ತಮಿಳುನಾಡಿಗೆ 5 ಬಂಪರ್‌ ಕೊಡುಗೆ ನೀಡಿದ ಸ್ಟಾಲಿನ್‌| ಹೊಸ ಸಿಎಂ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ| ಚುನಾವಣೆ ವೇಳೆ ನೀಡಿದ್ದ ಪ್ರಮುಖ ಭರವಸೆ ಈಡೇರಿಕೆ

ಚೆನ್ನೈ(ಮೇ.08): ತಮಿಳುನಾಡು ಮುಖ್ಯಮಂತ್ರಿಯಾಗಿ ಶುಕ್ರವಾರ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಕೂಡಲೇ ಅವರು ಚುನಾವಣೆ ವೇಳೆ ನೀಡಿದ್ದ ಭರವಸೆಗಳ ಪೈಕಿ ಕೆಲವನ್ನು ಮೊದಲ ದಿನವೇ ಜಾರಿಗೆ ತಂದಿದ್ದಾರೆ.

"

ರಾಜ್ಯದಲ್ಲಿ 2.07 ಕೋಟಿ ಪಡಿತರ ಚೀಟಿದಾರರಿದ್ದು, ಅವರಿಗೆ ಮೊದಲ ಕಂತಿನಲ್ಲಿ 2000 ರು.ಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಇದಕ್ಕೆ 4153.69 ಕೋಟಿ ರು. ವೆಚ್ಚವಾಗಲಿದೆ. ಕೋವಿಡ್‌ ಸಂಕಷ್ಟಇರುವ ಕಾರಣ ಪಡಿತರ ಚೀಟಿದಾರರಿಗೆ ತಲಾ 4000 ರು. ನೀಡುವುದಾಗಿ ಚುನಾವಣೆ ವೇಳೆ ಸ್ಟಾಲಿನ್‌ ಘೋಷಿಸಿದ್ದರು. ಇದರ ಮೊದಲ ಕಂತಾಗಿ ಈಗ 2000 ರು. ನೀಡಲಾಗಿದೆ.

ಶನಿವಾರದಿಂದಲೇ ಜಾರಿಗೆ ಬರುವಂತೆ ತಮಿಳುನಾಡು ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತವಿರಲಿದೆ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಸ್ವಾಮ್ಯದ ಹಾಲು ಮಾರಾಟ ಸಂಸ್ಥೆ ಆವಿನ್‌ ಮೂಲಕ ಗ್ರಾಹಕರಿಗೆ ಪೂರೈಸಲಾಗುತ್ತಿರುವ ಹಾಲಿನ ದರವನ್ನು ಲೀಟರ್‌ಗೆ 3 ರು. ಕಡಿತ ಮಾಡುವುದಾಗಿ ಪ್ರಕಟಿಸಿದ್ದಾರೆ. ಮೇ 16ರಿಂದ ಇದು ಜಾರಿಗೆ ಬರಲಿದೆ.

ಇದೇ ವೇಳೆ, ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಕೋವಿಡ್‌ ಚಿಕಿತ್ಸೆಗೆ ಸರ್ಕಾರಿ ವಿಮಾ ಯೋಜನೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ ‘ನಿಮ್ಮ ಕ್ಷೇತ್ರದಲ್ಲಿ ಮುಖ್ಯಮಂತ್ರಿ’ ಎಂಬ ಯೋಜನೆ ಜಾರಿಗೊಳಿಸಿರುವ ಅವರು, ಇದಕ್ಕಾಗಿ ಐಎಎಸ್‌ ಅಧಿಕಾರಿ ನೇತೃತ್ವ ದ ಇಲಾಖೆಯೊಂದನ್ನು ತೆರೆಯಲು ಒಪ್ಪಿಗೆ ನೀಡಿದ್ದಾರೆ. ಇದರಡಿ ಜನರು ಯಾವುದಾದರೂ ದೂರು ನೀಡಿದರೆ ಅದನ್ನು 100 ದಿನದಲ್ಲಿ ಪರಿಹರಿಸಲಾಗುತ್ತದೆ.

ಪಂಚ ಕೊಡುಗೆಗಳು

1. ತಮಿಳುನಾಡಿನಲ್ಲಿ ಸ್ತ್ರೀಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಉಚಿತ!

2. ಸರ್ಕಾರಿ ಸ್ವಾಮ್ಯದ ‘ಅವಿನ್‌’ ಹಾಲಿನ ದರ ಲೀಟರ್‌ಗೆ 3 ರು. ಕಡಿತ

3. 2.07 ಕೋಟಿ ಪಡಿತರ ಚೀಟಿದಾರರಿಗೆ 2000 ರು. ‘ಕೋವಿಡ್‌ ಪರಿಹಾರ’

4. ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಕೋವಿಡ್‌ ಚಿಕಿತ್ಸೆಗೆ ಸರ್ಕಾರಿ ವಿಮೆ

5. ದೂರು ಬಂದ 100 ದಿನದಲ್ಲಿ ಸಮಸ್ಯೆ ಪರಿಹಾರಕ್ಕೆ ‘ನಿಮ್ಮ ಕ್ಷೇತ್ರದಲ್ಲಿ ಸಿಎಂ ಯೋಜನೆ’