ಜಮ್ಮು ಕಾಶ್ಮೀರದ ಉಗ್ರರ ದಾಳಿ, ಕುಂಭಮೇಳ ಮತ್ತು ಬೆಂಗಳೂರಿನ ಕಾಲ್ತುಳಿತ ಘಟನೆಗಳಲ್ಲಿ ಸರ್ಕಾರದ ಭದ್ರತಾ ವೈಫಲ್ಯವನ್ನು ಪ್ರಶ್ನಿಸಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ಗೊಂದು, ಬಿಜೆಪಿಗೊಂದು ಎರಡು ಮಾನದಂಡ ಏಕೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು (ಜೂ.6): ಜಮ್ಮು ಕಾಶ್ಮೀರದ ಪೆಹಲ್ಗಾಮ್ ಕಣಿವೆಯಲ್ಲಿ ಏಪ್ರಿಲ್ 2025ರಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ 20ಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದು, ಈ ದಾಳಿಯ ಹೊಣೆಯನ್ನು ಲಷ್ಕರೆ ತೊಯ್ಬಾದ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಆದರೆ ಇದುವರೆಗೂ ಉಗ್ರರು ಸಿಕ್ಕಿಲ್ಲ, ಇದು ದೇಶದ ದೊಡ್ಡ ಭದ್ರತಾ ವೈಫಲ್ಯ ಇದರ ಹೊಣೆ ಹೊತ್ತು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣ ಸಚಿವ ರಾಜನಾಥ್ ಸಿಂಗ್ ಯಾರಾದರೂ ರಾಜೀನಾಮೆ ಕೊಟ್ರಾ? ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
ಕುಂಭಮೇಳದಲ್ಲೂ ಕಾಲ್ತುಳಿತ; ಯೋಗಿ ರಾಜೀನಾಮೆ ಕೊಟ್ರಾ?
ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಹಲವರು ಮೃತರಾದರು. ಈ ದುರಂತದಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಇನ್ನೂವರೆಗೆ ಬಹಿರಂಗಪಡಿಸಿಲ್ಲ. ಕುಂಭಮೇಳದಂತಹ ದೊಡ್ಡ ಧಾರ್ಮಿಕ ಸಮಾರಂಭದಲ್ಲಿ ಭದ್ರತೆ ಮತ್ತು ಜನಸಂದಣಿಯ ಯೋಜನೆಯಲ್ಲಿ ವಿಫಲವಾದ ಯೋಗಿ ಸರ್ಕಾರ ರಾಜೀನಾಮೆ ಕೊಡಬೇಕಿತ್ತಲ್ಲವೇ? ಯಾಕೆ ಕೊಡಲಿಲ್ಲ? ಎಂದು ಖರ್ಗೆ ಪ್ರಶ್ನಿಸಿದರು.
ಇದನ್ನೂ ಓದಿ: ಲೋಪ ನಿಮ್ಮಲ್ಲಿದೆ ಐವರು ಪೊಲೀಸ್ ಅಧಿಕಾರಿಗಳ ಸಸ್ಪೆಂಡ್ ಮಾಡಿದ್ದೇಕೆ?; ಸರ್ಕಾರದ ವಿರುದ್ಧ ಸಾರಾ ಮಹೇಶ್ ಗರಂ
ಬೆಂಗಳೂರಿನಲ್ಲಿ ಕಾಲ್ತುಳಿತದ ಲೋಪ ಒಪ್ಪಿದ್ದೇವೆ ರಾಜೀನಾಮೆ ಯಾಕೆ ಕೊಡಬೇಕು?
ಬೆಂಗಳೂರಿನ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದದಲ್ಲಿ ಲೋಪವಾಗಿರುವುದು ನಾವು ಒಪ್ಪಿಕೊಂಡಿದ್ದೇವೆ. ರಾಜೀನಾಮೆ ಯಾಕೆ ಕೊಡಬೇಕು? ಕಾಂಗ್ರೆಸ್‌ಗೊಂದು, ಬಿಜೆಪಿಗೊಂದು ಎರಡು ಮಾನದಂಡ ಯಾಕೆ? ಮಾಧ್ಯಮಗಳು ಬಿಜೆಪಿಯವರಿಗೂ ಇದೇ ರೀತಿ ಕೇಳಿದರೆ ಉತ್ತರ ಕೊಡ್ತಾರಾ? ಎಂದು ಖರ್ಗೆ ಮಾಧ್ಯಮಗಳ ಮೇಲೆಯೇ ಗರಂ ಆದರು.
ಬೆಂಗಳೂರಿನಲ್ಲಿ ಕಾಲ್ತುಳಿದಲ್ಲಿ ಹನ್ನೊಂದು ಜನರು ಮೃತರಾಗಿದ್ದಾರೆ. ಕರ್ತವ್ಯಲೋಪ ಆರೋಪದ ಮೇಲೆ ಐವರು ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಸಸ್ಪೆಂಡ್ ಮಾಡಿದೆ. ಸರ್ಕಾರದ್ದೇ ಲೋಪವಿದ್ದರೂ ಅಧಿಕಾರಿಗಳ ಮೇಲೆ ಶಿಕ್ಷೆ ಯಾಕೆ? ಈ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ರಾಜ್ಯ ಸರ್ಕಾರದ ಮುಖ್ಯಮಂತ್ರಿ, ಡಿಸಿಎಂ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬ ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿದೆ.


