ಉತ್ತರಾಖಂಡ್‌ನಲ್ಲಿ BSF ಯೋಧರೋರ್ವರ ಪುತ್ರ ಎಂಬಿಎ ವಿದ್ಯಾರ್ಥಿಯನ್ನು ಚೈನೀಸ್ ನೇಪಾಳಿ ಎಂದೆಲ್ಲಾ ನಿಂದಿಸಿ ಗುಂಪೊಂದು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದು, ಆ ವಿದ್ಯಾರ್ಥಿ ಸಾಯುವ ಮೊದಲು ತಾನು ಭಾರತೀಯ ಎಂದು ಹೇಳಿ ಪ್ರಾಣ ಬಿಟ್ಟಿದ್ದಾನೆ. ಆತನ ಸಾವು ಈಗ ಈಶಾನ್ಯ ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ.
ಚೈನೀಸ್ ರೀತಿ ಕಾಣುತ್ತಿದ್ದಾನೆ ಎಂಬ ಕಾರಣಕ್ಕೆ ಭಾರತದ ಈಶಾನ್ಯ ರಾಜ್ಯವಾದ ತ್ರಿಪುರಾದ ಯುವಕನೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಉತ್ತರಾಖಂಡ್ ರಾಜ್ಯದಲ್ಲಿ ನಡೆದಿದ್ದು, ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ತ್ರಿಪುರಾದ ವಿದ್ಯಾರ್ಥಿಯೋರ್ವನನ್ನು ಉತ್ತರಾಖಂಡ್‌ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಸಾಯುವುದಕ್ಕೆ ಮೊದಲು ಆತ ಕೊನೆಯದಾಗಿ ತಾನು ಭಾರತೀಯ ಎಂದು ಹೇಳಿ ಪ್ರಾಣ ಬಿಟ್ಟಿದ್ದಾನೆ ಎಂದು ವರದಿಯಾಗಿದೆ.
ಆತನ ಮೇಲೆ ದಾಳಿ ಮಾಡುವುದಕ್ಕೂ ಮೊದಲು ದುಷ್ಕರ್ಮಿಗಳು, ಆತನನ್ನು ಚಿಂಗಿ, ಚೈನೀಸ್, ನೇಪಾಳಿ, ಮೊಮೊ ಎಂದೆಲ್ಲಾ ಕರೆದು ಹೀಯಾಳಿಸಿದ್ದಾರೆ. ಪೊಲೀಸರ ಆರಂಭಿಕ ತನಿಖೆಯಿಂದ ತಿಳಿದು ಬಂದಂತೆ, ಪೊಲೀಸರಿಗೆ ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆಯ ಪ್ರಕಾರ ದಾಳಿಗೂ ಮೊದಲು ಆರೋಪಿಗಳು ಆತನ ಮೇಲೆ ಜನಾಂಗೀಯ ನಿಂದನೆ ಮಾಡಿದ್ದಾರೆ. ಆದರೆ ಸಾಯುವ ಮೊದಲು ಆ ತರುಣ ನಾನು ಭಾರತೀಯ ಎಂದು ಹೇಳಿ ಉಸಿರು ಚೆಲ್ಲಿದ್ದಾನೆ. ಹೀಗಾಗಿ ಈ ವಿಚಾರ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ತಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.
ಮೃತ ವಿದ್ಯಾರ್ಥಿ ಏಂಜೆಲ್ ಚಕ್ಮಾ ಉತ್ತರಾಖಂಡ್‌ನಲ್ಲಿ ಓದುತ್ತಿದ್ದ. ತ್ರಿಪುರಾದ ಬಿಎಸ್‌ಎಫ್ ಯೋಧರೊಬ್ಬರ ಪುತ್ರನಾಗಿದ್ದ ಏಂಜೆಲ್ ಚಕ್ಮಾ, ದುಷ್ಕರ್ಮಿಗಳ ದಾಳಿಯ ನಂತರ 17 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಏಂಜೆಲ್ ಚಕ್ಮಾ ಶುಕ್ರವಾರ ಸಾವನ್ನಪ್ಪಿದ್ದು, ಇದು ಈಶಾನ್ಯ ಭಾರತವೂ ಸೇರಿದಂತೆ ನಿಜವಾದ ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ. 24 ವರ್ಷದ ಏಂಜೆಲ್ ಚಕ್ಮಾ, ಡೆಹ್ರಾಡೂನ್‌ನ ಜಿಗ್ಯಾಸ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಡಿಸೆಂಬರ್ 9ರಂದು ಈತ ತನ್ನ ಸೋದರ ಮೈಕೆಲ್ ಚಕ್ಮಾ ಜೊತೆ ತರಕಾರಿ ತರುವುದಕ್ಕಾಗಿ ಹೊರಗೆ ಹೋಗಿದ್ದಾಗ ಈ ದುರಂತ ನಡೆದಿದೆ. ಯುವಕರ ಗುಂಪೊಂದು ಈತನನ್ನು ಚಿಂಗಿ, ನೇಪಾಳಿ, ಚೈನೀಸ್ ಎಂದು ಕರೆಯಲು ಶುರು ಮಾಡಿದ್ದಾರೆ. ಇದಕ್ಕೆ ಆತ ವಿರೋಧ ವ್ಯಕ್ತಪಡಿಸಿದಾಗ ಆತನಿಗೆ ಚಾಕುವಿನಿಂದ ಇರಿದಿದ್ದಲ್ಲದೇ ಆತನ ಸೋದರನಿಗೂ ಪ್ರಜ್ಞೆ ತಪ್ಪುವಂತೆ ಥಳಿಸಿದ್ದಾರೆ.
ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಏಂಜೆಲ್ ಚಕ್ಮಾ, ಚಿಕಿತ್ಸೆ ಫಲಕಾರಿಯಾಗದೇ 17 ದಿನಗಳ ನಂತರ ಸಾವನ್ನಪ್ಪಿದ್ದು, ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಐವರೂ ಆರೋಪಿಗಳು ಪ್ರಭಾವಿ ಕುಟುಂಬಗಳಿಗೆ ಸೇರಿದವರು ಎಂದು ವರದಿಯಾಗಿದೆ. ಬಂಧಿತ ಆರೋಪಿಗಳನ್ನು ಅವಿನಾಶ್ ನೇಗಿ, ಶೌರ್ಯ ರಾಜ್‌ಪೂತ್, ಸೂರಜ್ ಖವಾಸ್, ಆಯುಷ್ ಬದೋನಿ ಹಾಗೂ ಸುಮಿತ್ ಎಂದು ಗುರುತಿಸಲಾಗಿದೆ.
ಭಾರತದ ಸೆವೆನ್ ಸಿಸ್ಟರ್ಸ್ ಅಥವಾ ಈಶಾನ್ಯದ ಸೋದರಿಯರು ಎಂದೇ ಖ್ಯಾತಿ ಗಳಿಸಿರುವ ಈಶಾನ್ಯದ 7 ರಾಜ್ಯಗಳು ನೋಡುವುದಕ್ಕೆ ದೇಶದ ಇತರ ಭಾಗಗಳಿಗಿಂತ ತುಸು ವಿಭಿನ್ನ. ಹಾಗೆ ನೋಡಿದರೆ ಭಾರತ ದೇಶವೇ ಹಲವು ವಿಭಿನ್ನ ಸಂಸ್ಕೃತಿ ಆಚಾರ ವಿಚಾರ ಭಾಷೆ ಜಾತಿ ಧರ್ಮಗಳನ್ನು ಹೊಂದಿರುವ ವೈವಿಧ್ಯಮಯ ದೇಶ. ಹೀಗಿರುವಾಗ ಜನರು ವಿಭಿನ್ನವಾಗಿ ಕಾಣುವುದು ದೊಡ್ಡ ವಿಚಾರವಲ್ಲ, ಈಶಾನ್ಯ ಭಾರತದ ರಾಜ್ಯಗಳಾದ ಮಣಿಪುರ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ, ಅರುಣಾಚಲ ಪ್ರದೇಶ, ಮಿಜೋರಾಂನ ಜನರು ನೋಡುವುದಕ್ಕೆ ಇತರ ಭಾರತೀಯರಿಗಿಂತ ತುಸು ವಿಭಿನ್ನವಾಗಿದ್ದಾರೆ. ನೋಡಲು ತುಸು ಚೀನಿಯರಂತೆ ಕಾಣುವ ಕಾರಣಕ್ಕೆ ಇವರನ್ನು ದೇಶದ ಇತರ ಭಾಗದ ಜನರು ಚಿಂಗಿಪಿಂಗಿಗಳು, ಚೀನಿಯರು ಎಂದೆಲ್ಲಾ ಟೀಕಿಸುತ್ತಾರೆ.
ಇದನ್ನೂ ಓದಿ: ಮದುವೆ ದಿನವೇ ವರನಿಗೆ ಮುತ್ತು ಕೊಡಲು ಬಂದ ಮಾಜಿ ಗೆಳತಿ: ನೆಲಕ್ಕೆ ಕೆಡವಿ ಬಾರಿಸಿದ ವಧು: ವೀಡಿಯೋ
ಆದರೆ ದೇಶದ ಒಂದೊಂದು ಭಾಗದ ಜನರು ಇಲ್ಲಿ ಒಂದೊಂದು ರೀತಿ ಇದ್ದಾರೆ ಎಂಬುದನ್ನು ಗಮನಿಸಲೇಬೇಕು, ಜಮ್ಮುಕಾಶ್ಮೀರದ ಜನರಂತೆ ಕರ್ನಾಟಕದ ಜನರಿಲ್ಲ, ರಾಜಸ್ಥಾನಿ ಅಥವಾ ಗುಜರಾತಿಗಳಂತೆ ತಮಿಳುನಾಡಿನ ಅಥವಾ ಆಂಧ್ರಪ್ರದೇಶದ ಜನರಿಲ್ಲ. ಉತ್ತರ ಭಾರತೀಯರಂತೆ ದಕ್ಷಿಣ ಭಾರತದ ಜನರಿಲಲ್ಲ. ಆದರೂ ಈಶಾನ್ಯ ಭಾರತದ ಜನರೆಂದರೆ ದೇಶದ ಇತರ ಭಾಗದ ಜನರಿಗೆ ಅದೇನೋ ಒಂದು ಅಸಡ್ಡೆ ಹಾಗೂ ನಿರ್ಲಕ್ಷ್ಯ. ಇದನ್ನು ಈಗಾಗಲೇ ಅನೇಕ ಈಶಾನ್ಯ ಭಾರತೀಯರು ಹೇಳಿಕೊಂಡು ನೋವು ತೋಡಿಕೊಂಡಿದ್ದಾರೆ. ದೇಶದ ವಿವಿಧ ಮಹಾನಗರಿಗಳಲ್ಲಿ ರಾಜ್ಯದ ರಾಜಧಾನಿಗಳಲ್ಲಿ ಈ ಈಶಾನ್ಯ ಭಾರತದ ಹಲವು ರಾಜ್ಯಗಳ ಯುವಕ ಯುವತಿಯರು ಕೆಲಸ ಮಾಡುತ್ತಿದ್ದು, ತಮ್ಮನ್ನು ಅನೇಕರು ಚೀನಿಯರು ಎಂದು ಕರೆಯುತ್ತಾರೆ. ಆದರೆ ನಾವು ಚೀನಿಯರಲ್ಲ ಭಾರತೀಯರು ಎಂದು ಬೇಸರ ತೋಡಿಕೊಂಡಿದ್ದಾರೆ. ಆದರೆ ಚೀನಿಯರಂತೆ ಕಾಣುವ ಕಾರಣಕ್ಕೆ ನಮ್ಮ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ ಎಂದು ದೂರಿದ್ದಾರೆ. ಹಾಗೆ ನೋಡಿದರೆ ಈಶಾನ್ಯ ರಾಜ್ಯದ ಜನರು ದೇಶದ ಇತರ ಭಾಗಗಳಿಗಿಂತ ಹೆಚ್ಚು ದೇಶಪ್ರೇಮವನ್ನು ಹೊಂದಿರುವವರಾಗಿದ್ದಾರೆ. ಆದರೂ ಈ ರೀತಿ ನೋಡುವುದಕ್ಕೆ ವಿಭಿನ್ನವಾಗಿ ಕಾಣುತ್ತಿದ್ದಾರೆ ಎಂಬ ಕಾರಣಕ್ಕೆ ಹತ್ಯೆ ಮಾಡುವುದು ಎಷ್ಟು ಸರಿ, ನಮ್ಮಷ್ಟೇ ಬದುಕುವ ಹಕ್ಕು ಅವರಿಗಿಲ್ಲವೇ?
ಇದನ್ನೂ ಓದಿ: ಭಾವನ ವಿರುದ್ಧ ಸುಳ್ಳು ರೇಪ್ ಕೇಸ್ ದಾಖಲಿಸಿದ ಮಹಿಳೆಗೆ ಜೈಲು ಶಿಕ್ಷೆ ನೀಡಿದ ನ್ಯಾಯಾಲಯ


