ಕೊಳತ್ತೂರು ಕ್ಷೇತ್ರದಲ್ಲಿ ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸಿ ಸುದ್ದಿಯಾಗಿದ್ದ ಟಿವಿಕೆ ಶಾಸಕ ವಿ.ಎಸ್. ಬಾಬು (75) ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಹೃದಯಸ್ತಂಭನದಿಂದ ನಿಧನರಾಗಿದ್ದಾರೆ.

ಚೆನ್ನೈ (ನ.19): 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಕೊಳತ್ತೂರು (Kolathur) ಕ್ಷೇತ್ರದಲ್ಲಿ ಸೋಲಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಶಾಸಕ ವಿ.ಎಸ್. ಬಾಬು (75) ಅವರು ದೀರ್ಘಕಾಲದ ಉಸಿರಾಟದ ತೊಂದರೆ ಹಾಗೂ ಹೃದಯಸ್ತಂಭನದಿಂದ ಗುರುವಾರ ನಿಧನರಾಗಿದ್ದಾರೆ. ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ (MGM Healthcare) ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನ 2.24ಕ್ಕೆ ಕೊನೆಯುಸಿರೆಳೆದಿದ್ದಾರೆ.

ಸೆಪ್ಟೆಂಬರ್ 9ರಿಂದ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶಾಸಕ ಬಾಬು ಅವರನ್ನು ಚೆನ್ನೈನ ಅಮಿಂಜಿಕರೈನಲ್ಲಿರುವ (Aminjikarai) ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಜ್ಞರ ತಂಡ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಉಸಿರಾಟದ ನೆರವಿನೊಂದಿಗೆ (Respiratory support) ಚಿಕಿತ್ಸೆ ನೀಡುತ್ತಿತ್ತು.

"ಅತ್ಯುತ್ತಮ ವೈದ್ಯಕೀಯ ಆರೈಕೆ ಮತ್ತು ನಮ್ಮ ವೈದ್ಯಕೀಯ ತಂಡದ ತೀವ್ರ ಪ್ರಯತ್ನಗಳ ಹೊರತಾಗಿಯೂ, ಅವರ ಆರೋಗ್ಯ ಸ್ಥಿತಿ ಹದಗೆಡುತ್ತಲೇ ಇತ್ತು. ತರುವಾಯ ಅವರಿಗೆ ಹೃದಯಸ್ತಂಭನ (Cardiac arrest) ಸಂಭವಿಸಿ ನವೆಂಬರ್ 19, 2026ರಂದು ಮಧ್ಯಾಹ್ನ 2:24ಕ್ಕೆ ನಿಧನರಾದರು' ಎಂದು ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಆಸ್ಪತ್ರೆಯ ಆಡಳಿತ ಮಂಡಳಿಯು ಬಾಬು ಅವರ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಸಂತಾಪ ಸೂಚಿಸಿದೆ.

ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾದ ಮರುದಿನವೇ ನಿಧನ!

ವಿಶೇಷವೆಂದರೆ, ಶಾಸಕರ ದೀರ್ಘಕಾಲದ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಕುರಿತು ಅಧಿಕೃತ ಮಾಹಿತಿ ಹಾಗೂ ಕ್ಷೇತ್ರದ ಆಡಳಿತಾತ್ಮಕ ವ್ಯವಸ್ಥೆಗಳ ವಿವರ ಕೋರಿ ಕೊಳತ್ತೂರು ಕ್ಷೇತ್ರದ ನಿವಾಸಿಯೊಬ್ಬರು ಮದ್ರಾಸ್ ಹೈಕೋರ್ಟ್ (Madras High Court) ಮೆಟ್ಟಿಲೇರಿದ ಕೇವಲ ಒಂದು ದಿನದ ನಂತರ ಬಾಬು ಅವರ ನಿಧನ ಸಂಭವಿಸಿದೆ. ಕೊಳತ್ತೂರು ಕ್ಷೇತ್ರದ ಸೆಂಬಿಯಂ (Sembium) ನಿವಾಸಿ ಜಿ. ದೇವರಾಜನ್ (G Devarajan) ಎಂಬುವವರು ನವೆಂಬರ್ 18ರಂದು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಬಾಬು ಅವರ ಆರೋಗ್ಯದ ಬಗ್ಗೆ ಕಾನೂನುಬದ್ಧವಾಗಿ ಅನುಮತಿಸಲಾದ ಮಾಹಿತಿಯನ್ನು ಬಹಿರಂಗಪಡಿಸಲು ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.

ಸೆಪ್ಟೆಂಬರ್ 9ರಂದು ಆಸ್ಪತ್ರೆಗೆ ದಾಖಲಾದ ಆರಂಭದಲ್ಲಿ ಆಸ್ಪತ್ರೆಯು ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯಕೀಯ ಬುಲೆಟಿನ್‌ಗಳನ್ನು ಬಿಡುಗಡೆ ಮಾಡಿತ್ತು. ಆದರೆ ಸೆಪ್ಟೆಂಬರ್ 22ರ ನಂತರ ಯಾವುದೇ ಹೊಸ ಅಧಿಕೃತ ಮಾಹಿತಿ ಸಾರ್ವಜನಿಕವಾಗಿ ಬಿಡುಗಡೆಯಾಗಿರಲಿಲ್ಲ. ನವೆಂಬರ್ 5 ಮತ್ತು ನವೆಂಬರ್ 12ರಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ತೃಪ್ತಿಕರ ಉತ್ತರ ಸಿಕ್ಕಿರಲಿಲ್ಲ. ಜೊತೆಗೆ ಶಾಸಕರ ಅನುಪಸ್ಥಿತಿಯಲ್ಲಿ ಕ್ಷೇತ್ರದ ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗೆ ಯಾವ ಪರ್ಯಾಯ ಆಡಳಿತಾತ್ಮಕ ವ್ಯವಸ್ಥೆ ಮಾಡಲಾಗಿದೆ ಎಂದು ದೇವರಾಜನ್ ಅರ್ಜಿಯಲ್ಲಿ ಪ್ರಶ್ನಿಸಿದ್ದರು.

ಈ ಹಿಂದೆ ತಮಿಳುನಾಡು ಆರೋಗ್ಯ ಸಚಿವ ಕೆ.ವಿ.ಎಸ್. ಅರುಣ್‌ರಾಜ್ (K V S Arunraj) ಅವರು ಸರ್ಕಾರಿ ವೈದ್ಯರು ಬಾಬು ಅವರ ಚಿಕಿತ್ಸೆಯನ್ನು ಪರಿಶೀಲಿಸಿದ್ದು, ನೀಡಲಾಗುತ್ತಿರುವ ವೈದ್ಯಕೀಯ ಆರೈಕೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದರು. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (C Joseph Vijay) ಹಾಗೂ ಸಚಿವ ಅರುಣ್‌ರಾಜ್ ಸೇರಿದಂತೆ ಹಲವು ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಬಾಬು ಅವರ ಆರೋಗ್ಯ ವಿಚಾರಿಸಿದ್ದರು.

ಯಾರು ಈ ವಿ.ಎಸ್. ಬಾಬು?

ವಿ.ಎಸ್. ಬಾಬು ಅವರು ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ಹಿರಿಯ ರಾಜಕಾರಣಿಯಾಗಿದ್ದರು. ಡಿಎಂಕೆಯ ಉತ್ತರ ಚೆನ್ನೈ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು, 2006ರಲ್ಲಿ ಪುರಸವಾಕ್ಕಂ (Purasawalkam) ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆ ಪ್ರವೇಶಿಸಿದ್ದರು. ಬಳಿಕ ಡಿಎಂಕೆ ತೊರೆದು ಎಐಎಡಿಎಂಕೆ (AIADMK) ಸೇರಿದ್ದ ಅವರು, ಫೆಬ್ರವರಿ 2026ರಲ್ಲಿ ನಟ ವಿಜಯ್ ಅವರ ಟಿವಿಕೆ (TVK) ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ ಬಾಬು, 82,997 ಮತಗಳನ್ನು ಪಡೆಯುವ ಮೂಲಕ 74,202 ಮತಗಳನ್ನು ಪಡೆದ ಎಂ.ಕೆ. ಸ್ಟಾಲಿನ್ ಅವರನ್ನು 8,795 ಮತಗಳ ಅಂತರದಿಂದ ಪರಾಭವಗೊಳಿಸಿ ಭಾರಿ ಸಂಚಲನ ಮೂಡಿಸಿದ್ದರು. 2011ರಿಂದ ಸತತವಾಗಿ ಕೊಳತ್ತೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸ್ಟಾಲಿನ್ ಅವರಿಗೆ ಈ ಸೋಲು ದೊಡ್ಡ ರಾಜಕೀಯ ಹಿನ್ನಡೆಯಾಗಿತ್ತು.