ಮೋದಿ ಸರ್ಕಾರದ ಒನ್ ನೇಷನ್ ಒನ್ ಎಲೆಕ್ಷನ್ ಮಸೂದೆಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ!
ಮೋದಿ ಸರ್ಕಾರದ ಬಹುನಿರೀಕ್ಷಿತ ಮಸೂದೆ ಒನ್ ನೇಷನ್ ಒನ್ ಎಲೆಕ್ಷನ್‌ಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ನವದೆಹಲಿ(ಡಿ.12) ಪ್ರಧಾನಿ ನರೇಂದ್ರ ಮೋದಿಯ 3ನೇ ಅವಧಿ ಸರ್ಕಾರದಲ್ಲಿ ಕೆಲ ಬಹುನಿರೀಕ್ಷಿತ ಮಸೂದೆಗಳ ಪೈಕಿ ಒಂದು ರಾಷ್ಟ್ರ ಒಂದು ಚುನಾವಣೆ ಪ್ರಮುಖವಾಗಿದೆ. ಇದೇ ಚಳಿಗಾಲದ ಅಧಿವೇಶದಲ್ಲಿ ಮಸೂದೆ ಮಂಡನೆಯಾಗಲಿದೆ. ಇದಕ್ಕೆ ಪೂರಕವಾಗಿ ಇದೀಕ ಕೇಂದ್ರ ಕ್ಯಾಬಿನೆಟ್ ಒನ್ ನೇಷನ್ ಒನ್ ಎಲೆಕ್ಷನ್ ಬಿಲ್‌ಗೆ ಅನುಮೋದನೆ ನೀಡಿದೆ. ಈ ಮೂಲಕ ಮೋದಿ ಸರ್ಕಾರ, ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಮಾಡಲು ಹೊರಟಿರುವ ಮಹತ್ವದ ಬಿಲ್‌ಗೆ ಶೀಘ್ರದಲ್ಲೇ ಎರಡು ಸದನಗಳಲ್ಲಿ ಮಂಡನೆಯಾಗಲಿದೆ.
ಏಕಕಾಲಕ್ಕೆ ದೇಶದಲ್ಲಿ ಚುನಾವಣೆ ನಡೆಸುವ ಮಸೂದೆ ಇದಾಗಿದೆ. ಅಂದರೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ಮಸೂದೆ ಇದಾಗಿದೆ. ನಿಗಧಿತ ಸಮಯದೊಳಗೆ ಚುನಾವಣೆ ನಡೆಯಲಿದೆ. ಇದರಿಂದ ಚುನಾವಣೆಯ ಆರ್ಥಿಕ ಹೊರೆ ಕಡಿಮೆಯಾಗಲಿದೆ.ಆಡಳಿತ, ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವ ಪ್ರಮೇಯ ಕಡಿಮೆಯಾಗಲಿದೆ ಎಂದು ಬಿಜೆಪಿ ಹೇಳಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಒಂದು ರಾಷ್ಟ್ರ ಒಂದು ಚುನಾವಣೆಯ ಸಾಧಕ ಭಾಧಕಗಳು ಕುರಿತು ಚರ್ಚಿಸಿ ಈ ಸಮಿತಿ ವರದಿ ನೀಡಿದೆ. ತಜ್ಞರ ಸಮಿತಿ, ಚುನಾವಣಾ ಆಯೋಗ, ಉನ್ನತ ಮಟ್ಟದ ಸಮಿತಿಗಳ ವರದಿ ಆಧಾರದಲ್ಲಿ ಇದೀಗ ಒನ್ ನೇಷನ್ ಒನ್ ಎಲೆಕ್ಷನ್ ಮಸೂದೆ ರೆಡಿಯಾಗಿದೆ.ಮೊದಲ ಹಂತದಲ್ಲಿ ಈ ಮಸೂದೆಗೆ ಕೇಂದ್ರ ಕ್ಯಾಬಿನೆಟ್ ಗ್ರೀನ್ ಸಿಗ್ನಲ್ ನೀಡಿದೆ. ಇದೀಗ ಇದೇ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಲಿದೆ.
ಏಕಕಾಲ ಚುನಾವಣೆಗೆ ಶೀಘ್ರ ಕೇಂದ್ರದಿಂದ 3 ವಿಧೇಯಕ? ಎಷ್ಟು ರಾಜ್ಯಗಳ ಒಪ್ಪಿಗೆ ಬೇಕು?
ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ ಕುರಿತು ಪ್ರಧಾನಿ ಮೋದಿ ಸೇರಿದಂತೆ ಕೇಂದ್ರದ ಬಹುತೇಕ ಸಚಿವರು ಹಲವು ವೇದಿಕೆಗಳಲ್ಲಿ ಆಗ್ರಹಿಸಿದ್ದಾರೆ. ದೇಶದ ಹಿತಾಸಕ್ತಿ ಹಾಗೂ ಅಭಿವೃದ್ದಿಗೆ ಪೂರಕ ಎಂದು ಕೇಂದ್ರ ಸರ್ಕಾರದ ಸಚಿವರು, ಸಂಸದರು ಒತ್ತಿ ಹೇಳಿದ್ದಾರೆ. ಬುಧವಾರ(ಡಿ.11) ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಈ ಕುರಿತು ಮಾತನಾಡಿದ್ದಾರೆ. ಕುರುಕ್ಷೇತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಸಿಂಗ್, ದೇಶದ ಅಭಿವದ್ಧಿಗೆ ಒಂದು ರಾಷ್ಟ್ರ ಒಂದು ಚುನಾವಣೆ ಅತ್ಯವಶ್ಯಕವಾಗಿದೆ ಎಂದಿದ್ದಾರೆ.
ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದದಲ್ಲಿ ಭಾರತ ತ್ವರಿತಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಎಲ್ಲಾ ಕ್ಷೇತ್ರಗಳು ಮುಂದುವರಿಯುತ್ತಿದೆ. ಅಭಿವೃದ್ಧಿ ಕೆಲಸಕಾರ್ಯಗಳಿಗೆ ವೇಗ ಸಿಕ್ಕಿದೆ. ಆದರೆ ಈ ಪ್ರಗತಿಗೆ ಕೆಲ ರಾಜ್ಯಗಳಲ್ಲಿ ಎದುರಾಗುವ ಚುನಾವಣೆಯಿಂದ ನೀತಿ ಸಂಹಿತೆ ಸಮಸ್ಯೆ ಎದುರಾಗಲಿದೆ. ಹೀಗಾಗಿ ಒಂದು ರಾಷ್ಟ್ರ ಒಂದು ಚುನಾವಣೆ ಈ ಸಮಸ್ಯೆಗಳಿಗೆ ಉತ್ತರ ನೀಡಲಿದೆ ಎಂದು ಶಿವರಾಜ್ ಸಿಂಗ್ ಹೇಳಿದ್ದಾರೆ.
ಆದರೆ ಮೋದಿ ಸರ್ಕಾರದ ಈ ಮಸೂದೆಗೆ ವಿಪಕ್ಷಗಳು ಸೇರಿದಂತೆ ಹಲವು ರಾಜಕೀಯ ಪಕ್ಷಗಳ ವಿರೋಧವಿದೆ. ಭಾರಿ ವಿರೋಧದ ಕಾರಣ ಈ ಮಸೂದೆ ಸಂಸತ್ತಿನಲ್ಲಿಕೋಲಾಹಲ ಸೃಷ್ಟಿಸಲಿದೆ. ಹೀಗಾಗಿ ವಕ್ಫ್ ತಿದ್ದುಪಡಿ ಮಸೂದೆ ರೀತಿ, ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಯ ಮಂಡನೆ ಬಳಿಕ ಸಂಸತ್ತಿನ ಜಂಟಿ ಸದನ ಸಮಿತಿಗೆ ರವಾನಿಸುವ ಸಾಧ್ಯತೆ ಇದೆ. ಡಿಸೆಂಬರ್ 20ರ ವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಇದರ ನಡುವೆ ಈ ಮಸೂದೆ ಮಂಡನೆಯಾಗುವ ಎಲ್ಲಾ ಸಾಧ್ಯತೆಗಳು ಇವೆ.
ಇತ್ತೀಚೆಗೆ ದೇಶದ ಮೊದಲ ಉಪಪ್ರಧಾನಿ ವಲ್ಲಭಭಾಯ್ ಪಟೇಲ್ ಅವರ 149ನೇ ಜನ್ಮಸ್ಮರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಏಕಚುನಾವಣೆ ಕುರಿತು ಮಾತನಾಡಿದ್ದರು. ಏಕಚುನಾವಣೆಯಂದ ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದಿದ್ದರು.