ಚೆನ್ನೈ(ಮೇ.08): ಕೊರೋನಾ ಅಬ್ಬರ ಇಡೀ ದೇಶವನ್ನೇ ಕಂಗೆಡಿಸಿದೆ. ಸದ್ಯ ಇದರ ನಿಯಂತ್ರಣಕ್ಕಾಗಿ ಒಂದಾದ ಬಳಿಕ ಮತ್ತೊಂದರಂತೆ ಬಹುತೇಕ ರಾಜ್ಯಗಳು ಲಾಕ್‌ಡೌನ್ ಘೋಷಿಸಲಾರಂಭಿಸಿವೆ. ಸದ್ಯ ಕೇರಳ ಹಾಗೂ ಕರ್ನಾಟಕದ(ಸೆಮಿ ಲಾಕ್‌ಡೌನ್) ಬಳಿಕ ತಮಿಳುನಾಡಿನಲ್ಲೂ ಎರಡು ವಾರಗಳ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. 

ಅಧಿಕೃತವಾಗಿ ಲಾಕ್‌ಡೌನ್ ಘೋಷಿಸಿದ ತಮಿಳುನಾಡಿನ ನೂತನ ಸಿಎಂ ಎಂ . ಕೆ. ಸ್ಟಾಲಿನ್ 'ಶುಕ್ರವಾರ ತಮಿಳುನಾಡಿನ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಮರ್ಶೆ ನಡೆಸಿ, ಈ ಬಗ್ಗೆ ವೈದ್ಯಕೀಯ ತಜ್ಞರ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದ ಬಳಿಕ ಲಾಕ್‌ಡೌನ್ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಬೇರೆ ಯಾವುದೇ ಸೂಕ್ತ ಹಾಗೂ ಪರಿಣಾಮಕಾರಿ ಕ್ರಮ ಇಲ್ಲದಿರುವ ನಿಟ್ಟಿನಲ್ಲಿ. ಸೋಂಕು ನಿಯಂತ್ರಿಸಲು ರಾಜ್ಯದಲ್ಲಿ ಲಾಕ್‌ಡೌನ್ ಹೇರಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ತಮಿಳುನಾಡಿಗೆ 5 ಬಂಪರ್‌ ಕೊಡುಗೆ ನೀಡಿದ ಸ್ಟಾಲಿನ್‌!

ಈ ಸಂಪೂರ್ಣ ಲಾಕ್‌ಡೌನ್ ಸೋಮವಾರ, ಮೇ 10ರಂದು ಬೆಳಗ್ಗೆ 4 ಗಂಟೆಯಿಂದ, ಮೇ24ರ ಬೆಳಗ್ಗೆ 4 ಗಂಟೆವರೆಗೆ ಜಾರಿಯಲ್ಲಿರಲಿದೆ. ತುರ್ತು ಸೇವೆ ಹೊರತುಪಡಿಸಿ ಬ್ಯಾಂಕ್ ಹಾಗೂ ನ್ಯಾಯಬೆಲೆ ಅಂಗಡಿ(ಶೇ. 50ರಷ್ಟು ಸಿಬ್ಬಂದಿ)ಗಳು ತೆರೆದಿರಲಿವೆ. ಆಸ್ಪತ್ರೆ, ಮದುವೆ ಹಾಗೂ ಅಂತಿಮ ಸಂಸ್ಕಾರ ಕಾರ್ಯಕ್ಕೆ ಹೊರತುಪಡಿಸಿ ಕ್ಯಾಬ್ ಹಾಗೂ ಆಟೋಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ಎಂ. ಕೆ. ಸ್ಟಾಲಿನ್ ವಿವರಿಸಿದ್ದಾರೆ.

ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ತಮಿಳುನಾಡಿನಲ್ಲಿ 26,000 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ದಾಖಲೆಯ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಸರ್ಕಾರ ಈ ಲಾಕ್‌ಡೌನ್ ಘೋಷಿಸಿದೆ. ಮುಖ್ಯಮಂತ್ರಿಯಾಗಿ ಸ್ಟಾಲಿನ್ ಅಧಿಕಾರ ಸ್ವೀಕರಿಸಿದ ಬಳಿಕ ತೆಗೆದುಕೊಂಡ ಮಹತ್ವದ ನಿರ್ಧಾರ ಇದಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona