'ಮಹಾ' ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು: ಒದ್ದಾಡುತ್ತಿದೆ ಈ ತ್ರಿಮೂರ್ತಿಗಳ ಮನಸ್ಸು!
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲ ಶಿಫಾರಸು ? ಯಾವುದೇ ಮೈತ್ರಿಕೂಟ ಸರ್ಕಾರ ರಚನೆ ಮಾಡದ ಹಿನ್ನೆಲೆ| ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೇಂದ್ರಕ್ಕೆ ಪತ್ರ ಬರೆದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ| ರಾಜ್ಯಪಾಲರ ನಿರ್ಣಯ ಖಂಡಿಸಿದ ಶಿವಸೇನೆಯಿಂದ ಕಾನೂನು ಹೋರಾಟ| ನಿರ್ಣಯ ಮರುಪರಿಶೀಲಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆದ ಎನ್‌ಸಿಪಿ| ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಕಾಂಗ್ರೆಸ್| ರಾಜ್ಯಪಾಲರ ನಿರ್ಣಯದಿಂದ ಕಂಗಾಲಾದ ಮೂರು ಪಕ್ಷಗಳ ನಾಯಕರು|
ಮುಂಬೈ(ನ.12): ಮಹಾರಾಷ್ಟ್ರದಲ್ಲಿ ಯಾವುದೇ ಮೈತ್ರಿಕೂಟ ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಶಿಫಾರಸು ಮಾಡಿದ್ದಾರೆ.
ಸರ್ಕಾರ ರಚನೆಯ ಗಡುವು ಮುಗಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೋಶ್ಯಾರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಜ್ಯಪಾಕರ ಪತ್ರಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕ್ಷಣಗಣನೆ?: ಕಾನೂನು ಹೋರಾಟಕ್ಕೆ ಸೈ ಎಂದ ಶಿವಸೇನೆ!
ಬಿಜೆಪಿಗೆ ಸಡ್ಡು ಹೊಡೆದು ಸರ್ಕಾರ ರಚಿಸುವ ಉಮೇದಿನಲ್ಲಿದ್ದ ಶಿವಸೇನೆ ತೀವ್ರ ಮುಖಭಂಗ ಅನುಭವಿಸಿದ್ದು, ಕಾನೂನು ಹೋರಾಟಕ್ಕೆ ಮುಂದಾಗಿದೆ. ರಾಜ್ಯಪಾಲರ ನಡೆ ಅಸಾಂವಿಧಾನಿಕ ಎಂದು ಶಿವಸೇನೆ ಕಿಡಿಕಾರಿದೆ.
ಈ ಮಧ್ಯೆ ಶಿವಸೇನೆಗೆ ಬೆಂಬಲ ನೀಡುವ ಮೂಲಕ ಬಿಜೆಪಿಗೆ ರಾಜಕೀಯ ಹೊಡೆತ ನೀಡುವ ಇರಾದೆಯಲ್ಲಿದ್ದ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ಕೂಡ ತೀವ್ರ ಮುಖಭಂಗ ಅನುಭವಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ನಿರ್ಣಯವನ್ನು ತೀವ್ರವಾಗಿ ಖಂಡಿಸಿರುವ ಮೂರು ಪಕ್ಷಗಳು, ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದಿವೆ. ರಾಜ್ಯಪಾಲರ ನಿರ್ಣಯ ಖಂಡಿಸಿ ಶಿವಸೇನೆ ಕಾನೂನು ಹೋರಾಟಕ್ಕೆ ಮುಂದಾದರೆ, ನಿರ್ಣಯ ಮರುಪರಿಶೀಲನೆ ಕೋರಿ ಎನ್‌ಸಿಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ.
ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್ ಮಾತ್ರ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದು, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿರುವ ರಾಜ್ಯಪಾಲರ ನಿರ್ಣಯವನ್ನು ನೆಪ ಮಾತ್ರಕ್ಕೆ ಖಂಡಿಸಿದೆ.
ನವೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ