ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ 50 ಲಕ್ಷ ರೂ. ಆಮಿಷ!
ಹಾಥ್ರಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ 50 ಲಕ್ಷ ಆಮಿಷ!| ಸುಳ್ಳು ಹೇಳಲು ಆಫರ್: ಎಫ್‌ಐಆರ್
ಹಾಥ್ರಸ್(ಅ.07: ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ 19 ಎಫ್ಐಆರ್ಗಳ ಪೈಕಿ ಒಂದರಲ್ಲಿ, ‘ಕೆಲವು ದುಷ್ಟಶಕ್ತಿಗಳು ಯುವತಿಯ ಕುಟುಂಬಕ್ಕೆ ಸುಳ್ಳು ಆರೋಪಗಳನ್ನು ಮಾಡುವಂತೆ 50 ಲಕ್ಷ ರು. ಹಣದ ಆಮಿಷ ಒಟ್ಟಿದ್ದವು’ ಎಂಬ ಆರೋಪ ಹೊರಿಸಲಾಗಿದೆ.
ಅಲ್ಲದೆ, ಕೆಲವು ಅನಾಮಧೇಯರು ಸರ್ಕಾರದ ವಿರುದ್ಧ ಸಂಚು ನಡೆಸಿದ್ದಾರೆ ಎಂದು ಆರೋಪಿಸಿ ದೇಶದ್ರೋಹ ಪ್ರಕರಣವನ್ನೂ ದಾಖಲಿಸಲಾಗಿದೆ.
‘ದುಷ್ಟಶಕ್ತಿಗಳು ಯುವತಿಯ ಕುಟುಂಬವನ್ನು ಸಂಪರ್ಕಿಸಿ, ‘ಯೋಗಿ ಆದಿತ್ಯನಾಥ್ ಸರ್ಕಾರದ ಬಗ್ಗೆ ಸುಳ್ಳು ಆರೋಪ ಮಾಡಿ. 50 ಲಕ್ಷ ರು. ಕೊಡುತ್ತೇವೆ’ ಎಂಬ ಪ್ರಲೋಭನೆ ಒಡ್ಡಿದ್ದವು’ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೀಡಿದ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಈ ದುಷ್ಟಶಕ್ತಿಗಳು ಯಾರು ಎಂಬ ಹೆಸರಿಲ್ಲ.
‘ಇದೇ ಸಂದರ್ಭ ಬಳಸಿಕೊಂಡು ಉತ್ತರ ಪ್ರದೇಶದಲ್ಲಿ ಜಾತಿ ಗಲಭೆ ಎಬ್ಬಿಸಲು ಕೆಲವು ಶಕ್ತಿಗಳು ಸಂಚು ನಡೆಸಿದವು. ಸಾಮಾಜಿಕ ಮಾಧ್ಯಮದ ಮೂಲಕ ಸುಳ್ಳು ಸಂದೇಶಗಳನ್ನು ಹರಡಿದವು’ ಎಫ್ಐಆರ್ನಲ್ಲಿದೆ.
‘ಅನಾಮಿಕ ಪತ್ರಕರ್ತೆಯೊಬ್ಬರು ಯುವತಿಯ ಸೋದರನನ್ನು ಸಂಪರ್ಕಿಸಿ, ‘ಉತ್ತರ ಪ್ರದೇಶ ಸರ್ಕಾರದ ಬಗ್ಗೆ ನನಗೆ ತೃಪ್ತಿ ಇಲ್ಲ’ ಎಂದು ಹೇಳಿ ಎಂದು ಪುಸಲಾಯಿಸಲು ಯತ್ನಿಸಿದರು’ ಎಂದೂ ಪ್ರಥಮ ವರ್ತಮಾನ ವರದಿಯಲ್ಲಿದೆ.
‘ಸರ್ಕಾರದ ಸಾಧನೆ ಸಹಿಸದ ಕೆಲವರು ರಾಜ್ಯದಲ್ಲಿ ಅಶಾಂತಿ ಮೂಡಿಸಲು ಹಾಥ್ರಸ್ ಪ್ರಕರಣ ಬಳಸಿಕೊಳ್ಳುತ್ತಿದ್ದಾರೆ’ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೂರಿದ್ದು ಕೂಡ ಇಲ್ಲಿ ಗಮನಾರ್ಹ.