ಮುಂಬೈ(ಫೆ.17): ದೇಶದಲ್ಲಿ ನಿತ್ಯ ಅತಿಹೆಚ್ಚು ಕೊರೋನಾ ಸೋಂಕು ವರದಿಯಾಗುವ ರಾಜ್ಯಗಳ ಪಟ್ಟಿಯಲ್ಲಿ 42 ದಿನಗಳ ನಂತರ ಮತ್ತೆ ಮಹಾರಾಷ್ಟ್ರ ನಂ.1 ಸ್ಥಾನಕ್ಕೆ ಬಂದಿದೆ. ಇಷ್ಟುದಿನ ಕೇರಳ ಈ ಸ್ಥಾನದಲ್ಲಿತ್ತು. ಸೋಮವಾರ ಒಂದೇ ದಿನ 3,365 ಸೋಂಕಿತರು ಪತ್ತೆಯಾಗುವುದರೊಂದಿಗೆ ಕೇರಳವನ್ನು ಮಹಾರಾಷ್ಟ್ರ ಹಿಂದಿಕ್ಕಿದೆ.

ರಾಜ್ಯಪಾಲರ ಜತೆ ಗುದ್ದಾಟ: ಹೆಲಿಪ್ಯಾಡ್‌ ಬದಲಿಸಿದ ಸಿಎಂ!

ಮಹಾರಾಷ್ಟ್ರದಲ್ಲಿ, ಅದರಲ್ಲೂ ರಾಜಧಾನಿ ಮುಂಬೈನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಮುಂಬೈನಲ್ಲಿ ಲಾಕ್‌ಡೌನ್‌ ಜಾರಿಗೊಳಿಸುವ ಬಗ್ಗೆ ಮಹಾನಗರ ಪಾಲಿಕೆ ಚಿಂತನೆ ನಡೆಸುತ್ತಿದೆ. ಬಿಎಂಸಿ ಮೇಯರ್‌ ಕಿಶೋರಿ ಪೆಡ್ನೇಕರ್‌ ಮಂಗಳವಾರ ಈ ಸುಳಿವು ನೀಡಿದ್ದು, ‘ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಜನರು ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಮುಂಬೈನಲ್ಲಿ ಲಾಕ್‌ಡೌನ್‌ ಜಾರಿಗೊಳಿಸಬೇಕಾಗಿ ಬರಬಹುದು’ ಎಂದು ಹೇಳಿದರು. ಇನ್ನು, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಭಾನುವಾರ ‘ಕೇಸುಗಳ ಸಂಖ್ಯೆ ಹೀಗೇ ಹೆಚ್ಚುತ್ತಿದ್ದರೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಕಠಿಣ ನಿಯಮ ಜಾರಿಗೊಳಿಸಲಾಗುವುದು’ ಎಂದು ಹೇಳಿದ್ದರು.

ವಿಮಾನ ಟಿಕೆಟ್‌ ದರ ಮತ್ತಷ್ಟು ಏರಿಕೆ

ಮಹಾರಾಷ್ಟ್ರದಲ್ಲಿ ಸೋಮವಾರ 3,365 ಪ್ರಕರಣ ದಾಖಲಾಗಿದ್ದರೆ, ಕೇರಳದಲ್ಲಿ 2,884 ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರದಲ್ಲಿ ಈವರೆಗೆ 20 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 50000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.