Parappana Agrahara Jail Scandal Videos Show ISIS Terrorists Rapists Receiving Royal Treatment ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರು, ಅ*ತ್ಯಾಚಾರಿಗಳು ಸೇರಿದಂತೆ ಕುಖ್ಯಾತ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿರುವ ವಿಡಿಯೋಗಳು ಬಯಲಾಗಿವೆ.
ಬೆಂಗಳೂರು (ನ.8): ರಾಜ್ಯದ ಅತಿದೊಡ್ಡ ಜೈಲುಗಳಲ್ಲಿ ಒಂದಾಗಿರುವ ಪರಪ್ಪನ ಅಗ್ರಹಾರ ಇನ್ನೆಂದೂ ಸರಿಪಡಿಸಲಾಗದ ಮಟ್ಟಕ್ಕೆ ಕುಲಗೆಟ್ಟು ಹೋಗಿದೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ ಮತ್ತಷ್ಟು ವಿಡಿಯೋಗಳು ಬಯಲಾಗಿವೆ. ಹಿಂದೆ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದಕ್ಕೆ ಸುದ್ದಿಯಾಗಿದ್ದ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಅದರಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಸೆಂಟ್ರಲ್ ಜೈಲಲ್ಲಿರುವ ಅತ್ಯಂತ ಕುಖ್ಯಾತ ಟೆರರಿಸ್ಟ್‌ಗಳು, ಸ್ಮಗ್ಲರ್ಸ್, ರೇಪಿಸ್ಟ್‌ಗಳಿಗೆ ರಾಜಾತಿಥ್ಯ ನೀಡಿರುವ ವಿಡಿಯೋಗಳು ಮತ್ತೆ ಹೊರಬಂದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಗಳೇ ದೊಡ್ಡ ಕಳ್ಳರು ಅನ್ನೋದು ವಿಡಿಯೋ ಮೂಲಕ ಸಾಬೀತಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಸಿಸ್ ಉಗ್ರ ಹಾಗೂ ರೇಪಿಸ್ಟ್‌ಗಳಿಗೆ ರಾಜಾತಿಥ್ಯ ನೀಡಿರುವ, ದುಡ್ಡು ಕೊಟ್ರೆ ಐಷಾರಾಮಿ ಜೀವನ ಕಲ್ಪಿಸಿರುವ ವಿಡಿಯೋಗಳು ವೈರಲ್ ಆಗಿದೆ. ದುಡ್ಡು ಕೊಟ್ಟರೆ ಏನ್ ಬೇಕಾದ್ರೂ ಸಿಗುತ್ತೇ ಎನ್ನೊದಕ್ಕೆ ಮತ್ತಷ್ಟು ವಿಡೀಯೋಗಳು ಲೀಕ್ ಆಗಿವೆ. ಕೆಲ ದಿನಗಳ ಹಿಂದೆ ರೌಡಿಶೀಟರ್ ಗುಬ್ಬಚ್ಚಿ ಸೀನನ ಬರ್ತ್ ಡೇ ಪಾರ್ಟಿ ವಿಡಿಯೀ ಹೊರಬಂದ ನಂತರ ಈ ವಿಡಿಯೋಗಳು ಪ್ರಸಾರವಾಗಿದೆ.
ರೇಪಿಸ್ಟ್ ಉಮೇಶ್ ರೆಡ್ಡಿ ಬಿಂದಾಸ್ ಲೈಫ್
ಹಲವು ಅ*ತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಕೃತಕಾಮಿ ಉಮೇಶ್ ರೆಡ್ಡಿ ತುಂಬಾ ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೈಲಲ್ಲಿರುವ ಉಮೇಶ್ ರೆಡ್ಡಿ ಕೈಯಲ್ಲಿ ಮೊಬೈಲ್ ಹಾಗೂ ಆತ ಇರುವ ರೂಮ್‌ನಲ್ಲಿ ಟಿವಿ ಇರೋದು ವಿಡಿಯೋದಲ್ಲಿ ದಾಖಲಾಗಿದೆ. ಆತನ ಬಳಿ ಎರಡು ಆಂಡ್ರಾಯ್ಡ್ ಫೋನ್‌ಗಳು ಪತ್ತೆಯಾಗಿದೆ. ಕೀಪ್ಯಾಡ್ ಮೊಬೈಲ್ ಇರಿಸಿಕೊಂಡು ಆತ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅದರೊಂದಿಗೆ ಆತನೇ ತನಗೆ ಬೇಕಾದ ಅಡುಗೆ ಮಾಡಿಕೊಳ್ಳುತ್ತಿದ್ದಾನೆ. ಜೈಲಾಧಿಕಾರಿಗಳಿಂದ ಉಮೇಶ್ ರೆಡ್ಡಿಗೆ ರಾಜಾತಿಥ್ಯ ನೀಡಲಾಗಿದೆ.ರೇಪಿಸ್ಟ್ ಉಮೇಶ್ ರೆಡ್ಡಿಗೆ ಜೈಲಿನಲ್ಲಿ ಹೈಫೈ ಟ್ರೀಟ್‌ಮೆಂಟ್ ಸಿಗುತ್ತಿದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ರನ್ಯಾರಾವ್ ಪ್ರಿಯಕರನದ್ದೂ ಚಿಂತೆ ಇಲ್ಲದ ಜೀವನ
ಉಮೇಶ್ ರೆಡ್ಡಿ ಮಾತ್ರವಲ್ಲದೆ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರನ್ಯಾ ರಾವ್ ಅವರ ಪ್ರಿಯಕರ ತೆಲುಗು ನಟ ತರುಣ್ ಕೂಡ ಆರಾಮಾವಾಗಿ ಜೀವನ ಕಳೆಯುತ್ತಿದ್ದಾನೆ. ಪ್ರಕರಣದಲ್ಲಿ ತನಿಖೆ ನಡೆಸಿ ಕಸ್ಟಡಿಗೆ ಪಡೆದು ನಂತರ ಈತನನ್ನು ಪೊಲೀಸರು ಜೈಲಿಗೆ ಕಳಿಸಿದ್ದರು. ಇದೀಗ ಜೈಲಲ್ಲಿ ತರುಣ್‌ನ ಬಿಂದಾಸ್ ಲೈಫ್ ಗೊತ್ತಾಗಿದೆ. ಕೈನಲ್ಲಿ ಮೊಬೈಲ್ ಜೊತೆಗೆ ಆತನ ಸೆಲ್ ನಲ್ಲಿ ಟಿವಿ ಕೂಡ ಇದೆ. ಕೈದಿಗಳ ರಾಜಾತಿಥ್ಯಕ್ಕೆ ಜೈಲಾಧಿಕಾರಿಗಳು, ಸಿಬ್ಬಂದಿಗಳ ಸಾಥ್ ನೀಡಿದ್ದಾರೆ.
ಬಾಂಗ್ಲಾ ಟೆರರಿಸ್ಟ್ ಕೈಯಲ್ಲಿ ಮೊಬೈಲ್ ಫೋನ್
ರೇಪಿಸ್ಟ್, ಸ್ಮಗ್ಲರ್ಸ್ ಮಾತ್ರವಲ್ಲ ಬಾಂಗ್ಲಾ ಮೂಲದ ಟೆರರಿಸ್ಟ್‌ಗಳ ಕೈಯಲ್ಲೂ ಮೊಬೈಲ್ ಇರುವ ವಿಡಿಯೋ ಸಿಕ್ಕಿದೆ. ಲಷ್ಕರ್ ತೋಯ್ಬಾ ಭಯೋತ್ಪಾದಕರ ಕೈಯಲ್ಲಿ ಆಂಡ್ರಾಯ್ಡ್ ಮೊಬೈಲ್ ಇದೆ. ಟೆರರಿಸ್ಟ್‌ಗಳ ಕೈಯಲ್ಲಿ ಮೊಬೈಲ್ ಇದ್ದರೆ ದೇಶದ ಭದ್ರೆತೆಯ ಗತಿ ಏನು ಅನ್ನೋ ಪ್ರಶ್ನೆ ಎದುರಾಗಿದೆ.
ಬೇಲಿಯೇ ಎದ್ದು ಹೊಲ ಮೇಯ್ದಂತೆ ಪರಪ್ಪನ ಅಗ್ರಹಾರ ಜೈಲಿನ ಪರಿಸ್ಥಿತಿ ಆಗಿದೆ. ದೇಶ ವಿರೋಧಿಗಳಿಗೆ ಮೊಬೈಲ್ ನೀಡ್ತಾ ಇರೋರು ಯಾರು? ಅಂತವರಿಗೆ ರಾಜಾತಿಥ್ಯ ನೀಡುವ ಜೈಲಾಧಿಕಾರಿಗಳು, ಸಿಬ್ಬಂದಿಗಳು ಕೂಡ ದೇಶದ್ರೋಹಿಗಳೇ ಆಗಿದ್ದಾರೆ. ಇದರಿಂದಾಗಿ ಜೈಲಿನಲ್ಲಿ ಇದ್ದುಕೊಂಡು ಭಯೋತ್ಪಾದಕ ಚಟುವಟಿಕೆ ಮಾಡೋ ಸಾಧ್ಯತೆ ಇದೆ. ವಿಡಿಯೋ ಕಾಲ್, ಪೋನ್ ಮಾಡಿ ಮಾತಾನಾಡುತ್ತಿರುವ ಟೆರರಿಸ್ಟ್‌ಗಳು ಮಾತನಾಡುತ್ತಿದ್ದಾರೆ. ಭಯೋತ್ಪಾದಕ ಚಟುವಟಿಕೆ ನಡೆಸೋ ಕ್ರಿಮಿಗಳಿಗೆ ಒಂಚೂರು ಕಡಿವಾಣ ಇಲ್ಲ. ದೇಶದ್ರೋಹಿಗಳಿಗೂ ಪರಪ್ಪನ ಅಗ್ರಹಾರ ಜೈಲು ಫೈವ್ ಸ್ಟಾರ್ ಹೋಟೆಲ್ ರೀತಿ ಆಗಿದೆ.

ವಿಡಿಯೋ ಪರಿಶೀಲನೆ ಮಾಡ್ತೇವೆ ಎಂದ ಎಡಿಜಿಪಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳ ಐಷಾರಾಮಿ ಜೀವನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ವಿಡಿಯೋ ಪರಿಶೀಲನೆ ಮಾಡೋದಾಗಿ ಬಂಧಿಖಾನೆ ಎಡಿಜಿಪಿ ದಯಾನಂದ್ ಮಾಹಿತಿ ನೀಡಿದ್ದಾರೆ. ಖೈದಿ ಉಮೇಶ್ ರೆಡ್ಡಿ, ತರುಣ್ ವಿಡಿಯೋ ಗಳನ್ನ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದರ ಬಗ್ಗೆ ತಿಳಿಸಿ ಹೇಳುತ್ತೇನೆ ಎಂದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ವಿಡಿಯೋ ವೈರಲ್, ಸ್ಥಳೀಯರ ಆಕ್ರೋಶ
ಪರಪ್ಪನ ಅಗ್ರಹಾರ ಜೈಲಿನೊಳಗೆ ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಕ್ಕಪಕ್ಕದ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೈಲಿನ ಅಕ್ಕಪಕ್ಕದ ಪ್ರದೇಶದಲ್ಲಿ ಸರಿಯಾದ ಮೊಬೈಲ್ ನೆಟ್‌ವರ್ಕ್ ಇಲ್ಲ.10,000 ಜನರು ನೆಟ್ ವರ್ಕ್ ಇಲ್ಲದೆ ಬಳಲುತ್ತಿದ್ದಾರೆ. OTP ಇಲ್ಲ, ಆಂಬ್ಯುಲೆನ್ಸ್, ಆಹಾರ ವಿತರಣೆ ಆಗೋದಿಲ್ಲ. ಶಾಲಾ GPS ನಂತಹ ತುರ್ತು ಸೇವೆಗಳಿಲ್ಲ. ಮಕ್ಕಳು, ವಿದ್ಯಾರ್ಥಿಗಳು ಓದಲು ಸಾಧ್ಯವಾಗುತ್ತಿಲ್ಲ. ಯಾವುದೇ ತುರ್ತು ಸಂದರ್ಭದಲ್ಲಿ ಹಿರಿಯ ನಾಗರಿಕರು ಯಾವುದೇ ಕರೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ನಾಗರಿಕರು ಅನೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ, ಆದರೆ ಯಾವುದೇ ಪ್ರಯೋಜನವಿಲ್ಲವೆಂದು ಕಿಡಿಕಾರಿದ್ದಾರೆ. ಆದರೆ ಜೈಲಿನ ಖೈದಿಗಳು ಜೈಲಿನಲ್ಲಿ ಬಿಂದಾಸ್ ಆಗಿ ಫೋನ್ ಬಳಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
