ಆಕ್ರೋಶದ ಕಿಡಿಗೆ ಕಾರಣವಾಗಿದ್ದ 26 ಪ್ರವಾಸಿಗರ ನರಮೇಧಕ್ಕೆ ಸಾಕ್ಷಿಯಾಗಿದ್ದ ಪಹಲ್ಗಾಂ ದಾಳಿಯ ಉಗ್ರರನ್ನು ಬಗ್ಗುಬಡಿಯುವ ಭಾರತೀಯ ತನಿಖಾ ಸಂಸ್ಥೆಗಳ ಪ್ರಯತ್ನಕ್ಕೆ ಇದೀಗ ಮಹತ್ವದ ಗೆಲುವು ಸಿಕ್ಕಿದೆ.

ಶ್ರೀಗನಗರ: ವಿಶ್ವದಾದ್ಯಂತ ಆಕ್ರೋಶದ ಕಿಡಿಗೆ ಕಾರಣವಾಗಿದ್ದ 26 ಪ್ರವಾಸಿಗರ ನರಮೇಧಕ್ಕೆ ಸಾಕ್ಷಿಯಾಗಿದ್ದ ಪಹಲ್ಗಾಂ ದಾಳಿಯ ಉಗ್ರರನ್ನು ಬಗ್ಗುಬಡಿಯುವ ಭಾರತೀಯ ತನಿಖಾ ಸಂಸ್ಥೆಗಳ ಪ್ರಯತ್ನಕ್ಕೆ ಇದೀಗ ಮಹತ್ವದ ಗೆಲುವು ಸಿಕ್ಕಿದೆ. ಪಹಲ್ಗಾಂ ದಾಳಿಕೋರರಿಗೆ ಆಶ್ರಯ ನೀಡಿದ್ದ ಆರೋಪ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾಗಿ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ಭಾನುವಾರ ತಿಳಿಸಿದೆ.

ವಿಚಾರಣೆ ವೇಳೆ ಬಂಧಿತರು ದಾಳಿಯಲ್ಲಿ ಪಾಲ್ಗೊಂಡಿದ್ದ ಮೂವರು ಪಾಕಿಸ್ತಾನ ಮೂಲದ ಲಷ್ಕರ್‌ ಎ ತೊಯ್ಬಾ ಉಗ್ರರ ವಿವರಗಳ ಕುರಿತು ಬಾಯ್ಬಿಟ್ಟಿದ್ದಾರೆ ಎಂದು ಎನ್‌ಐಎ ಖಚಿತಪಡಿಸಿದೆ.

ಬಾಟ್‌ಕೋಟ್‌ನ ಪರ್ವೇಜ್‌ ಅಹಮದ್‌ ಜೋಥರ್‌ ಮತ್ತು ಪಹಲ್ಗಾಂನ ಹಿಲ್‌ ಪಾರ್ಕ್‌ನ ಬಶೀರ್‌ ಅಹಮದ್‌ ಜೋಥರ್‌ ಬಂಧಿತ ಆರೋಪಿಗಳು. ಇವರ ಬಂಧನವು ಪಹಲ್ಗಾಂ ದಾಳಿಯ ಸೂತ್ರಧಾರರನ್ನು ಪತ್ತೆಹಚ್ಚಲು ಕಳೆದೆರಡು ತಿಂಗಳಿಂದ ಹಗಲು-ರಾತ್ರಿ ಹುಡುಕಾಟ ನಡೆಸುತ್ತಿರುವ ತನಿಖಾ ಸಂಸ್ಥೆಗಳಿಗೆ ಸಿಕ್ಕ ಮೊದಲ ಮಹತ್ವದ ಯಶಸ್ಸು ಎಂದು ಹೇಳಲಾಗುತ್ತಿದೆ.

ಆಹಾರ, ಆಶ್ರಯ ನೀಡಿದ್ದರು:

ಪಹಲ್ಗಾಂ ದಾಳಿಗೂ ಮುನ್ನ ಸಮೀಪದ ಹಿಲ್‌ ಪಾರ್ಕ್‌ನ ಗುಡಿಸಲೊಂದರಲ್ಲಿ ಪಾಕಿಸ್ತಾನ ಮೂಲದ ಮೂವರು ಉಗ್ರರು ಉಳಿದುಕೊಳ್ಳಲು ಬಂಧಿತ ಆರೋಪಿಗಳಾದ ಪರ್ವೇಶ್‌ ಮತ್ತು ಬಶೀರ್‌ ವ್ಯವಸ್ಥೆ ಮಾಡಿದ್ದರು. ಪಹಲ್ಗಾಂ ದಾಳಿಯ ಕುರಿತು ಅರಿವಿದ್ದೇ ಈ ಆರೋಪಿಗಳು ಉಗ್ರರಿಗೆ ಆಹಾರ, ಆಶ್ರಯ ಮತ್ತು ಸರಕು ಸಾಗಣೆಗೆ ನೆರವು ನೀಡಿದ್ದರು. ನಂತರ ಈ ಉಗ್ರರು ಏ.22ರಂದು ಧರ್ಮದ ಆಧಾರದ ಮೇಲೆ ಪಹಲ್ಗಾಂನಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಈ ಇಬ್ಬರ ವಿಚಾರಣೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿ ಕಲೆಹಾಕುವ ಪ್ರಯತ್ನ ನಡೆಯುತ್ತಿದೆ.

ಮಹತ್ವದ ತಿರುವು:

ಪಹಲ್ಗಾಂ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಿದ್ದರು. ಅನಂತನಾಗ್‌ ಮೂಲದ ಸ್ಥಳೀಯ ಉಗ್ರ ಆದಿಲ್‌ ಹುಸೇನ್‌ ಟೋಕರ್‌, ಪಾಕಿಸ್ತಾನಿ ಮೂಲದ ಉಗ್ರರಾದ ಹಶೀಂ ಮೂಸಾ ಮತ್ತು ಆಲಿ ಭಾಯ್‌ನ ರೇಖಾ ಚಿತ್ರ ಇದಾಗಿತ್ತು. ಇದೀಗ ಎನ್‌ಐಎ ಇಬ್ಬರನ್ನು ಬಂಧಿಸಿದ ಬಳಿಕ ಪಾಕಿಸ್ತಾನದ ಮೂವರು ಲಷ್ಕರ್‌ ಎ ತೊಯ್ಬಾ ಉಗ್ರರ ಗುರುತು ಪತ್ತೆಯಾಗಿದೆ. ಬಂಧಿತರು ನೀಡಿರುವ ಉಗ್ರರ ವಿವರಗಳಿಗೂ ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ ರೇಖಾಚಿತ್ರಕ್ಕೂ ವ್ಯತ್ಯಾಸವಿದೆ ಎಂದು ಎನ್‌ಐಎ ತಿಳಿಸಿದೆ.

ಪಹಲ್ಗಾಂ ದಾಳಿ ನಡೆದ ಎರಡು ತಿಂಗಳ ಬಳಿಕದ ಮೊದಲ ಬಂಧನ ಇದಾಗಿದೆ. ಬಂಧಿತರು ನೀಡಿದ ಮಾಹಿತಿ ಆಧಾರದ ಮೇಲೆ ತಲೆಮರೆಸಿಕೊಂಡಿರುವ ಉಗ್ರರು ಎಲ್ಲಿ ಅಡಗಿರಬಹುದೆಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಸದ್ಯಕ್ಕೆ ಇದು ಪಹಲ್ಗಾಂ ದಾಳಿಯ ತನಿಖೆಗೆ ಸಂಬಂಧಿಸಿ ದೊರೆತ ಮಹತ್ವದ ಯಶಸ್ಸಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.