Foreigners Perform Pind Daan: ಸ್ಪೇನ್, ರಷ್ಯಾ ಹಾಗೂ ಉಕ್ರೇನ್ ದೇಶಗಳ ಪ್ರವಾಸಿಗರು ವಾರಣಾಸಿಯ ಗಯಾದಲ್ಲಿ ಪಿತೃಪಕ್ಷದ ಮಹತ್ವವನ್ನು ಅರಿತು ತಮ್ಮ ಪೂರ್ವಜರಿಗೆ ಪಿಂಡಪ್ರದಾನ ಮಾಡಿದ್ದಾರೆ. ಸ್ಥಳೀಯ ಪುರೋಹಿತರ ಮಾರ್ಗದರ್ಶನದಲ್ಲಿ ಹಿಂದೂ ಸಂಪ್ರದಾಯದಂತೆ ಎಲ್ಲಾ ವಿಧಿವಿಧಾನಗಳನ್ನು ಪಾಲಿಸಿದ್ದಾರೆ.
ಪಿತೃಗಳಿಗೆ ಪಿಂಡಪ್ರದಾನ ಮಾಡಿದ ವಿದೇಶಿಗರು:
ಭಾರತದಲ್ಲಿ ಪಿತೃಪಕ್ಷದ ದಿನ ಪಿತೃಗಳಿಗೆ ಪಿಂಡ ಪ್ರದಾನ ಮಾಡುವುದು ಸಾಮಾನ್ಯ. ಆದರೆ ಈ ಬಾರಿ ವಾರಣಾಸಿಯ ಗಯಾದಲ್ಲಿ ವಿದೇಶಿಗರು ಕೂಡ ತಮ್ಮ ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ಗಮನ ಸೆಳೆದರು. ಭಾರತದಲ್ಲಿ ಪಿತೃಪಕ್ಷ ಸುಮಾರು 15 ದಿನಗಳ ಕಾಲ ನಡೆಯುತ್ತದೆ ಇದು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಸಮಯದಲ್ಲಿ ದೇಶದ ಹಿಂದೂ ಸಮುದಾಯದವರ ಪ್ರತಿ ಮನೆಗಳಲ್ಲೂ ಸಾಮಾನ್ಯವಾಗಿ ತಮ್ಮ ಪಿತೃಗಳ ಗೌರವಾರ್ಥವಾಗಿ ಪಿತೃಪಕ್ಷವನ್ನು ಮಾಡುತ್ತಾರೆ. ತಮ್ಮ ಪೂರ್ವಜರಿಗೆ ಪಿಂಡ ಪ್ರದಾನ ಮಾಡುತ್ತಾರೆ. ಒಂದೊಂದು ಕಡೆ ಒಂದೊಂದು ಸಮಯದಲ್ಲಿ ಪಿತೃಗಳಿಗೆ ಪಿಂಡಪ್ರದಾನ ಕಾರ್ಯಕ್ರಮವನ್ನು ಮಾಡುತ್ತಾರೆ. ಕೆಲವು ಮನೆಗಳಲ್ಲಿ ದೀಪಾವಳಿ ಸಮಯದಲ್ಲಿ ಹಿರಿಯರಿಗೆ ಎಡೆ ಇಡುತ್ತಾರೆ. ಇನ್ನೂ ಕೆಲ ಕಡೆಗಳಲ್ಲಿ ಬೇರೆ ಹಬ್ಬಗಳ ಸಮಯದಲ್ಲಿ ಪೂರ್ವಜರಿಗೆ ಗೌರವ ಅರ್ಪಿಸಲಾಗುತ್ತದೆ. ಆದರೆ ಮಹಾಲಯ ಅಮವಾಸ್ಯೆಯ ಸಮಯದಲ್ಲಿ ಬರುವ ಪಿತೃಪಕ್ಷಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ದೇಶದ ಬಹುತೇಕ ಕಡೆಗಳಲ್ಲಿ ಆ ದಿನ ಪಿತೃಪಕ್ಷದ ಆಚರಣೆ ಮಾಡಲಾಗುತ್ತದೆ.
ಸ್ಪೇನ್, ರಷ್ಯಾ ಹಾಗೂ ಉಕ್ರೇನ್ ಪ್ರವಾಸಿಗರಿಂದ ತಮ್ಮ ಪಿತೃಗಳಿಗೆ ಪಿಂಡ ಪ್ರದಾನ
ಆದರೆ ಅಪರೂಪ ಎಂಬಂತೆ ಉತ್ತರ ಪ್ರದೇಶದ ಪುಣ್ಯಕ್ಷೇತ್ರ ವಾರಣಾಸಿಯ ಗಯಾದಲ್ಲಿ ಸ್ಪೇನ್, ರಷ್ಯಾ ಹಾಗೂ ಉಕ್ರೇನ್ ಮೂಲದ ಪ್ರವಾಸಿಗರು ಕೂಡ ಈ ಬಾರಿ ಪಿತೃಪಕ್ಷದಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿನ ಸೀತಾ ಕುಂಡ, ದೇವ್ ಘಾಟ್ ಎಂಬ ಎರಡು ಪ್ರಮುಖ ಸ್ಥಳಗಳಲ್ಲಿ ವಿದೇಶಿಯರು ತಮ್ಮ ಪೂರ್ವಜರ ಆತ್ಮಗಳ ಉದ್ಧಾರಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ವರದಿಗಳ ಪ್ರಕಾರ, ಈ ವಿದೇಶಿಯರ ಗುಂಪು ವಾರಣಾಸಿಯಲ್ಲಿದ್ದಾಗ ಮೊದಲು ಪಿತೃಪಕ್ಷ ಹಾಗೂ ಅದರ ಮಹತ್ವದ ಬಗ್ಗೆಅರಿತುಕೊಂಡಿದ್ದಾರೆ. ಈ ಹದಿನೈದು ದಿನಗಳ ಕಾಲ ನಡೆಯುವ ಈ ಹಬ್ಬದ ಮಹತ್ವದಿಂದ ಆಕರ್ಷಿತರಾದ ಅವರು ಆನ್‌ಲೈನ್‌ನಲ್ಲಿ ಇದರ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ನಂತರ ಇದರ ಆಧ್ಯಾತ್ಮಿಕ ಸಾರದಿಂದ ತೀವ್ರವಾಗಿ ಪ್ರಭಾವಿತರಾಗಿದ್ದಾರೆ. ನಂತರ ವಾರಣಾಸಿಯಲ್ಲಿ ಕೆಲ ಹಿಂದೂ ಧಾರ್ಮಿಕ ಮಾರ್ಗದರ್ಶಕರ ಸಹಾಯದಿಂದ ಗಯಾ ಮೂಲದ ಪುರೋಹಿತರೊಂದಿಗೆ ಸಂಪರ್ಕ ಮಾಡಿದ್ದಾರೆ. ಆ ಪುರೋಹಿತರು ಈ ವಿದೇಶಿಯರಿಗೆ ಈ ಪಿತೃಪಕ್ಷದ ಆಚರಣೆ ಮಾಡುವುದಕ್ಕೆ ಕ್ರಮಗಳನ್ನು ಹೇಳಿಕೊಟ್ಟಿದ್ದಾರೆ.
ಗಯಾದ ಅರ್ಚಕರಾದ ಆಚಾರ್ಯ ಮಾಧವ್ ಮತ್ತು ಆಚಾರ್ಯ ಅಭಿನವ್ ಶಂಕರ್ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು, ವಿದೇಶಿಯರು ಈ ಆಚರಣೆಯ ಪ್ರತಿಯೊಂದು ಅಂಶವನ್ನು ಸಮರ್ಪಣಾಭಾವದಿಂದ ಅನುಸರಿಸುತ್ತಿದ್ದರು. ಅವರು ಸೂಚನೆಯಂತೆ ಮಂತ್ರಗಳನ್ನು ಪಠಿಸಿದರು ಮತ್ತು ಪಿಂಡ ದಾನದ ಸಂಪೂರ್ಣ ಹಿಂದೂ ಸಂಪ್ರದಾಯವನ್ನು ಪಾಲಿಸಿದರು. ಪ್ರವಾಸಿಗರು ವಿಧಿವಿಧಾನಗಳನ್ನು ನಿರ್ವಹಿಸಿದ ನಂತರ ತಮ್ಮ ಜೀವನದುದ್ದಕ್ಕೂ ಸಸ್ಯಾಹಾರವನ್ನು ಅಳವಡಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು, ಇದು ಆಂತರಿಕ ಶಾಂತಿ ಮತ್ತು ತೃಪ್ತಿಯ ಭಾವನೆಯನ್ನು ವ್ಯಕ್ತಪಡಿಸಿತು ಎಂದು ಪುರೋಹಿತರು ಹೇಳಿದ್ದಾರೆ.
ಈ ವಿದೇಶಿಗರು ಗಯಾದಲ್ಲಿ ತಂಗಿದ್ದಾಗ ಸ್ಥಳೀಯ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಸದಸ್ಯರು ಈ ವಿದೇಶಿ ಪ್ರಜೆಗಳಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಧಾರ್ಮಿಕ ಆಚರಣೆಗಳ ಮೂಲಕ ಅವರಿಗೆ ಮಾರ್ಗದರ್ಶನ ನೀಡಿದರು ಮತ್ತು ಸೀತಾ ಕುಂಡದಲ್ಲಿ ಪ್ರಸಾದ ವಿತರಣೆಯನ್ನು ಏರ್ಪಡಿಸಿದರು ಎಂದು ವರದಿಯಾಗಿದೆ. ಈ ಹಿಂದೆ ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ನೊಂದಿಗೆ ಸಂಪರ್ಕ ಹೊಂದಿದ ಭಕ್ತರು ಈ ಹಿಂದೆ ಗಯಾದಲ್ಲಿ ಪಿಂಡ ದಾನ ಮಾಡಿದ್ದರು. ಆದರೆ ಹೀಗೆ ಯಾವುದೇ ದೇಶೀಯ ಸಂಪರ್ಕಗಳಿಲ್ಲದೇ, ಈ ವಿದೇಶಿಯರು ಇಂತಹ ಆಚರಣೆಗಳಲ್ಲಿ ಭಾಗವಹಿಸಿದ್ದು ಇದೇ ಮೊದಲು ಎಂದು ಪುರೋಹಿತರು ಹೇಳಿದ್ದಾರೆ.
ಇದನ್ನೂ ಓದಿ: ಪ್ಯಾಲೇಸ್ತೀನ್ ದೇಶ ಎಂದು ಗುರುತಿಸಲು ನಿರಾಕರಿಸಿದ ಜಾರ್ಜಿಯಾ ಮೆಲೋನಿ: ಪ್ರತಿಭಟನಾಕಾರರ ಆಕ್ರೋಶಕ್ಕೆ ತತ್ತರಿಸಿದ ಇಟಲಿ
ಇದನ್ನೂ ಓದಿ: ತಿಂಗಳಲ್ಲಿ ಎರಡೆರಡು ಬಾರಿ ಉಕ್ಕಿದ ಭಾರತದ ಏಕೈಕ ಜೀವಂತ ಜ್ವಾಲಾಮುಖಿ: ಈ ಜ್ವಾಲಾಮುಖಿ ಇರೋದೆಲ್ಲಿ ಗೊತ್ತಾ?
