ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಇಬ್ಬರು ಸಂಸದರಾದ ಓಂ ರಾಜೆ ನಿಂಬಾಳ್ಕರ್ ಮತ್ತು ನಾಗೇಶ್ ಪಾಟೀಲ್ ಅಷ್ಟಿಕರ್, ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಅವಾಚ್ಯ ನಿಂದನೆ ಮತ್ತು ಅಭಿವೃದ್ಧಿ ಅನುದಾನದ ಕೊರತೆಯೇ ಪಕ್ಷಾಂತರಕ್ಕೆ ಕಾರಣ ಎಂದು ಅಷ್ಟಿಕರ್ ಸ್ಪಷ್ಟಪಡಿಸಿದ್ದು, ಈ ಬೆಳವಣಿಗೆಯನ್ನು ಫಡ್ನವೀಸ್ 'ಆಪರೇಷನ್ ಸಕ್ಸಸ್' ಎಂದು ಬಣ್ಣಿಸಿದ್ದಾರೆ.

ಛತ್ರಪತಿ ಸಂಭಾಜಿನಗರ: ಠಾಕ್ರೆ ಬಣದ 6 ಶಿವಸೇನಾ (ಯುಬಿಟಿ) ಸಂಸದರು ಬಂಡಾಯ ಎದ್ದಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇಬ್ಬರು ಸಂಸದರು ಭಾನುವಾರ ಬಹಿರಂಗವಾಗಿ ಶಿಂಧೆ ಬಣದ ಶಿವಸೇನೆ ಸೇರ್ಪಡೆ ಘೋಷಣೆ ಮಾಡಿದ್ದಾರೆ. ಓಂ ರಾಜೆ ನಿಂಬಾಳ್ಕರ್‌ ಹಾಗೂ ನಾಗೇಶ್ ಪಾಟೀಲ್ ಅಷ್ಟಿಕರ್ ಅವರೇ ಆ ಸಂಸದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರ ನಡುವೆಯೇ, ‘ಆಪರೇಷನ್‌ ಸಕ್ಸಸ್‌. ಪೇಷಂಟ್‌ ಹೆಲ್ದಿ’ (ಸಂಸದರ ಸೆಳೆವ ಕಾರ್ಯಾಚರಣೆ ಯಶಸ್ವಿ ಆಗಿದೆ) ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಸೂಚ್ಯವಾಗಿ ಹೇಳಿದ್ದಾರೆ. ಶಿಂಧೆ ಶಿವಸೇನೆ ಮುಖ್ಯಸ್ಥ, ಡಿಸಿಎಂ ಏಕನಾಥ ಶಿಂಧೆ ಕೂಡ ಈ ಮಾತು ಅನುಮೋದಿಸಿದ್ದಾರೆ.

ಅವಾಚ್ಯ ಶಬ್ದ ಬಳಸಿ ನಿಂದನೆ

ಭಾನುವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅಷ್ಟಿಕರ್‌, ‘ಜೂನ್ 18 ರವರೆಗೆ ಪಕ್ಷಾಂತರ ನಿರ್ಧಾರ ಮಾಡಿರಲಿಲ್ಲ. ಆದರೆ ನನ್ನ ವಿರುದ್ಧ ಅವಾಚ್ಯ ಬೈಗುಳ ಅಂದು ಕೇಳಿಬಂತು. ಆಗಲೇ ಪಕ್ಷ ಬಿಡಲು ನಿರ್ಧರಿಸಿದೆವು’ ಎಂದರು. ಈ ಮೂಲಕ ತಮ್ಮನ್ನು ‘ಗಾಂ**’ ಎಂದು ಅವಾಚ್ಯ ಶಬ್ದದಿಂದ ಬೈದ ಉದ್ಧವ್‌ ಠಾಕ್ರೆ ಆಪ್ತ ಸಂಜಯ ರಾವುತ್‌ ಬಗ್ಗೆ ಕಿಡಿಕಾರಿದರು.

‘ನಾನು ಸಿದ್ಧಾಂತದಲ್ಲಿ ರಾಜಿ ಆಗಿಲ್ಲ/ ಒಂದು ಶಿವಸೇನೆಯಿಂದ ಇನ್ನೊಂದಕ್ಕೆ ಹೋಗುತ್ತಿದ್ದೇನೆ ಅಷ್ಟೆ. ವಿಪಕ್ಷದಲ್ಲಿ ಇದ್ದ ಕಾರಣ 5 ಕೋಟಿ ರು. ಸಂಸದೀಯ ಅನುದಾನ ಬಿಟ್ಟು ಬೇರೇನೂ ಬರುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯ ಕೈಗೊಳ್ಳುವುದೇ ಕಷ್ಟವಾಗಿತ್ತು. ಹೀಗಾಗಿ ಶಿಂಧೆ ಬಣದ ಶಿವಸೇನೆ ಸೇರುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ನಿಂಬಾಳ್ಕರ್‌ ಕೂಡ ಗುಡ್‌ಬೈ:

ಈ ನಡುವೆ, 6 ಬಂಡಾಯ ಯುಬಿಟಿ ಶಿವಸೇನೆ ಸಂಸದರಲ್ಲಿದ್ದಾರೆ ಎನ್ನಲಾಗಿದ್ದ ಸಂಸದ ಓಂಪ್ರಕಾಶ್ ರಾಜೇ ನಿಂಬಾಳ್ಕರ್ ಕ್ಷೇತ್ರದ ಜನಸಂಪರ್ಕ ಸಭೆ ಬಳಿಕ ಮಾತಾಡಿ, ಶಿಂಧೆ ಸೇನೆ ಸೇರುವ ಘೋಷಣೆ ಮಾಡಿದರು.

ಬಂಡಾಯ ಸಂಸದರು ಸಂಪರ್ಕದಲ್ಲಿ:

‘ಈ ನಡುವೆ ಅತೃಪ್ತ ಸಂಸದರು ತಮ್ಮ ಕ್ಷೇತ್ರದಲ್ಲಿ ಜನರ ಆಕ್ರೋಶಕ್ಕೆ ಹೆದರಿದ್ದಾರೆ. ಇನ್ನೂ ಕೆಲವರು ಶಿವಸೇನೆ ಜತೆಗೆ ಸಂಪರ್ಕದಲ್ಲಿದ್ದಾರೆ’ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ.