ಕಾವೇರಿ ವಿವಾದದ ಪ್ರತಿಭಟನೆಯಲ್ಲಿ, ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರು ನಟಿ ತ್ರಿಷಾ ಅವರನ್ನು ಕುರಿತು ನೀಡಿದ್ದಾರೆನ್ನಲಾದ ಅಸಭ್ಯ ಹೇಳಿಕೆಯು ತಮಿಳುನಾಡಿನಲ್ಲಿ ರಾಜಕೀಯ ವಿವಾದ ಸೃಷ್ಟಿಸಿದೆ.
ತಂಜಾವೂರು (ಆ.3): ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಪ್ರಖ್ಯಾತ ತಮಿಳು ನಟಿ ತ್ರಿಷಾ ಅವರನ್ನು ಉದ್ದೇಶಿಸಿ ನೀಡಿದ್ದಾರೆನ್ನಲಾದ ಆಕ್ಷೇಪಾರ್ಹ ಹಾಗೂ ಅಸಭ್ಯ ಹೇಳಿಕೆ ಸೋಮವಾರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು. "ತಮಿಳುನಾಡಿಗೆ ಕಾವೇರಿ ನೀರಿನ ಒಂದು ಹನಿಯೂ ಸಿಗದಿದ್ದರೂ ಮುಖ್ಯಮಂತ್ರಿ ವಿಜಯ್ ಅವರಿಗೆ ಅದರ ಬಗ್ಗೆ ಯಾವುದೇ ಕಾಳಜಿಯಿಲ್ಲ" ಎಂದು ಆರೋಪಿಸಿದರು.
ಆದರೆ, ಈ ರ‍್ಯಾಲಿಯಲ್ಲಿ ಉದಯನಿಧಿ ಭಾಷಣ ಮಾಡುತ್ತಿದ್ದಾಗ ಜನಸಂದಣಿಯಲ್ಲಿದ್ದ ವ್ಯಕ್ತಿಯೊಬ್ಬ "ತ್ರಿಷಾ, ತ್ರಿಷಾ" ಎಂದು ಜೋರಾಗಿ ಕೂಗಿದ್ದಾನೆ. ಈ ವೇಳೆ ತಮ್ಮ ಭಾಷಣವನ್ನು ಕ್ಷಣಕಾಲ ತಡೆದ ಉದಯನಿಧಿ, ಮುಖದಲ್ಲಿ ಕುಹಕದ ನಗೆಯೊಂದಿಗೆ ಡಬಲ್ ಮೀನಿಂಗ್‌ನ ಅಸಭ್ಯ ಕಾಮೆಂಟ್ ಮಾಡಿದ್ದಾರೆ. ಈ ಹೇಳಿಕೆಯ ತುಣುಕು ವೈರಲ್ ಆಗುತ್ತಿದ್ದಂತೆ ತಮಿಳುನಾಡು ರಾಜಕೀಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ತೀವ್ರ ವಾಗ್ದಾಳಿ, ಬಂಧನಕ್ಕೆ ಆಗ್ರಹ
ಉದಯನಿಧಿ ಅವರ ಈ ಹೇಳಿಕೆಯನ್ನು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಖಂಡಿಸಿರುವ ತಮಿಳುನಾಡು ಬಿಜೆಪಿ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ, "ಉದಯನಿಧಿ ಅವರ ಈ ಡಬಲ್ ಮೀನಿಂಗ್ ಮಾತುಗಳು ಅತ್ಯಂತ ಜಿಗುಪ್ಸೆ ತರಿಸುವಂತಹದ್ದಾಗಿದ್ದು, ಅಸಭ್ಯ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ" ಎಂದು ಕಿಡಿಕಾರಿದ್ದಾರೆ.
"ತಾಯಿ, ಹೆಂಡತಿ ಮತ್ತು ಮಗಳನ್ನು ಹೊಂದಿರುವ ಯಾವುದೇ ರೌಡಿ ಅಥವಾ ಕಳ್ಳ ಕೂಡ ಇಷ್ಟೊಂದು ಅಸಭ್ಯವಾಗಿ ಮಾತನಾಡಲು ಸಾಧ್ಯವಿಲ್ಲ. ಈ ರೀತಿ ಮಾತನಾಡುವವರನ್ನು ಯಾವ ತಾಯಿ, ಹೆಂಡತಿ ಅಥವಾ ಮಗಳು ಕ್ಷಮಿಸುವುದಿಲ್ಲ" ಎಂದು ಬಿಜೆಪಿ ನಾಯಕ ಆಕ್ರೋಶ ಹೊರಹಾಕಿದ್ದಾರೆ.
ಈ ಕೂಡಲೇ ಉದಯನಿಧಿ ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸಿರುವ ಅವರು, "ಡಿಎಂಕೆ ಶಾಸಕ ಮಾರ್ಕಂಡೇಯನ್ ಅವರನ್ನು ಬಂಧಿಸುವುದಕ್ಕಿಂತಲೂ, ಈ ರೀತಿಯ ಕೀಳುಮಟ್ಟದ ಭಾಷಣ ಮಾಡಿದ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿ ಜೈಲಿಗಟ್ಟಿದರೆ ತಮಿಳುನಾಡು ಮುಖ್ಯಮಂತ್ರಿಗಳಿಗೆ ಹೆಚ್ಚು ಕೀರ್ತಿ ಬರಲಿದೆ. ಈ ರೀತಿಯ ಭಾಷಣಕ್ಕೆ ನ್ಯಾಯಾಲಯಗಳು ಶಿಕ್ಷೆ ವಿಧಿಸುತ್ತವೆಯೋ ಅಥವಾ ಜಾಮೀನು ನೀಡುತ್ತವೆಯೋ ನೋಡೋಣ" ಎಂದು ಸವಾಲು ಹಾಕಿದ್ದಾರೆ. ಉದಯನಿಧಿ ಅವರ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲೂ ಭಾರಿ ವಿರೋಧ ವ್ಯಕ್ತವಾಗಿದ್ದು, ನೆಟ್ಟಿಗರು ಡಿಎಂಕೆ ನಾಯಕನ ವಿರುದ್ಧ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾರೇ ಆಗಲಿ ಅವರ ವಿರುದ್ಧ ಇಂತಹ ನೀಚ ಹೇಳಿಕೆಗಳನ್ನು ನೀಡುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದು ಆ ವಂಶದ ಮನಸ್ಥಿತಿ, ರಾಜಕೀಯ ಸಂಸ್ಕೃತಿ ಮತ್ತು ಕುಸಿಯುತ್ತಿರುವ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ," ಎಂದು ಟಿವಿ ಕೆ (TVK) ಶಾಸಕ ರೇವಂತ್ ಚರಣ್ ಬರೆದುಕೊಂಡಿದ್ದು, ಇದು ಆ ರಾಜಕಾರಣಿಯ ಅತ್ಯಂತ ಕೀಳುಮಟ್ಟದ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


