ಬೆಂಗಳೂರು(ಜು.30): ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ನಾಪತ್ತೆ ಪ್ರಕರಣ, ಭಾರತದಲ್ಲಿ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ. ಭಾರತದಲ್ಲಿ ತೆರಿಗೆ ಭಯೋತ್ಪಾದನೆ ಪ್ರಾರಂಭವಾಗಿದ್ದು, ತೆರಿಗೆ ಅಧಿಕಾರಿಗಳ ಕಿರುಕುಳವೇ ಸಿದ್ಧಾರ್ಥ ನಾಪತ್ತೆಗೆ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಸಿದ್ಧಾರ್ಥ ನಾಪತ್ತೆಗೂ ಮುನ್ನ ಪತ್ರ ಬರೆದಿದ್ದು, ಅದರಲ್ಲಿ ತೆರಿಗೆ ಅಧಿಕಾರಿಗಳು ಅದರಲ್ಲೂ ವಿಶೇಷವಾಗಿ ಆದಾಯ ತೆರಿಗೆ ಇಲಾಖೆ  ನಿರ್ದೇಶಕರೊಬ್ಬರಿಂದ ತಮಗೆ ಕಿರುಕುಳವಾಗಿದೆ ಎಂದು ಆರೋಪಿಸಿದ್ದಾರೆ.

ಸಿದ್ಧಾರ್ಥ ಅವರು ಬರೆದಿದ್ದಾರೆ ಎನ್ನಲಾದ ಈ ಪತ್ರ ಇದೀಗ ತೆರಿಗೆ ಇಲಾಖೆಯ ವರ್ತನೆಯತ್ತ ಬೊಟ್ಟು ಮಾಡಿದೆ. ತೆರಿಗೆ ಇಲಾಖೆಯ ಈ ಒತ್ತಾಯದ ವರ್ತನೆಯಿಂದ ತೆರಿಗೆದಾರ ರೋಸಿ ಹೋಗಿದ್ದಾನೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ಪ್ರಮುಖವಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹೆಚ್ಚಿನ ಚರ್ಚೆಯಾಗುತ್ತಿದ್ದು, ತೆರಿಗೆ ಇಲಾಖೆ ಅಧಿಕಾರಿಗಳ ಕಿರುಕುಳದಿಂದಾಗಿಯೇ  ಹಲವು ಉದ್ಯಮಗಳು ನಷ್ಟ ಅನುಭವಿಸುತ್ತಿದ್ದು, ಕೆಲವು ಉದ್ಯಮಿಗಳು ದೇಶ ಬಿಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. 

ಇನ್ನೂ ವಿಚಿತ್ರ ಸಂಗತಿ ಎಂದರೆ ಈ  ರೀತಿ ವಾದ ಮಂಡಿಸುತ್ತಿರುವವರಲ್ಲಿ ದೇಶದ ಪ್ರತಿಷ್ಠಿತ ವ್ಯಕ್ತಿಗಳು ಮತ್ತು ಉದ್ಯಮ ವಲಯದ ಗಣ್ಯ ವ್ಯಕ್ತಿಗಳೂ ಸೇರಿರುವುದು ಆಶ್ಚರ್ಯ ತಂದಿದೆ. 

ಈ ಮಧ್ಯೆ ಸಿದ್ಧಾರ್ಥ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಲಾಗಿಲ್ಲ ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಕಾನೂನಿನ ಅಡಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನಷ್ಟೇ ಅನುಸರಿಸಲಾಗಿದ್ದು, ಯಾವುದೇ ರೀತಿಯ ಒತ್ತಡ ಹೇರಲಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ಸಿದ್ಧಾರ್ಥ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಮಾಡಿರುವ ಸಹಿ, ಐಟಿ ಇಲಾಖೆಯಲ್ಲಿ ಸಿದ್ಧಾರ್ಥ ಅವರ ಸಂಗ್ರಹ ಸಹಿಗೆ ತಾಳೆಯಾಗದ ಕಾರಣ, ನಿಜಕ್ಕೂ ಈ ಪತ್ರವನ್ನು ಸಿದ್ಧಾರ್ಥ ಬರೆದಿರುವ ಕುರಿತು ಐಟಿ ಇಲಾಖೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.