟ್, ಡ್ರೈವಿಂಗ್ ಲೈಸೆನ್ಸ್ ಮರೆತು ಬಂದು ಟ್ರಾಫಿಕ್ ಪೊಲೀಸ್ ಎದುರಿಗೆ ಸಿಕ್ಕಾಗ ಸಾವಿರಾರು ರೂ ದಂಡ ಕಟ್ಟಲಾಗದೇ ತಪ್ಪಿಸಿಕೊಂಡು ಹೋಗಲು ನೋಡುತ್ತಾರೆ. ಹೀಗೆ ತಪ್ಪಿಸಿಕೊಳ್ಳಲಾಗದವರು ಪೊಲೀಸರಿಗೆ ಶಪಿಸಿಕೊಂಡು ಮುಂದೆ ಸಾಗುತ್ತಾರೆ. ಆದರೆ ಇಲ್ಲೊಬ್ಬ ಮಾತ್ರ ಡಿಫರೆಂಟ್ ಆಗಿ ಪೊಲೀಸರ ಮೇಲೆ ಪ್ರತಿಕಾರ ತೀರಿಸಿಕೊಂಡಿದ್ದಾನೆ. 

ತೆಲಂಗಾಣ ವಿದ್ಯುತ್ ಇಲಾಖೆ ಸೇರಿದ ಮೊದಲ ಲೈನ್‌ವುಮನ್ ಈಕೆ

ವರದಿಗಳ ಪ್ರಕಾರ ಸಂಚಾರಿ ನಿಯಮ ಉಲ್ಲಂಘಿಸಿದ ಉತ್ತರ ಪ್ರದೇಶದ ವಿದ್ಯುತ್‌ ಇಲಾಖೆಯ ಗುತ್ತಿಗೆ ಆಧಾರಿತ ನೌಕರನಿಗೆ ಪೊಲೀಸರು ಬರೋಬರಿ 6 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಉತ್ತರಪ್ರದೇಶದಲ್ಲಿ ಹೆಲ್ಮೆಟ್ ಧರಿಸದಿರುವುದಕ್ಕೆ ಅಧಿಕೃತವಾಗಿ 2 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಆದಾಗ್ಯೂ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕೇವಲ ಹೆಲ್ಮೆಟ್‌ ಧರಿಸದಿರುವುದಕ್ಕೆ ಇಷ್ಟು ಭಾರೀ ಮೊತ್ತದ ದಂಡ ಏಕೆ ಎಂಬುದು ಸ್ಪಷ್ಟವಾಗಿಲ್ಲ. ಗುತ್ತಿಗೆ ಆಧಾರದಲ್ಲಿ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವ ಈ ಲೈನ್‌ಮ್ಯಾನ್‌ನ ತಿಂಗಳ ಸಂಬಳ 5 ಸಾವಿರ ರೂಪಾಯಿ. ಹೀಗಿರುವಾಗ ಒಂದು ತಿಂಗಳ ಸಂಬಳಕ್ಕೂ ಅಧಿಕ ದಂಡ ವಿಧಿಸಿದ ಪೊಲೀಸರ ನಡೆಗೆ ಈತನಿಗೆ ಮೈಯೆಲ್ಲಾ ಉರಿದು ಹೋಗಿದೆ. 

ಭಾರಿ ದಂಡದಿಂದ ಆಕ್ರೋಶಕ್ಕೀಡಾದ ಲೈನ್‌ಮ್ಯಾನ್‌ ಪೊಲೀಸರಿಗೆ ಬುದ್ಧಿ ಕಲಿಸಲು ಪೊಲೀಸ್ ಠಾಣೆಗೆ ನೀಡಿದ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ. ಈತ ವಿದ್ಯುತ್ ಕಂಬಕ್ಕೆ ಹತ್ತಿ ಪೊಲೀಸ್ ಠಾಣೆಗೆ ಸಂಪರ್ಕಗೊಂಡಿದ್ದ ವಿದ್ಯುತ್ ಲೈನ್ ಅನ್ನು ಕಡಿತಗೊಳಿಸುತ್ತಿರುವ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಘಟನೆ ಬಗ್ಗೆ ಲೈನ್‌ಮ್ಯಾನ್ ಮೆಹ್ತಾಬ್ ಪ್ರತಿಕ್ರಿಯಿಸಿದ್ದು, ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಸಮಯದಲ್ಲಿ ಹೆಲ್ಮೆಟ್ ಧರಿಸದ ಕಾರಣಕ್ಕೆ ಪೊಲೀಸರು ನನ್ನ ಬೈಕ್‌ನ್ನು ಅಡ್ಡ ಹಾಕಿದರು. ನಾನು ಅವರಲ್ಲಿ ಇನ್ನೊಮ್ಮೆ ಇಂತಹ ತಪ್ಪು ಆಗುವುದಿಲ್ಲ. ನನ್ನನ್ನು ಈ ಬಾರಿ ದಂಡ ಹಾಕದೇ ಬಿಟ್ಟು ಬಿಡಿ ಎಂದು ಮನವಿ ಮಾಡಿದೆ. ಆದರೆ ಪೊಲೀಸರು ನನ್ನ ಮಾತು ಕೇಳಲಿಲ್ಲ ಎಂದು ಹೇಳಿಕೊಂಡಿದ್ದಾರೆ. 

Power crisis ದೇಶದಲ್ಲಿ ವಿದ್ಯುತ್ ಕಡಿತ ಸಮಸ್ಯೆ ತೀವ್ರ, 650 ರೈಲು ಸಂಚಾರ ರದ್ದು!

ಇನ್ನು ಈ ವಿಡಿಯೋನ್ನು ಪೋಸ್ಟ್ ಮಾಡಿದ ರೂಬಿ ಅರುಣ್ ಎಂಬುವವರು, ಇಲ್ಲಿ ಇಬ್ಬರು ತಮ್ಮ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಉತ್ತರಪ್ರದೇಶದ ಶಾಮ್ಲಿಯಲ್ಲಿ ಒಬ್ಬರು ಪೊಲೀಸರು ಲೈನ್‌ಮ್ಯಾನ್‌ಗೆ ಹೆಲ್ಮೆಟ್ ಧರಿಸದಿರುವುದಕ್ಕೆ ಆರು ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಆದರೆ ಅದಕ್ಕೆ ಪ್ರತಿಯಾಗಿ ಲೈನ್‌ಮ್ಯಾನ್ ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸಿದ್ದಾನೆ ಏಕೆಂದರೆ ಪೊಲೀಸರು 56 ಸಾವಿರ ಮೊತ್ತದ ವಿದ್ಯುತ್ ಬಿಲ್ ಅನ್ನು ಬಾಕಿ ಇರಿಸಿಕೊಂಡಿದ್ದರು ಎಂದು ಅವರು ಬರೆದು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. 

 

ಒಟ್ಟಿನಲ್ಲಿ ವಾಹನ ಸವಾರರಿಗೆ ಸಣ್ಣಪುಟ್ಟ ತಪ್ಪಿಗೂ ಸಾವಿರದ ಲೆಕ್ಕದಲ್ಲಿ ದಂಡ ವಿಧಿಸುವ ಪೊಲೀಸರು ತಮ್ಮ ಪೊಲೀಸ್ ಠಾಣೆಯ ವಿದ್ಯುತ್ ಬಿಲ್ ಕಟ್ಟದಿರುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios