2024ರಲ್ಲಿ ಟೀಂ ಇಂಡಿಯಾಗೆ ಟಿ20ಯಲ್ಲಿ ಸೂಪರ್ ಸಕ್ಸಸ್: ಟಿ20 ವಿಶ್ವಕಪ್, 5 ದ್ವಿಪಕ್ಷೀಯ ಸರಣಿ ಗೆಲುವು!
2024ರಲ್ಲಿ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಯಲ್ಲಿ ಮುಟ್ಟಿದ್ದೆಲ್ಲಾ ಚಿನ್ನ ಎನಿಸುವಂತಾಗಿದೆ. 2024ರಲ್ಲಿ ಟೀಂ ಇಂಡಿಯಾ, ಟಿ20 ಕ್ರಿಕೆಟ್‌ನಲ್ಲಿ ಸೂಪರ್ ಕಂಡ ಅಪ್‌ಡೇಟ್ ಇಲ್ಲಿದೆ ನೋಡಿ
ನವದೆಹಲಿ: 2024 ಭಾರತದ ಟಿ20 ವರ್ಷ. ಶ್ರೀಲಂಕಾದಲ್ಲಿ ಏಕದಿನ ಸರಣಿ, ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ ಟೆಸ್ಟ್ ಸರಣಿ ಸೋಲಿನ ಮುಖಭಂಗ ಅನುಭವಿಸಿದ ಹೊರತಾಗಿಯೂ ಟೀಂ ಇಂಡಿಯಾ ಈ ವರ್ಷ ಟಿ20ಯಲ್ಲಿ ಯಶಸ್ಸಿನ ಉತ್ತುಂಗದಲ್ಲಿದೆ. ಯಾವುದೇ ತಂಡವೊಂದು ಸಾಧಿಸುವ ಅತ್ಯುನ್ನತ ಸ್ಥಾನದಲ್ಲಿ ಈಗ ಭಾರತದ ಯುವ ಪಡೆ ಇದೆ.
ಈ ವರ್ಷ ಭಾರತ ಟಿ20 ಕ್ರಿಕೆಟ್‌ನಲ್ಲಿ ಸಾಧಿಸಿದ್ದು ಹಲವು. ಅಮೆರಿಕದಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ 11 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸಿದ ಟೀಂ ಇಂಡಿಯಾ, ದ್ವಿಪಕ್ಷೀಯ ಸರಣಿಗಳಲ್ಲೂ ಅಬ್ಬರಿಸಿ ಬೊಬ್ಬಿರಿದಿದೆ. ವಿದೇಶಿ ನೆಲದಲ್ಲೂ ಅತ್ಯಾಕರ್ಷಕ ಆಟವಾಡುವ ಮೂಲಕ, ತಾನೇಕೆ ವಿಶ್ವ ಚಾಂಪಿಯನ್ ಎಂಬುದನ್ನು ಜಗತ್ತಿಗೇ ತೋರಿಸಿಕೊಟ್ಟಿದೆ.
ಟೀಂ ಇಂಡಿಯಾಗೆ ಮತ್ತೊಂದು ಶಾಕ್, ಸ್ಟಾರ್ ಆಟಗಾರನ ಎಡಗೈ ಬೆರಳು ಮುರಿತ: ಪರ್ತ್ ಟೆಸ್ಟ್‌ನಿಂದ ಔಟ್?
24 ಜಯ, 2 ಸೋಲು: ಭಾರತ 2024ರಲ್ಲಿ ಆಡಿರುವ ಟಿ20 ಪಂದ್ಯಗಳು 26. ಇದರಲ್ಲಿ ಟೀಂ ಇಂಡಿಯಾ ಬರೋಬ್ಬರಿ 24 ಪಂದ್ಯಗಳಲ್ಲಿ ಗೆದ್ದಿದ್ದರೆ, ಕೇವಲ 2 ಪಂದ್ಯಗಳಲ್ಲಷ್ಟೇ ಸೋಲನುಭವಿಸಿದೆ. ಜಿಂಬಾಬ್ವೆ ಹಾಗೂ ದ.ಆಫ್ರಿಕಾದಲ್ಲಿ ತಲಾ 1 ಪಂದ್ಯ ಸೋತಿದ್ದರೆ ಉಳಿದೆಲ್ಲಾ ಪಂದ್ಯಗಳಲ್ಲಿ ಜಯಗಳಿಸಿದೆ. ಟಿ20 ವಿಶ್ವಕಪ್‌ನ ಎಲ್ಲಾ 8 ಪಂದ್ಯಗಳಲ್ಲಿ ಗೆದ್ದಿರುವುದು ತಂಡ ಈ ವರ್ಷ ಸಾಧಿಸಿದ ಅತ್ಯುನ್ನತ ಸಾಧನೆ.
ಶುಕ್ರವಾರ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳ ಸರಣಿಯನ್ನು 3-1ರಲ್ಲಿ ಕೈ ವಶಪಡಿಸಿಕೊಂಡಿತು. ಈ ಮೂಲಕ 2024ರಲ್ಲಿ ಆಡಿದ ಎಲ್ಲಾ 5 ದ್ವಿಪಕ್ಷೀಯ ಸರಣಿಯಲ್ಲೂ ಗೆದ್ದ ಸಾಧನೆ ಮಾಡಿದೆ. ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ, ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನ ಸರಣಿಗಳನ್ನು ತಲಾ 3-0 ಅಂತದಲ್ಲಿ ಕ್ಲೀನ್‌ಸ್ವೀಪ್ ಮಾಡಿಕೊಂಡ ಭಾರತ, ಜಿಂಬಾಬ್ವೆ, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಅವರದೇ ತವರಿನಲ್ಲಿ ಸರಣಿ ಗೆದ್ದ ಜಯಭೇರಿ ಮೊಳಗಿಸಿದೆ. ತಂಡಕ್ಕೆ ಇನ್ನು ಈ ವರ್ಷ ಯಾವುದೇ ಟಿ20 ಪಂದ್ಯವಿಲ್ಲ.
ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಬೆಚ್ಚಿಬೀಳಿಸಿದ ತಿಲಕ್ ವರ್ಮ, ಟಿ20ಯಲ್ಲಿ ಹೊಸ ದಾಖಲೆ!
ಶೇಕಡವಾರು ದಾಖಲೆ: ಭಾರತ ತಂಡ 2024ರ ಟಿ20ಯಲ್ಲಿ ಶೇಕಡಾ 92.31 ಗೆಲುವಿನ ಪ್ರತಿಶತ ಹೊಂದಿದ್ದು, ಕ್ಯಾಲೆಂಡರ್ ವರ್ಷದಲ್ಲಿ ತಂಡವೊಂದರ ಶ್ರೇಷ್ಠ ಸಾಧನೆ. 2018ರಲ್ಲಿ ಪಾಕಿಸ್ತಾನ 19 ಪಂದ್ಯಗಳ ಪೈಕಿ 17ರಲ್ಲಿ ಗೆದ್ದು, ಶೇ. 89.47 ಗೆಲುವಿನ ಪ್ರತಿಶತ ಹೊಂದಿದ್ದು ಈ ವರೆಗಿನ ದಾಖಲೆ.