ಮುಂಬೈ(ಫೆ.14): ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರ ಮುಸುಕಿನ ಗುದ್ದಾಟ ಮತ್ತಷ್ಟುತಾರಕಕ್ಕೇರಿದೆ.

ರಾಜ್ಯಪಾಲರ ಉತ್ತರಾಖಂಡ ಭೇಟಿಗೆ ಅಘಾಡಿ ಸರ್ಕಾರ ಸರ್ಕಾರಿ ವಿಮಾನ ನಿರಾಕರಿಸಿದ ಬೆನ್ನಲ್ಲೇ, ಠಾಕ್ರೆ ರಾಜಭವನದ ಹೆಲಿಪ್ಯಾಡನ್ನು ಬಿಟ್ಟು, ಮಹಾಲಕ್ಷ್ಮೇ ರೇಸ್‌ಕೋರ್ಸ್‌ ಹೆಲಿಪ್ಯಾಡ್‌ನಿಂದ ಜೌಹಾರ್‌ ಜಿಲ್ಲೆಗೆ ಪ್ರಯಾಣ ಬೆಳೆಸಿದ್ದಾರೆ. ವಾಪಸ್‌ ಮರಳುವಾಗಲೂ ಕಾಪ್ಟರ್‌ ಲ್ಯಾಂಡಿಂಗ್‌ಗೆ ಇದೇ ಹೆಲಿಪ್ಯಾಡ್‌ ಬಳಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಮುಖ್ಯಮಂತ್ರಿಗಳ ಈ ನಿರ್ಧಾರಕ್ಕೆ ಕಾರಣ ತಿಳಿದುಬಂದಿಲ್ಲ.

ಈ ನಡುವೆ ಫೆ.15ರಂದು ಉದ್ಧವ್‌ ಠಾಕ್ರೆ ‘ಜೈಲು ಪ್ರವಾಸೋದ್ಯಮ’ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.

ಉತ್ತರಾಖಂಡದಲ್ಲಿ ನಡೆದ ನೀರ್ಗಲ್ಲು ಸ್ಫೋಟ ದುರಂತ ಹಿನ್ನೆಲೆಯಲ್ಲಿ ಗುರುವಾರ ತವರು ಜಿಲ್ಲೆಗೆ ಭೇಟಿ ನೀಡಲು ಹೊರಟಿದ್ದ ರಾಜ್ಯಪಾಲ ಕೋಶಿಯಾರಿ ಅವರಿಗೆ ಮಹಾರಾಷ್ಟ್ರ ಸರ್ಕಾರ ಸರ್ಕಾರಿ ವಿಶೇಷ ವಿಮಾನ ಬಳಕೆಗೆ ಅನುಮತಿ ನೀಡಿರಲಿಲ್ಲ. 2 ಗಂಟೆ ಕಾದು ಬಳಿಕ ಬೇರೊಂದು ವಾಣಿಜ್ಯ ವಿಮಾನದಲ್ಲಿ ರಾಜ್ಯಪಾಲರು ಪ್ರಯಾಣ ಬೆಳೆಸಿದ್ದರು.