Asianet Suvarna News Asianet Suvarna News

ಕುಸಿದ ನಿರ್ಮಾಣ ಹಂತದ ಗೋಡೆ, ಆರು ಕಾರ್ಮಿಕರ ಸಾವು

ದೆಹಲಿಯ ಆಲಿಪುರದಲ್ಲಿ ನಿರ್ಮಾಣ ಹಂತದ ಗೋದಾಮಿನ ಗೋಡೆ ಕುಸಿದ ಪರಿಣಾಮವಾಗಿ ಈವರೆಗೂ ಆರು ಮಂದಿ ಸಾವು ಕಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 
 

under construction godown collapses in New Delhi Alipur six dead so far many feared trapped san
Author
Bengaluru, First Published Jul 15, 2022, 4:47 PM IST

ನವದೆಹಲಿ (ಜುಲೈ 15): ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಅಘಾತಕಾರಿ ದುರ್ಘಟನೆ ನಡೆದಿದ್ದು, ಹಳೆ ದೆಹಲಿಯ ಅಲಿಪುರದಲ್ಲಿ ನಿರ್ಮಾಣ ಹಂತದ ಗೋದಾಮಿನ ಗೋಡೆ ಕುಸಿತದಲ್ಲಿ ಒಟ್ಟು ಆರು ಮಂದಿ ಕಾರ್ಮಿಕರು ಸಾವು ಕಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿಯ ಪ್ರಕಾರ, ಗೋಡೆಯ ಅವಶೇಷಗಳ ಅಡಿಯಲ್ಲಿ ಇನ್ನೂ 10ಕ್ಕೂ ಅಧಿಕ ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಈವರೆಗೂ ನಾಲ್ಕು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಒಟ್ಟು ನಾಲ್ಕು ಅಗ್ನಿಶಾಮಕದಳದ ವಾಹನಗಳು ಘಟನಾ ಸ್ಥಳದಲ್ಲಿದ್ದು, 5 ಸಾವಿರ ಚದರ ಅಡಿಯ ಗೋದಾಮನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗುತ್ತಿತ್ತು ಎನ್ನುವ ಮಾಹಿತಿ ಸಿಕ್ಕಿದೆ. ಗೋದಾಮಿನಲ್ಲಿ ಗೋಡೆ ಕುಸಿದು ಬೀಳುವ ವೇಳೆ ಒಟ್ಟು 25 ಮಂದಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಎನ್‌ಡಿಆರ್‌ಎಫ್‌ ಕೂಡ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದೆ.  ಗಾಯಾಳುಗಳನ್ನು ರಾಜಾ ಹರೀಶ್‌ ಚಂದ್ರ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯ ಜನರು ಜಿಲ್ಲಾಧಿಕಾರಿ, ಎಸ್‌ಡಿಎಂಗೆ ಅಕ್ರಮ ಗೋದಾಮು ನಿರ್ಮಾಣ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದ್ದಾರೆ.

ಘಟನೆಗೆ ಪ್ರಧಾನಿ ಮೋದಿ ಬೇಸರ: ಆಲಿಪುರ ಘಟನೆಯ ಕುರಿತಾಗಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi), 'ಆಲಿಪುರದಲ್ಲಿ (Alipur) ಅದ ಘಟನೆಯಿಂದ ಬಹಳ ನೋವಾಗಿದೆ. ಆತ್ಮೀಯರನ್ನು ಕಳೆದುಕೊಂಡಿರುವ ವ್ಯಕ್ತಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ' ಎಂದು ಪ್ರಾರ್ಥಿಸುತ್ತೇನೆ ಎಂದು ಮೋದಿ ಬರೆದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (arvind kejriwal) ಕೂಡ ಟ್ವೀಟ್‌ ಮಾಡಿದ್ದು, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಾವು ಕಂಡ ಕಾರ್ಮಿಕರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಹೇಳಿದ್ದಾರೆ.

ದೆಹಲಿ ಅಗ್ನಿಶಾಮಕ ಸೇವೆಯ (Delhi Fire Service) ಮುಖ್ಯಸ್ಥ ಅತುಲ್ ಗಾರ್ಗ್ (Atul garg) ಮಾತನಾಡಿ, ನರೇಲಾ ಪ್ರದೇಶದ ಚೌಹಾನ್ ಧರ್ಮಕಾಂತಾ ಬಳಿಯ ಬಾಕೋಲಿ ಗ್ರಾಮದಲ್ಲಿ ಮಧ್ಯಾಹ್ನ 12.40 ರ ಸುಮಾರಿಗೆ ಘಟನೆ ನಡೆದಿರುವ ಬಗ್ಗೆ ನಮಗೆ ಕರೆ ಬಂದಿತ್ತು. ತಕ್ಷಣವೇ ನಾವು ಆರು ಅಗ್ನಿಶಾಮಕ ದಳದ ವಾಹನವನ್ನು ತಕ್ಷಣವೇ ಸೇವೆಗೆ ನಿಯೋಜಿಸಿದ್ದೆವು. ಅವಶೇಷಗಳಡಿ ಸಿಲುಕಿದ್ದ ಸುಮಾರು 15 ಮಂದಿ ಗಾಯಾಳುಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ ಕೂಡಲೇ ರಾಜಾ ಹರೀಶ್ ಚಂದ್ ಆಸ್ಪತ್ರೆಗೆ (Raja Harish Chandra Hospital) ರವಾನಿಸಿದ್ದಾರೆ.

ಅವಶೇಷಗಳ ಅಡಿಯಲ್ಲಿ ಇನ್ನೂ ಸಿಲುಕಿರುವ ಯಾವುದೇ ವ್ಯಕ್ತಿಯನ್ನು ರಕ್ಷಿಸಲು ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸ್ಥಳೀಯ ಪೊಲೀಸರು ಜನರನ್ನು ಘಟನಾ ಸ್ಥಳದಿಂದ ದೂರವಿರಿಸಲು ಪ್ರಯತ್ನ ಮಾಡಿದ್ದಾರೆ. ಏತನ್ಮಧ್ಯೆ, ಕುಸಿದ ಗೋಡೆಯ ಅವಶೇಷಗಳನ್ನು ತೆಗೆದುಹಾಕಲು ಎರಡು ಜೆಸಿಬಿ ಕ್ರೇನ್‌ಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಮ್ಯಾನ್‌ಹೋಲ್‌ ದುರಂತ: ಉಸಿರುಗಟ್ಟಿ ಇಬ್ಬರು ಕಾರ್ಮಿಕರ ಸಾವು

100 ಫೀಟ್‌ ಉದ್ದ, 15 ಫೀಟ್‌ ಎತ್ತರದ ಗೋಡೆ: ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ತಲುಪಿದ್ದ ವೇಳೆ ಅಂದಾಜು 100 ಫೀಟ್‌ ಉದ್ದದ, 15 ಫೀಟ್‌ ಎತ್ತರದ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಗೋಡೆಯ ಫೌಂಡೇಷನ್‌ ಸಮೀಪದ ಬಳಿ ಕಾರ್ಮಿಕರು ಗುಂಡಿ ತೋಡುವ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ಬಂದಿದೆ.

ಇದನ್ನೂ ಓದಿ: ಲಾರಿ ಹರಿದು 15 ವಲಸೆ ಕಾರ್ಮಿಕರ ಸಾವು!

ಜಮೀನು ಮಾಲೀಕರ ವಿರುದ್ಧ ಕ್ರಮ: ಈ ಅಪಘಾತಕ್ಕೆ ಕಾರಣರಾದ ಜಮೀನು ಮಾಲೀಕ ಶಕ್ತಿ ಸಿಂಗ್ ಮತ್ತು ಗುತ್ತಿಗೆದಾರ ಸಿಕಂದರ್ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios