ಲಾರಿ ಹರಿದು 15 ವಲಸೆ ಕಾರ್ಮಿಕರ ಸಾವು!
ಲಾರಿ ಹರಿದು 15 ವಲಸೆ ಕಾರ್ಮಿಕರ ಸಾವು| ಗುಜರಾತ್‌ನ ಸೂರತ್‌ನಲ್ಲೊಂದು ಹೃದಯವಿದ್ರಾವಕ ಘಟನೆ| ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಕಾರ್ಮಿಕರು
ಸೂರತ್(ಜ.20): ಚಾಲಕನ ನಿಯಂತ್ರಣದ ತಪ್ಪಿ ಲಾರಿಯೊಂದು ಮೈಮೇಲೆ ಹರಿದ ಪರಿಣಾಮ 14 ವಲಸೆ ಕಾರ್ಮಿಕರು ಮತ್ತು 1 ವರ್ಷದ ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಲಾರಿ ಚಾಲಕ ಮತ್ತು ಸಹಾಯಕ ಕೂಡಾ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಸಿಎಂ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಜೊತೆಗೆ ಮಡಿದವರ ಕುಟುಂಬ ಸದಸ್ಯರಿಗೆ ಪ್ರಧಾನಿ ಮೋದಿ ತಲಾ 2 ಲಕ್ಷ ರು. ಪರಿಹಾರ ಮತ್ತು ಗಾಯಾಳುಗಳು ಕುಟುಂಬಕ್ಕೆ ತಲಾ 50000 ರು. ಪರಿಹಾರ ಘೋಷಿಸಿದ್ದಾರೆ. ಮಡಿದವರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ರಾಜಸ್ಥಾನ ಮೂಲದವರು.
ಏನಾಯ್ತು?:
ವಲಸೆ ಕಾರ್ಮಿಕರ ತಂಡವೊಂದು ಸೂರತ್‌ನಿಂದ 60 ಕಿ.ಮೀ ದೂರದ ಕೊಸಂಬ ಎಂಬ ಹಳ್ಳಿಯ ಪಾದಚಾರಿ ಮಾರ್ಗದಲ್ಲಿ ಮಲಗಿತ್ತು. ಕಾರ್ಮಿಕರು ಮಲಗಿದ್ದ ಪಕ್ಕದ ರಸ್ತೆಯಲ್ಲೇ ಡಂಪರ್ ಟ್ರಕ್ಕೊಂದು ಕಿಮ್‌ನಿಂದ ಮಾಂಡ್ವಿಗೆ ಸಂಚಾರ ಬೆಳೆಸುತ್ತಿತ್ತು. ಅದೇ ಸಮಯದಲ್ಲಿ ಟ್ರಕ್‌ಗೆ ವಿರುದ್ಧ ದಿಕ್ಕಿನಲ್ಲಿ ಕಬ್ಬು ತುಂಬಿಕೊಂಡಿದ್ದ ಟ್ರ್ಯಾಕ್ಟರ್ ಬರುತ್ತಿತ್ತು. ಈ ನಡುವೆ ಕಬ್ಬಿನ ಜಲ್ಲೆಗಳ ಟ್ರ್ಯಾಕ್ಟರ್‌ನಿಂದ ಹೊರಗೆ ಚಾಚಿಕೊಂಡ ಪರಿಣಾಮ, ಅದು ಲಾರಿಗೆ ಬಡಿದಿದೆ. ಪರಿಣಾಮ ಲಾರಿಯ ಮುಂಭಾಗದ ಗಾಜು ಒಡೆದು, ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಲಾರಿ ಸೀದಾ ಪಾದಚಾರಿ ಮಾರ್ಗದಲ್ಲಿ ಮಲಗಿದ್ದವರ ಮೇಲೆ ಹರಿದಿದೆ. ಘಟನೆಯ ತೀವ್ರತೆಗೆ 12 ಜನ ಸ್ಥಳದಲ್ಲೇ ಸಾವನ್ನಪ್ಪಿದರೆ, ಉಳಿದ ಮೂವರು ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಲ್ಲಿ ಓರ್ವ ಮಧ್ಯಪ್ರದೇಶದ ಯುವಕ ಮತ್ತು 13 ಜನ ಗುಜರಾತ್ ಮೂಲದ ವ್ಯಕ್ತಿಗಳು ಸೇರಿದ್ದಾರೆ. ಅಲ್ಲದೆ ಸಾವನ್ನಪ್ಪಿದವರಲ್ಲಿ 1 ವರ್ಷದ ಒಂದು ಮಗು ಮತ್ತು 8 ಮಹಿಳೆಯರು ಸೇರಿದ್ದಾರೆ.