ಮುಂಬೈ(ಆ.23): ಲಡಾಖ್ ಪ್ರಾಂತ್ಯದಲ್ಲಿ ಗಡಿ ಖ್ಯಾತೆ ತೆಗೆದ ಚೀನಾ ವಿರುದ್ಧ ಭಾರತ ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಚೀನಾ ದಾಳಿಗೆ 20 ಭಾರತೀಯ ಯೋಧರು ಹುತಾತ್ಮರಾದ ಬಳಿಕ, ಭಾರತ ದಿಟ್ಟ ತಿರುಗೇಟು ನೀಡಿದೆ. ಚೀನಾ ಮೂಲದ ಆ್ಯಪ್‌ಗಳನ್ನು ಬ್ಯಾನ್ ಮಾಡಲಾಗಿದೆ. ಚೀನಾ ವಸ್ತುಗಳಿಗೆ ಬಹಿಷ್ಕಾರ ಹಾಕಲಾಗಿದೆ. ಇದೀಗ ಬೆಂಗಳೂರು ಮೂಲಕ ಫೋನ್ ಪೇ ಆ್ಯಪ್ ಡಿಲೀಟ್ ಆಂದೋಲನ ಆರಂಭಗೊಂಡಿದೆ. ಬಿಲ್ ಪಾವತಿ, ಹಣ ವರ್ಗಾವಣೆ, ಸ್ವೀಕೃತಿ ಸೇರಿದಂತೆ ಹಲವು ಟ್ರಾನ್ಸಾಕ್ಷನ್ ಮಾಡುವ ಫೋನ್ ಪೇ ಆ್ಯಪ್ ಡಿಲೀಟ್ ಆಂದೋಲನ ಇದೀಗ ತೀವ್ರ ವೇಗ ಪಡೆದುಕೊಳ್ಳುತ್ತಿದೆ.

ಭಾರತವನ್ನು ಸದಾ ಬೈಯ್ಯೋ ಟರ್ಕಿ ಅಧ್ಯಕ್ಷನ ಪತ್ನಿ ಜೊತೆ ಅಮೀರ್ ಖಾನ್ ಮಾತು..!..

ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ #UninstallPhonePay ಆಂದೋಲನ ಆರಂಭವಾಗಿದೆ. ಸೆಲೆಬ್ರೆಟಿಗಳು ಸೇರಿದಂತೆ ಹಲವು ಗಣ್ಯರು ಫೋನ್ ಪೆ ಡಿಲೀಟ್ ಆಂದೋಲನಕ್ಕೆ ಕೈಜೋಡಿಸಿದ್ದಾರೆ. ಫೋನ್ ಪೆ ವಿರುದ್ಧ ಈ ಆಂದೋಲನಕ್ಕೆ ಮುಖ್ಯ ಕಾರಣ ಕಂಪನಿಯ ಜಾಹೀರಾತು. ಫೋನ್ ಪೇ ಇತ್ತೀಚೆಗೆ ಹೊಸ ಜಾಹೀರಾತು ಬಿಡುಗಡೆ ಮಾಡಿದೆ. ಇದರಲ್ಲಿ ನಟ ಆಮಿರ್ ಖಾನ್ ಹಾಗೂ ಆಲಿಯಾ ಭಟ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಸಡಕ್ 2 ಟ್ರೈಲರ್‌ಗೆ ಲೈಕ್ಸ್‌ಗಿಂತ ಡಿಸ್‌ಲೈಕ್‌ ಜಾಸ್ತಿ, ಆಲಿಯಾ ಅಭಿನಯದ ರಾಜಮೌಳಿಯ RRR ಗತಿ ಏನು..?...

ಆಮಿರ್ ಖಾನ್ ಇತ್ತೀಚೆಗೆ ಭಾರತವನ್ನು ಸದಾ ವಿರೋಧಿಸುವ ಹಾಗೂ ಪಾಕಿಸ್ತಾನಕ್ಕೆ ಸಂಪೂರ್ಣ ಬೆಂಬಲ ನೀಡುವ ಟರ್ಕಿ ಫಸ್ಟ್ ಲೇಡಿ ಎಮಿನ್ ಎಡೋರ್ಗನ್ ಭೇಟಿಯಾಗಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇತ್ತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ, ಆಲಿಯಾ ಭಟ್ ಸೇರಿದಂತೆ ಹಲವು ಬಾಲಿವುಡ್ ನಟ-ನಟಿಯರು ಹಾಗೂ ನಿರ್ದೇಶಕರ ವಿರುದ್ಧ ಸ್ವಜನಪಕ್ಷಪಾತ(ನೆಪೋಟಿಸಂ) ಆರೋಪಗಳು ಕೇಳಿಬರುತ್ತಿದೆ. ಇದರಲ್ಲಿ ಆಲಿಯಾ ಭಟ್ ವಿರುದ್ಧ ನೆಪೊಟಿಸಂ ಆರೋಪ ಬಲವಾಗಿ ಕೇಳಿ ಬರುತ್ತಿದೆ.

ಭಾರತ ವಿರೋಧಿ ಆಮಿರ್ ಖಾನ್ ಹಾಗು ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಕಾರಣವಾಗಿರುವ ನೆಪೊಟಿಸಂ ನಟಿ ಆಲಿಯಾ ಭಟ್ ಅವರನ್ನು ಫೋನ್ ಪೇ ರಾಯಭಾರಿಯಾಗಿ ಆಯ್ಕೆ ಮಾಡಿದೆ. ನಾವು ಸುಶಾಂತ್‌ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಭಾರತದ ವಿರೋಧಿಗಳಿಗೆ ಸೇನೆ ಸೇರಿದಂತೆ ಇಡೀ ಭಾರತವೇ ಉತ್ತರ ನೀಡುತ್ತಿದೆ. ಇದರ ನಡುವೆ ಫೋನ್ ಪೇ ಭಾರತ ವಿರೋಧಿ ಹಾಗೂ ನೆಪೋಟಿಸಂ ನಟಿಯನ್ನು ರಾಯಬಾರಿಯಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ #UninstallPhonePay ಆಂದೋಲನ ಆರಂಭಗೊಂಡಿದೆ.

ಈಗಾಗಲೇ ಹಲವರು ಫೋನ್ ಪೇ ಆ್ಯಪ್ ಡಿಲೀಟ್ ಮಾಡಿದ್ದಾರೆ. ಹಲವು ಸೆಲೆಬ್ರೆಟಿಗಳು ಆಂದೋಲನಕ್ಕೆ ಬೆಂಬಲ ಸೂಚಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿ ಅಭ್ಯಾಸ ಮಾಡುತ್ತಿರುವ ಪ್ರಶಾಂತ್ ಪಟೇಲ್ ಉಮರಾವ್ ಕೂಡ ಈ ಆಂದೋಲನಕ್ಕೆ ಕೈಜೋಡಿಸಿದ್ದಾರೆ.