Power crisis ದೇಶದಲ್ಲಿ ವಿದ್ಯುತ್ ಕಡಿತ ಸಮಸ್ಯೆ ತೀವ್ರ, 650 ರೈಲು ಸಂಚಾರ ರದ್ದು!
- ದೇಶದಲ್ಲಿ ತಲೆದೋರಿದೆ ವಿದ್ಯುತ್ ಸಮಸ್ಯೆ
- ಕಲ್ಲಿದಲ್ಲು ಪೂರೈಕೆಗೆ ವೇಗ ನೀಡಲು ಮಹತ್ವದ ಕ್ರಮ
- 650 ಪ್ಯಾಸೆಂಜರ್ ರೈಲು ಸಂಚಾರ ರದ್ದುಗೊಳಿಸಿದ ಕೇಂದ್ರ
ನವದೆಹಲಿ(ಏ.29): ದೇಶದ ಬಹುತೇಕ ರಾಜ್ಯಗಳಲ್ಲಿ ಅತೀಯಾದ ತಾಪಮಾನ ವರದಿಯಾಗುತ್ತಿದೆ. ಬಿಸಿಲ ಬೇಗೆಯಿಂದ ಪಾರಾಗಲು ಜನರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ದೇಶದಲ್ಲಿ ವಿದ್ಯುತ್ ಕಡಿತ ಸಮಸ್ಯೆ ಅತೀಯಾಗುತ್ತಿದೆ. ಭಾರತೀಯ ರೈಲ್ವೇ ಕೂಡ ತೀವ್ರ ವಿದ್ಯುತ್ ಸಮಸ್ಯೆ ಎದುರಿಸುತ್ತಿದೆ. ಈ ಸಮಸ್ಯೆ ನಿಯಂತ್ರಣಕ್ಕೆ ತರಲು ಭಾರತೀಯ ರೈಲ್ವೇ ದಿಢೀರ್ 650ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲು ಸಂಚಾರ ರದ್ದು ಮಾಡಿದೆ.
ದೇಶದಲ್ಲಿ ದಿಢೀರ್ ವಿದ್ಯುತ್ ಬೇಡಿಕೆ ಹೆಚ್ಚಳವಾಗಿದೆ. ಕಲ್ಲಿದ್ದಲ್ಲೂ ಕೊರತೆ ನಡುವೆ ತಾಪಮಾನ ಹೆಚ್ಚಳ ಇದಕ್ಕೆ ಪ್ರಮುಖ ಕಾರಣವಾಗಿದೆ. ಹಠಾತ್ ವಿದ್ಯುತ್ ಬೇಡಿಕೆ ಹೆಚ್ಚಳದಿಂದ ರೈಲ್ವೇಗೆ ಕಲ್ಲಿದ್ದಲ್ಲೂ ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಶೀಘ್ರವಾಗಿ ಕಲ್ಲಿದಲ್ಲು ಪೂರೈಕೆಗೆ ರೇಲ್ವೇ ಸಚಿವಾಲಯ ಕ್ರಮ ತೆಗೆದುಕೊಂಡಿದೆ. ಹೀಗಾಗಿ ಕಳೆದ ವಾರ ಭಾರತೀಯ ರೈಲ್ವೇ ಪ್ರತಿ ದಿನ 16 ಮೇಲ್/ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲು ಮನವಿ ಮಾಡಿತ್ತು. ಇದೀಗ ತ್ವರಿತ ಕಲ್ಲಿದ್ದಲ್ಲು ಪೂರೈಕೆಗೆ 650ಕ್ಕೂ ಹೆ್ಚು ರೈಲು ಸಂಚಾರ ರದ್ದು ಮಾಡಿದೆ.
ಕಲ್ಲಿದ್ದಲು ಸಾಗಾಟಕ್ಕಾಗಿ 240 ಪ್ರಯಾಣಿಕ ರೈಲು ರದ್ದು!
ದೇಶದ ಹಲವೆಡೆ ಲೋಡ್‌ಶೆಡ್ಡಿಂಗ್
ಬೇಸಿಗೆಯ ಪ್ರತಾಪ ಹೆಚ್ಚಾಗುತ್ತಿದ್ದಂತೆ ದೇಶಾದ್ಯಂತ ವಿದ್ಯುತ್ತಿಗೆ ಭಾರಿ ಬೇಡಿಕೆ ವ್ಯಕ್ತವಾಗತೊಡಗಿದೆ. ಬೇಡಿಕೆಯಷ್ಟುವಿದ್ಯುತ್ ಪೂರೈಸಲು ಪರದಾಡುತ್ತಿರುವ ರಾಜ್ಯ ಸರ್ಕಾರಗಳು ತಾಸುಗಟ್ಟಲೆ ಲೋಡ್‌ಶೆಡ್ಡಿಂಗ್ ಘೋಷಣೆ ಮಾಡಿವೆ. ಜಮ್ಮು-ಕಾಶ್ಮೀರದಿಂದ ತಮಿಳುನಾಡಿನವರೆಗೆ ಬಹುತೇಕ ರಾಜ್ಯಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದೆ. 2ರಿಂದ 8 ತಾಸಿನವರೆಗೆ ವಿದ್ಯುತ್ ಕೈಕೊಡುತ್ತಿದೆ. ಗುಜರಾತ್, ಆಂಧ್ರಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬೇಡಿಕೆಯಷ್ಟುವಿದ್ಯುತ್ ಸಿಗದ ಕಾರಣ ಕೈಗಾರಿಕೆಗಳಿಗೂ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಕಲ್ಲಿದ್ದಲು ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಯದಿಂದಲೂ ವಿದ್ಯುತ್ ಉತ್ಪಾದನೆಗೆ ಸಮಸ್ಯೆಯಾಗಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ.70ರಷ್ಟಕ್ಕೆ ಕಲ್ಲಿದ್ದಲು ಬೇಕು. ಕಲ್ಲಿದ್ದಲಿನ ಪೂರೈಕೆಯಿಂದ ಸಮಸ್ಯೆಯಾಗಿದೆ ಎಂದು ರಾಜ್ಯಗಳು ಹೇಳುತ್ತಿವೆಯಾದರೂ, ಬೇಡಿಕೆಗೆ ತಕ್ಕಷ್ಟುಕಲ್ಲಿದ್ದಲು ಅಗತ್ಯವಿದೆ ಎಂದು ಸರ್ಕಾರ ಹೇಳುತ್ತಿದೆ. ಕಲ್ಲಿದ್ದಲು ಸಾಗಣೆಗೆ ಅಗತ್ಯವಿರುವ ರೈಲು ಬೋಗಿಗಳ ಕೊರತೆಯಿಂದಾಗಿ ಸಮಸ್ಯೆ ಉಲ್ಬಣಿಸಿದೆ ಎನ್ನಲಾಗಿದೆ. ಇದರ ಜತೆಗೆ ಉಕ್ರೇನ್ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ದುಬಾರಿಯಾಗಿ, ಕಲ್ಲಿದ್ದಲು ಆಮದು ಕೂಡ ಕುಸಿದಿರುವುದು ಸಮಸ್ಯೆಗೆ ಕೊಡುಗೆ ನೀಡಿದೆ.
ಇನ್ನೂ ಮುಗಿದಿಲ್ಲ ಕಲ್ಲಿದ್ದಲು ಕೊರತೆ: 4 ಘಟಕ ಬಂದ್!
ಎಲ್ಲಿ ಎಷ್ಟುಕಡಿತ?:
ಉತ್ತರಪ್ರದೇಶದಲ್ಲಿ 3000 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಾಗಿದೆ. ಹೀಗಾಗಿ ಗ್ರಾಮೀಣ ಭಾಗಗಳಿಗೆ 3 ತಾಸು ಹೆಚ್ಚುವರಿಯಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಪರಿಣಾಮವಾಗಿ 15.7 ತಾಸು ಮಾತ್ರ ಹಳ್ಳಿಗಳಲ್ಲಿ ವಿದ್ಯುತ್ ಲಭಿಸುತ್ತಿದೆ. ಕಾಶ್ಮೀರದಲ್ಲಿ ರಂಜಾನ್ ಮಾಸದಲ್ಲೇ ವಿದ್ಯುತ್ ಬವಣೆಯಿಂದ ಜನರು ತತ್ತರಿಸಿದ್ದಾರೆ. ತಮಿಳುನಾಡಿನಲ್ಲಿ ಕೈಗಾರಿಕೆಗಳಿಗೆ ವಿದ್ಯುತ್ ಕಡಿತ ಮಾಡಿರುವುದರಿಂದ ಬೆಂಕಿ ಪೊಟ್ಟಣ ಕಾರ್ಖಾನೆಗಳಿಗೆ ಭಾರಿ ಸಮಸ್ಯೆಯಾಗಿದೆ. ತಮಿಳುನಾಡು 750 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಿಸುತ್ತಿದೆ.
ಆಂಧ್ರಪ್ರದೇಶದಲ್ಲಿ 50 ದಶಲಕ್ಷ ಯುನಿಟ್‌ಗೆ ಕೊರತೆ ಇದೆ. ಪಂಜಾಬ್‌ನಲ್ಲಿ ವಿದ್ಯುತ್ ಕಡಿತ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ. ಬೇಡಿಕೆಯಷ್ಟುವಿದ್ಯುತ್ ಸಿಗುತ್ತಿಲ್ಲ ಎಂದು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಪ್ರಕಟಿಸಿದ್ದಾರೆ. ಮಿಗತೆ ವಿದ್ಯುತ್ ರಾಜ್ಯ ಎಂದು ಘೋಷಿಸಿಕೊಂಡಿದ್ದ ಒಡಿಶಾದಲ್ಲಿ ಲೋಡ್ ಶೆಡ್ಡಿಂಗ್ ಅನ್ನು ಜನರು ಎದುರಿಸುತ್ತಿದ್ದಾರೆ.
ಬಿಹಾರ, ಉತ್ತರಾಖಂಡ, ಗುಜರಾತ್, ರಾಜಸ್ಥಾನ, ಹರಾರಯಣ, ಮಹಾರಾಷ್ಟ್ರ, ತ್ರಿಪುರದಲ್ಲೂ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ಆದರೆ ಪಶ್ಚಿಮ ಬಂಗಾಳ ಹಾಗೂ ಛತ್ತೀಸ್‌ಗಢ ರಾಜ್ಯಗಳು ತಮಗೆ ವಿದ್ಯುತ್ ಕೊರತೆಯಾಗಿಲ್ಲ ಎಂದು ಹೇಳಿಕೊಂಡಿವೆ.