* ಪಾಕ್‌ ಸಂಘಟನೆ ದಾವತ್‌ ಜತೆ ಹಂತಕರ ಸಂಪರ್ಕ!* ಕರಾಚಿಗೂ ಹೋಗಿ ಬಂದಿದ್ದ ಹಂತಕ ಮೊಹಮ್ಮದ್‌* ಪಾಕ್‌ ನಂಟಿನತ್ತ ಇನ್ನು ತನಿಖೆ ಕೇಂದ್ರೀಕೃತ?

ಜೈಪುರ(ಜೂ.30): ಉದಯಪುರದಲ್ಲಿ ಹಿಂದೂ ಟೇಲರ್‌ ಹತ್ಯೆ ಮಾಡಿದ ಇಬ್ಬರು ಹಂತಕರು ಪಾಕಿಸ್ತಾನದ ‘ದಾವತ್‌-ಎ-ಇಸ್ಲಾಮಿ’ ಎಂಬ ಸಂಘಟನೆ ಜತೆ ಸಂಪರ್ಕ ಹೊಂದಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಹಂತಕರಲ್ಲಿ ಒಬ್ಬಾನಾದ ಘೌಸ್‌ ಮೊಹಮ್ಮದ್‌, 2014ರಲ್ಲಿ ಪಾಕಿಸ್ತಾನದ ಕರಾಚಿಗೂ ಹೋಗಿ ಬಂದಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದ್ದು, ಇನ್ನು ಪಾಕ್‌ ಸಂಪರ್ಕದ ಬಗ್ಗೆ ತನಿಖೆ ಕೇಂದ್ರೀಕೃತವಾಗಲಿದೆ.

ಇದೇ ವೇಳೆ, ಇನ್ನೂ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ರಾಜಸ್ಥಾನ ಡಿಜಿಪಿ ಎಂ.ಎಲ್‌. ಲಾಥರ್‌ ಹೇಳಿದ್ದಾರೆ.

ಕೊಲೆಗೆ ಕೊಲೆಯಿಂದಲೇ ಉತ್ತರ: ಕೆ.ಎಸ್‌.ಈಶ್ವರಪ್ಪ

ದಾವತ್‌ ಎ ಇಸ್ಲಾಮಿ ಎಂಬುದು ಪಾಕಿಸ್ತಾನದ ಧಾರ್ಮಿಕ ಆಂದೋಲನ ನಡೆಸುವ ಸುನ್ನಿ ಮುಸ್ಲಿಂ ಸಂಘಟನೆ. ಪ್ರವಾದಿ ಮೊಹಮ್ಮದರ ತತ್ವಗಳನ್ನು ಸಾರುವುದು ಇದರ ಉದ್ದೇಶ. 194 ದೇಶಗಳಲ್ಲಿ ಇದರ ವ್ಯಾಪ್ತಿ ಚಾಚಿದೆ. 1981ರಲ್ಲಿ ಮೌಲಾನಾ ಇಲಿಯಾಸ್‌ ಅಟ್ಟಾರಿ ಎಂಬಾತ ಇದನ್ನು ಸ್ಥಾಪಿಸಿದ್ದ. ಈ ಸಂಘಟನೆಯ ನಂಟು ಹೊಂದಿದವರು ಅಟ್ಟಾರಿಗೆ ಗೌರವ ನೀಡುವ ಸಲುವಾಗಿ ‘ಅಟ್ಟಾರಿ’ ಎಂಬ ಉಪನಾಮವನ್ನು ಇಟ್ಟುಕೊಳ್ಳುವುದು ಉಂಟು.

1989ರಲ್ಲಿ ಭಾರತಕ್ಕೆ ಕಾಲಿಟ್ಟಈ ಸಂಘಟನೆ, ಭಾರತದಲ್ಲಿ ಮತಾಂತರ ಮಾಡುವ ಆರೋಪ ಹೊತ್ತತಿದೆ. ‘ಮದನಿ’ ಎಂಬ ಟೀವಿ ಚಾನೆಲ್‌ ಅನ್ನೂ ತತ್ವ ಪ್ರಚಾರಕ್ಕೆ ನಡೆಸುತ್ತದೆ.

ಆಗಿದ್ದೇನು?

ಉದಯ್‌ಪುರದ ಧನಮಂಡಿ ಪ್ರದೇಶದಲ್ಲಿರುವ ಕನ್ಹಯ್ಯಾ ಲಾಲ್‌ ಎಂಬಾತನ ಟೈಲರ್‌ ಅಂಗಡಿಗೆ ಆಗಮಿಸಿದ ಮಹಮ್ಮದ್‌ ರಿಯಾಜ್‌ ಅಖ್ತಾರಿ ಮತ್ತು ಮಹಮ್ಮದ್‌ ಬಟ್ಟೆಹೊಲೆಸುವ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಂಗಿಯ ಅಳತೆಯನ್ನು ಕನ್ಹಯ್ಯಾ ಲಾಲ್‌ ತೆಗೆದುಕೊಳ್ಳುವ ವೇಳೆ ಏಕಾಏಕಿ ದೊಡ್ಡ ಆಯುಧವೊಂದನ್ನು ಹೊರತೆಗೆದ ರಿಯಾಜ್‌ ಕತ್ತು ಕತ್ತರಿಸಿ ಹಾಕಿದ್ದಾನೆ. ಈ ಇಡೀ ಘಟನಾವಳಿಗಳನ್ನು ಮೊಹಮ್ಮದ್‌ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ.

ಇದಾದ ಕೆಲ ಹೊತ್ತಿನಲ್ಲೇ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ ಧರ್ಮಾಂಧರು, ಇಸ್ಲಾಂಗೆ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ನಮ್ಮ ಕತ್ತಿ ಅವರನ್ನು ಬಲಿ ಪಡೆಯಲಿದೆ ಎಂದಿದ್ದಾರೆ. ಅಲ್ಲದೆ ಪರೋಕ್ಷವಾಗಿ ನೂಪುರ್‌ ಶರ್ಮಾ ಅವರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.

ಟೇಲರ್‌ ಶಿರಚ್ಛೇದ ಮಾಡಿದವರಿಗೆ ಕಠಿಣ ಶಿಕ್ಷೆ: ಎಚ್‌ಡಿಕೆ ಆಗ್ರಹ

ಈ ವಿಡಿಯೋ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಉದಯ್‌ಪುರ ಸೇರಿದಂತೆ ಎಲ್ಲೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಕೋಮುಗಲಭೆಯ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತ್ತು ನೆರೆಯ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.