ವಿರುಧುನಗರದಲ್ಲಿ ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಮಗುವೊಂದು ಬಸ್ಸಿನಿಂದ ಹೊರಗೆ ಬಿದ್ದಿದೆ. ಈ ಆಘಾತಕಾರಿ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.
ಬಸ್ಸೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್‌ನ ಬಾಗಿಲು ಪಕ್ಕದ ಸೀಟಿನಲ್ಲಿ ಕುಳಿತ ತಾಯಿ ಮಡಿಲಲ್ಲಿ ಇದ್ದ ಮಗುವೊಂದು ಬಸ್ಸಿನಿಂದ ಹೊರಗೆ ಬಿದ್ದಂತಹ ಆಘಾತಕಾರಿ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ವಿರುಧುನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬಸ್‌ನಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿದೆ. ವೀಡಿಯೋದಲ್ಲಿ ಕಾಣುವಂತೆ ಇದು ಖಾಸಗಿ ಬಸ್‌ನಂತೆ ಕಾಣುತ್ತಿದ್ದು, ಮುಂದಿನ ಬಾಗಿಲಿನ ಪಕ್ಕವೇ ಇರುವ ಸೀಟಿನಲ್ಲಿ ಮಹಿಳೆ ಹಾಗೂ ಅವರ ಸಂಬಂಧಿ ಕುಳಿತಿದ್ದರೆ, ಇಬ್ಬರ ಕೈಯಲ್ಲೂ ಒಂದೊಂದು ಮಗುವಿದೆ. ತಾಯಿಯ ಕೈಯಲ್ಲಿ ಒಂದು ವರ್ಷದ ಪುಟ್ಟ ಮಗುವಿದ್ದು, ಆಕೆಯ ಪಕ್ಕ ಇದ್ದ ಸಂಬಂಧಿಯ ಕೈಯಲ್ಲಿ ಆ ಮಗುವಿಗಿಂತ ಸ್ವಲ್ಪ ದೊಡ್ಡ ಮಗುವಿದೆ. ಆದರೆ ಬಸ್ ಚಾಲಕ ಹಠಾತ್ ಆಗಿ ಬ್ರೇಕ್ ಹಾಕಿದ ರಭಸಕ್ಕೆ ಈ ಮುಂದಿನ ಸೀಟಿನಲ್ಲಿ ತಾಯಿಯ ಮಡಿಲಲ್ಲಿ ಇದ್ದ ಮಗು ಕೈ ಜಾರಿ ಕೆಳಗೆಬಿದ್ದಿದ್ದರೆ ಆಕೆಯ ಪಕ್ಕದಲ್ಲಿದ್ದ ಸಂಬಂಧಿ ಹಾಗೂ ಅವರ ಮಡಿಲಲ್ಲಿದ್ದ ಮಗು ಇಬ್ಬರು ಸೀಟಿನಿಂದ ಮುಗ್ಗರಿಸಿ ಬಸ್ಸೊಳಗೆಯೇ ಬಿದ್ದಿದ್ದಾರೆ.
ವಿರುಧುನಗರದ ಶ್ರಿವಿಲ್ಲಿಪುತ್ತುರ್ ಸಮೀಪದ ಮೀನಾಕ್ಷಿಪುರಂ ಜಂಕ್ಷನ್‌ನಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಘಟನೆಯಲ್ಲಿ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬದುಕುಳಿದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಮಗುವನ್ನು ಈಗ ವೈದ್ಯರ ಮೇಲ್ವಿಚಾರಣೆಯಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ.
ಈ ಮಗುವಿನ ಕುಟುಂಬದವರು ಮುಥುರ್‌ಮಲ್ಲಿಂಗಪುರಂ ನಿವಾಸಿಗಳಾಗಿದ್ದು, ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬೆಳಗ್ಗೆ 8.30ರ ಸುಮಾರಿಗೆ ಬಸ್ ಮೀನಾಕ್ಷಿಪುರಂ ಸಿಗ್ನಲ್ ಬಳಿ ತಲುಪಿದಾಗ ಚಾಲಕ ಹಠಾತ್ ಬ್ರೇಕ್ ಹಾಕಿದ್ದು, ಈ ಅವಘಡಕ್ಕೆ ಕಾರಣವಾಗಿದೆ.
ಈ ಬಸ್‌ನಲ್ಲಿದ್ದ ಮತ್ತೊಂದು ಮಗುವಿಗೂ ಘಟನೆಯಲ್ಲಿ ಗಾಯವಾಗಿದೆ. ಮಹಿಳೆಯ ಪಕ್ಕದಲ್ಲಿ ಕುಳಿತಿದ್ದ ಮದನ್‌ಕುಮಾರ್ ಎಂಬುವವರು ಮಹಿಳೆಯ ಸೋದರನಾಗಿದ್ದು, ತಮ್ಮ ಸೋದರಿಯ ಎರಡು ವರ್ಷದ ಮಗುವನ್ನು ಮಡಿಲಲ್ಲಿ ಕುಳ್ಳಿರಿಸಿಕೊಂಡಿದ್ದರು. ಬಸ್ ಬ್ರೇಕ್ ಹಾಕಿದ ರಭಸಕ್ಕೆ ಅವರು ಹಾಗೂ ಅವರ ಮಡಿಲಲ್ಲಿದ್ದ ಮಗುವೂ ಕೆಳಗೆ ಬಿದ್ದಿದೆ. ಇದರಲ್ಲಿ ಮಗು ಹಾಗೂ ಮದನ್‌ಕುಮಾರ್ ಇಬ್ಬರಿಗೂ ಗಾಯಗಳಾಗಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಂಠಪೂರ್ತಿ ಕುಡಿದು ತೂರಾಡಿದ ಪೊಲೀಸ್
ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಉತ್ತರ ಪ್ರದೇಶದ ಸುಲ್ತಾನ್‌ಪುರದ ವೀಡಿಯೋವೊಂದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕಂಠಪೂರ್ತಿ ಕುಡಿದು ತೂರಾಡುತ್ತಾ ರಸ್ತೆಯಲ್ಲಿ ಸಾಗುತ್ತಿರುವ ವೀಡಿಯೋ ವೈರಲ್ ಆಗಿದೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಲಂಬುವಾ ಕೊಥ್ವಾಲಿ ಪ್ರದೇಶದಲ್ಲಿರುವ ಶಿವಗಢ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಸಬ್ ಇನ್ಸ್‌ಪೆಕ್ಟರ್ ಶ್ಯಾಮ್ ಕುಮಾರ್ ಸಿಂಗ್ ಡ್ಯೂಟಿ ಟೈಮಲ್ಲೇ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ನಡೆಯಲಾಗದೇ ತೂರಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಇನ್ಸ್‌ಪೆಕ್ಟರ್ ಗೃಹರಕ್ಷಕದಳದ ಸಿಬ್ಬಂದಿ ಚಲಾಯಿಸುತ್ತಿದ್ದ ಬೈಕ್‌ನಲ್ಲಿ ಹಿಂದೆ ಕುಳಿತು ಬಂದಿದ್ದಾರೆ. ಈ ವೇಳೆ ತಾವು ಕುಡಿದಿದ್ದೀರಿ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದು, ಇನ್ಸ್‌ಪೆಕ್ಟರ್‌ಗೆ ಬೈಕ್‌ನಿಂದ ಇಳಿದು ನೇರವಾಗಿ ನಡೆಯುವಂತೆ ಹೇಳಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್ ನೆಟ್ಟಗೆ ಹೆಜ್ಜೆ ಹಾಕಲಾಗದೇ ವಾಲಾಡುತ್ತಾ ನಡೆಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಗಮನಾರ್ಹ ವಿಚಾರವೆಂದರೆ ಇನ್ಸ್‌ಪೆಕ್ಟರ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಸವಾರಿ ಮಾಡುತ್ತಿದ್ದ ಈ ಬೈಕ್‌ಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ ಮತ್ತು ಇಬ್ಬರೂ ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಸಣ್ಣಪುಟ್ಟ ಸಂಚಾರಿ ನಿಯಮ ಉಲ್ಲಂಘನೆ ಕಾರಣಕ್ಕೆ ಸಾರ್ವಜನಿಕರ ಬೆಂಡೆತ್ತುವ ಪೊಲೀಸರು ಇಲ್ಲಿ ತಾವೇ ಸಂಚಾರ ನಿಯಮ ಉಲ್ಲಂಘಿಟಿದ್ದು ಇದನ್ನು ಅಲ್ಲಿನ ಜನರು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಉನ್ನತ ಅಧಿಕಾರಿಗಳಿಂದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
