ಉತ್ತರ ಪ್ರದೇಶದ ಕೋಟ್ಯಧಿಪತಿ ಯುವಕನೊಬ್ಬ ಪ್ರೀತಿಗಾಗಿ ಇಸ್ಲಾಂಗೆ ಮತಾಂತರಗೊಂಡು, ನಂತರ ಘರ್ ವಾಪ್ಸಿಯಾಗಿದ್ದಾನೆ. ಆದರೆ, ಆತನ ಡೈರಿಯಲ್ಲಿ "ನಾನೊಂದು ಕಾರ್ಯಾಚರಣೆಯಲ್ಲಿದ್ದೇನೆ" ಎಂಬ ಸ್ಫೋಟಕ ಬರಹ ಪತ್ತೆಯಾಗಿದ್ದು, ಪೊಲೀಸರು ಇದರ ಹಿಂದಿನ ದೊಡ್ಡ ಪಿತೂರಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮತಾಂತರ ಎಂದಾಕ್ಷಣ ಎಲ್ಲರ ಗಮನಕ್ಕೆ ಬರುವುದು ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಕನ್ವರ್ಟ್ ಮಾಡಲಾಗಿದೆ ಎನ್ನುವುದು. ಆದರೆ ಉತ್ತರ ಪ್ರದೇಶದಲ್ಲಿ ಇದಕ್ಕೆ ವಿರುದ್ಧವಾದ ಘಟನೆಯೊಂದು ನಡೆದಿದ್ದು, ಕೋಟ್ಯಧಿಪತಿಯನ್ನು ಯುವತಿಯೊಬ್ಬಳು ಪ್ರೀತಿಯ ಬಲೆಯಲ್ಲಿ ಬೀಳಿಸಿ, ಇಸ್ಲಾಂಗೆ ಮತಾಂತರ ಮಾಡಿದ್ದಾಳೆ. ಪ್ರೀತಿಯ ಅಮಲು ಇಳಿದ ಮೇಲೆ ತಾನು ಮಾಡಿರುವ ತಪ್ಪು ಏನೆಂದು ತಿಳಿದ ಈ ವ್ಯಕ್ತಿ ಇದೀಗ ಹಿಂದೂ ಧರ್ಮಕ್ಕೆ ಪುನಃ ಮರಳಿದ್ದು ಘರ್ ವಾಪ್ಸಿಯಾಗಿದ್ದಾರೆ. ವಿಷಯ ಇಷ್ಟೇ ಆಗಿದ್ದರೆ ಅಲ್ಲಿಗೇ ಮುಗಿಯುತ್ತಿತ್ತು. ಆದರೆ ಆತ ಹಿಂದೂ ಧರ್ಮಕ್ಕೆ ವಾಪಸಾಗುತ್ತಿದ್ದಂತೆಯೇ ಆತನ ಡೈರಿಯನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸ್ಫೋಟಕ ಬರಹ ಪತ್ತೆಯಾಗಿದ್ದು, ಇದರ ಹಿಂದಿರುವ ಶಕ್ತಿಯ ಬಗ್ಗೆ ಇದೀಗ ತನಿಖೆ ಆರಂಭವಾಗಿದೆ.
ಏನಿದು ಘಟನೆ?
ಶಾಮ್ಲಿ ಜಿಲ್ಲೆಯ ಸದರ್ ಕೊತ್ವಾಲಿ ವ್ಯಾಪ್ತಿಯ ದಯಾನಂದ ನಗರದ ನಿವಾಸಿಯಾದ ಆಯುಷ್ ಮಲಿಕ್, ಕೆಲವು ದಿನಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು 'ಮೊಹಮ್ಮದ್ ಅಲಿ' ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಗಡ್ಡ ಬೆಳೆಸಿ, ಕೂದಲು ಬಿಟ್ಟು ಇಸ್ಲಾಮಿಕ್ ಸಾಂಪ್ರದಾಯಿಕ ಉಡುಗೆ ತೊಟ್ಟು, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳು ಹೊರಬಂದಾಗ ಇಡೀ ಉತ್ತರ ಪ್ರದೇಶವೇ ಬೆಚ್ಚಿಬಿದ್ದು ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು. ಈ ಬೆಳವಣಿಗೆ ಸ್ಥಳೀಯ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು ಮತ್ತು ಪೊಲೀಸರ ತನಿಖೆಗೆ ಒತ್ತಾಯಿಸಿದ್ದವು.
ಬಿ-ಫಾರ್ಮಾ ಪದವೀಧರನಾಗಿದ್ದ ಆಯುಷ್, ತನ್ನ ತಂದೆಯ ವೈದ್ಯಕೀಯ ವ್ಯವಹಾರವನ್ನು ನಿರ್ವಹಿಸಲು ಸಹಾಯ ಮಾಡುತ್ತಿದ್ದನು. ಎಫ್‌ಐಆರ್‌ನಲ್ಲಿ ದಾಖಲಾಗಿರುವ ಮಾಹಿತಿಯ ಪ್ರಕಾರ, 2018 ರಲ್ಲಿ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗ ಆಯುಷ್‌ಗೆ ಭೌತಚಿಕಿತ್ಸಕಿ (Physiotherapist) ಚಾಂದನಿ ಖುರೇಷಿ ಎಂಬಾಕೆಯ ಪರಿಚಯವಾಗಿತ್ತು. ಈ ಪರಿಚಯ ಮುಂದೆ ಪ್ರೇಮಕ್ಕೆ ತಿರುಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಚಾಂದನಿ ಖುರೇಷಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿ, ಆಯುಷ್‌ನನ್ನು ವ್ಯವಸ್ಥಿತವಾಗಿ ಬ್ರೈನ್‌ವಾಶ್ ಮಾಡಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ.
ಮಲಿಕ್ ಕುಟುಂಬದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ಹಿಡನ್ ಅಜೆಂಡಾದೊಂದಿಗೆ ಈ ಪಿತೂರಿ ನಡೆಸಲಾಗಿತ್ತು ಎನ್ನಲಾಗಿದೆ. 2023 ರಲ್ಲಿ ಆಯುಷ್‌ನನ್ನು ರಹಸ್ಯವಾಗಿ ದೆಹಲಿಗೆ ಕರೆದೊಯ್ದು, ಇಸ್ಲಾಂಗೆ ಮತಾಂತರಿಸಿ 'ನಿಕಾಹ್' (ಮದುವೆ) ಮಾಡಿಸಲಾಗಿತ್ತು. ಆದರೆ, ಪೊಲೀಸ್ ತನಿಖೆಯ ವೇಳೆ ಇವರ ಮದುವೆಗೆ ಸಂಬಂಧಿಸಿದ ಯಾವುದೇ ಕಾನೂನುಬದ್ಧ ವಿವಾಹ ಪ್ರಮಾಣಪತ್ರ ಪತ್ತೆಯಾಗಿಲ್ಲ.
ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ನನ್ನ ಧರ್ಮವನ್ನು ಬದಲಾಯಿಸಿಕೊಂಡಿದ್ದೆ ನಿಜ. ಆದರೆ, ನನ್ನ ಹೆತ್ತವರ ಕಣ್ಣೀರು ಮತ್ತು ಇಡೀ ಕುಟುಂಬ ಪಡುತ್ತಿರುವ ಸಂಕಟವನ್ನು ಕಂಡು, ನನ್ನ ಸ್ವಂತ ಇಚ್ಛೆಯಿಂದಲೇ ಮತ್ತೆ ಸನಾತನ ಧರ್ಮಕ್ಕೆ ಮರಳುತ್ತಿದ್ದೇನೆ. ನನ್ನ ಕುಟುಂಬದೊಂದಿಗೆ ಅವರ ರಕ್ಷಣೆಯಲ್ಲಿ ಬಾಳಲು ಬಯಸುತ್ತೇನೆ. ನನ್ನ ತಪ್ಪಿಗೆ ಹೆತ್ತವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಆಯುಷ್ ತಂದೆ ದೇವರಾಜ್ ಮಲಿಕ್ ಕೂಡ ತಮ್ಮ ಮಗ ಔಪಚಾರಿಕವಾಗಿ ಸನಾತನ ಧರ್ಮವನ್ನು ಪುನಃ ಅಳವಡಿಸಿಕೊಂಡಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಡೈರಿಯಲ್ಲಿ ಏನಿದೆ?
ಇವುಗಳ ನಡುವೆಯೇ ಪೊಲೀಸರು ಡೈರಿಯನ್ನು ಪತ್ತೆ ಮಾಡಿದ್ದಾರೆ. ಅದರಲ್ಲಿ ಆತ "ನಾನು ಒಂದು ಕಾರ್ಯಾಚರಣೆಯಲ್ಲಿದ್ದೇನೆ - ಆಯುಷ್ ಮಲಿಕ್ (I am on a mission) ಎಂದು ಬರೆದಿದ್ದಾರೆ. ಮಿಷನ್ ಎಂದರೆ ಸುಮ್ಮನೇ ಇರುವ ವಿಷಯವಲ್ಲ. ಇದು ಬಹುದೊಡ್ಡ ಯಾವುದೋ ಉಗ್ರ ಕೃತ್ಯ ಇರಬಹುದು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆಯುಷ್ ಮಲಿಕ್ ಅವರ ಮನೆಯಿಂದ ವಶಪಡಿಸಿಕೊಂಡ ಡೈರಿಯ ಮೊದಲ ಪುಟದಲ್ಲಿ ಇದನ್ನು ಬರೆಯಲಾಗಿದೆ.
ಇಂಡಿಯಾ ಟುಡೇ ಟಿವಿಗೆ ಲಭ್ಯವಾದ ಡೈರಿಯನ್ನು, ಆಯುಷ್ ಮಲಿಕ್ ಇಸ್ಲಾಂಗೆ ಮತಾಂತರಗೊಂಡು ಮೊಹಮ್ಮದ್ ಅಲಿ ಎಂಬ ಹೆಸರನ್ನು ಸ್ವೀಕರಿಸಿದ್ದಾರೆ ಎಂಬ ಮಾಹಿತಿಯ ನಂತರ ಪೊಲೀಸರು ನಡೆಸಿದ ಶೋಧದ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಡೈರಿ ನಮೂದು ಮತಾಂತರದ ಹಿಂದೆ ದೊಡ್ಡ ಪಿತೂರಿಯನ್ನು ಸೂಚಿಸುತ್ತದೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಶೋಧದ ಸಮಯದಲ್ಲಿ, ಪೊಲೀಸರು ಮನೆಯಿಂದ ದೊಡ್ಡ ಚಾಕು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಚಾಕು ಅಥವಾ ಡೈರಿಯ ಮಹತ್ವವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ, ಆದರೆ ತನಿಖೆಯ ಭಾಗವಾಗಿ ಎರಡೂ ವಸ್ತುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮತಾಂತರ ಪ್ರಕರಣಕ್ಕೆ ಸಂಬಂಧಿಸಿದೆ ಎಂದು ಹೇಳಲಾದ ಧರ್ಮಗುರುವನ್ನು ತನಿಖಾಧಿಕಾರಿಗಳು ಹುಡುಕುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಧರ್ಮಗುರು ಪ್ರಸ್ತುತ ಪರಾರಿಯಾಗಿದ್ದಾರೆ ಮತ್ತು ಅವರನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.


