ರಾಜಸ್ಥಾನದ ಭಿಲ್ವಾರಾದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿದ ಕಳ್ಳನೊಬ್ಬ ಮೊಬೈಲ್ ಅಂಗಡಿಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ದೋಚಿದ್ದಾನೆ. 

ಭಿಲ್ವಾರಾ, ರಾಜಸ್ಥಾನ (ಜೂ.30): ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಕರೆಡಾ ಪಟ್ಟಣದಲ್ಲಿ ವಿಚಿತ್ರ ಹಾಗೂ ಆಘಾತಕಾರಿ ಕಳ್ಳತನ ಪ್ರಕರಣ ನಡೆದಿದೆ. ಇದರ ಐಡಿಯಾ ಕಂಡು ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಇಬ್ಬರೂ ತಲೆ ಕೆಡಿಸಿಕೊಂಡಿದ್ದಾರೆ. ತಡರಾತ್ರಿ ಇಲ್ಲಿನ ಬಸ್ ನಿಲ್ದಾಣದ ಬಳಿ ಇರುವ 'ಮಾತೇಶ್ವರಿ ಮೊಬೈಲ್ ಶಾಪ್' ಮೇಲೆ ಮುಗಿಬಿದ್ದ ಕಳ್ಳರ ತಂಡ ಸುಮಾರು 4 ರಿಂದ 5 ಲಕ್ಷ ರೂಪಾಯಿ ಮೌಲ್ಯದ 35 ರಿಂದ 40 ಸ್ಮಾರ್ಟ್‌ಫೋನ್‌ಗಳನ್ನು ಲೂಟಿ ಮಾಡಿದೆ. ಆದರೆ, ಈ ಇಡೀ ಘಟನೆಯ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಕಳ್ಳರಲ್ಲಿ ಒಬ್ಬಾತ ತನ್ನ ಗುರುತು ಸಿಗದಂತೆ ತಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾಸ್ಕ್ ಧರಿಸಿದ್ದನು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂಗಡಿಯ ಮಾಲೀಕರಾದ ಲಕ್ಷ್ಮಣ್ ಸೇನ್ ಅವರಿಗೆ ಈ ಕಳ್ಳತನದ ವಿಷಯ ಮಂಗಳವಾರ ಮುಂಜಾನೆ ಗೊತ್ತಾಗಿದೆ. ಅವರು ಪ್ರತಿದಿನದಂತೆ ಬೆಳಿಗ್ಗೆ ಬಂದು ತಮ್ಮ ಅಂಗಡಿಯನ್ನು ತೆರೆದಾಗ ಕಂಗಾಲಾಗಿದ್ದಾರೆ. ಅಂಗಡಿಯ ಒಳಗಿದ್ದ ಸಾಮಗ್ರಿಗಳೆಲ್ಲಾ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಮತ್ತು ದುಬಾರಿ ಮೊಬೈಲ್ ಫೋನ್‌ಗಳ ಬಾಕ್ಸ್‌ಗಳು ಖಾಲಿಯಾಗಿದ್ದವು.

"ನಾನು ಮುಂಜಾನೆ ಬಂದು ಅಂಗಡಿಯನ್ನು ಪರಿಶೀಲಿಸಿದಾಗ, ಛಾವಣಿಯ ಮೇಲಿದ್ದ ಮೆಟ್ಟಿಲುಗಳ ಗೇಟ್‌ನ ಬೀಗ ಮುರಿದಿರುವುದು ಕಂಡುಬಂತು. ಕಳ್ಳರು ಇದೇ ಮಾರ್ಗವಾಗಿ ಅಂಗಡಿಯ ಒಳಗೆ ನುಗ್ಗಿದ್ದಾರೆ. ಬೇರೆ ಬೇರೆ ಪ್ರಮುಖ ಕಂಪನಿಗಳ ಬೆಲೆಬಾಳುವ ಸ್ಮಾರ್ಟ್‌ಫೋನ್‌ಗಳನ್ನು ಚೀಲಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ" ಎಂದು ಅಂಗಡಿ ಮಾಲೀಕ ಲಕ್ಷ್ಮಣ್ ಸೇನ್ ತಿಳಿಸಿದ್ದಾರೆ.

ಪಿಎಂ ಮುಖವಾಡದ ಹಿಂದೆ ಅಡಗಿರುವ ಆ ಕಿರಾತಕ ಯಾರು?

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕರೆಡಾ ಪೊಲೀಸ್ ಠಾಣಾ ಅಧಿಕಾರಿ ಪೂರನ್‌ಮಲ್ ಮೀನಾ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ, ಘಟನಾ ಸ್ಥಳವನ್ನು ಕೂಲಂಕಷವಾಗಿ ಪರಿಶೀಲಿಸಿದರು. ಪೊಲೀಸರು ಅಂಗಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ (CCTV) ಕ್ಯಾಮೆರಾಗಳ ಫುಟೇಜ್‌ಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಒಬ್ಬ ಕಳ್ಳ ಸ್ಪಷ್ಟವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್ಕ್‌ ಧರಿಸಿರುವುದು ಪತ್ತೆಯಾಗಿದೆ. ಇದೇ ಕಳ್ಳರ ಗ್ಯಾಂಗ್ ಅದೇ ರಾತ್ರಿ ಪಟ್ಟಣದ 'ಬೀಜ್ ಗೋದಾಮ್ ಚೌರಸ್ತಾ' (ಬೀಜದ ಗೋದಾಮಿನ ವೃತ್ತ) ಬಳಿ ಇರುವ 'ಸಾವರಿಯಾ ಮೊಬೈಲ್' ಎಂಬ ಮತ್ತೊಂದು ಅಂಗಡಿಯ ಶಟರ್ ಮುರಿಯಲು ಕೂಡ ಯತ್ನಿಸಿತ್ತು. ಅಲ್ಲಿನ ಸಿಸಿಟಿವಿ ಫುಟೇಜ್‌ನಲ್ಲೂ ಅದೇ ವ್ಯಕ್ತಿ ಪ್ರಧಾನಿ ಮೋದಿಯವರ ಮುಖವಾಡ ಧರಿಸಿಕೊಂಡೇ ಶಟರ್ ಬೀಗ ಮುರಿಯಲು ವಿಫಲ ಯತ್ನ ನಡೆಸಿರುವುದು ಸೆರೆಯಾಗಿದೆ.

ರಾತ್ರಿ ಗಸ್ತು ತೀವ್ರಗೊಳಿಸಲು ವ್ಯಾಪಾರಿಗಳ ಆಗ್ರಹ

ಪಟ್ಟಣದ ಮುಖ್ಯ ಬಸ್ ನಿಲ್ದಾಣದಂತಹ ಅತ್ಯಂತ ಜನನಿಬಿಡ ಮತ್ತು ಪ್ರಮುಖ ಪ್ರದೇಶದಲ್ಲೇ ಈ ರೀತಿಯ ದೊಡ್ಡ ಕಳ್ಳತನ ನಡೆದಿರುವುದು ಕರೆಡಾದ ಸ್ಥಳೀಯ ವ್ಯಾಪಾರಿಗಳು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯ ವೃತ್ತಗಳಲ್ಲಿರುವ ಅಂಗಡಿಗಳಿಗೇ ಸುರಕ್ಷತೆ ಇಲ್ಲದಂತಾಗಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪಟ್ಟಣದಲ್ಲಿ ರಾತ್ರಿ ವೇಳೆಯ ಪೊಲೀಸ್ ಗಸ್ತು (Night Patrolling) ವ್ಯವಸ್ಥೆಯನ್ನು ತಕ್ಷಣವೇ ಬಲಪಡಿಸಬೇಕು ಎಂದು ವ್ಯಾಪಾರ ಮಂಡಳಿ ಮತ್ತು ಗ್ರಾಮಸ್ಥರು ಪೊಲೀಸ್ ಆಡಳಿತವನ್ನು ಒತ್ತಾಯಿಸಿದ್ದಾರೆ. ಸದ್ಯಕ್ಕೆ, ಸಂತ್ರಸ್ತ ಅಂಗಡಿ ಮಾಲೀಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ಫುಟೇಜ್ ಆಧರಿಸಿ ಮುಖವಾಡಧಾರಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

Scroll to load tweet…