ಛತ್ತೀಸ್‌ಗಢದಲ್ಲಿ ಯುವಕನೊಬ್ಬ ಹಾವೊಂದಕ್ಕೆ ಹಗ್ಗ ಕಟ್ಟಿ ಬೈಕ್‌ನಲ್ಲಿ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.
ನಮ್ಮ ಸಂಸ್ಕೃತಿಯಲ್ಲಿ ಎಲ್ಲಾ ಪ್ರಾಣಿಗಳನ್ನು ಬಹುತೇಕ ಪೂಜನೀಯ ಭಾವದಿಂದ ನೋಡಲಾಗುತ್ತದೆ. ಅದರಲ್ಲೂ ಹಾವುಗಳ ಸುದ್ದಿಗಂತೂ ಯಾರೂ ಹೋಗುವುದೇ ಇಲ್ಲ. ಹಾವುಗಳಿಗೆ ಮಾಡಿದ ಅಪಚಾರ, ನೋವು ಹಾನಿಗಳು ಜನ್ಮ ಜನ್ಮಗಳಲ್ಲೂ ಕಾಡುವುದು. ಮಕ್ಕಳು ಮೊಮ್ಮಕ್ಕಳ ಕಾಲಕ್ಕೂ ಅದು ಮುಂದುವರೆಯುವುದು ಎಂಬುದನ್ನು ಬಹುತೇಕ ಹಿಂದೂಗಳು ನಂಬುತ್ತಾರೆ. ಹೀಗಾಗಿ ಹಾವುಗಳು ಮನೆಗೆ ಬಂದರೆ ಹಾವು ಹಿಡಿಯುವವರನ್ನು ಕರೆಸುತ್ತಾರೆ. ಕೆಲವೊಮ್ಮೆ ಹೊರಗೆ ಓಡಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಇಲ್ಲೊಂದು ಕಡೆ ಯುವಕನೋರ್ವ ಹಾವೊಂದರ ಮೇಲೆ ಅಮಾನವೀಯ ಕೃತ್ಯವೆಸಗಿದ್ದಾನೆ.
ಹಾವೊಂದಕ್ಕೆ ಹಗ್ಗ ಕಟ್ಟಿ ಅದನ್ನು ಬೈಕ್‌ಗೆ ಕಟ್ಟಿದ್ದು, ನಂತರ ಬೈಕ್ ಸ್ಟಾರ್ಟ್ ಮಾಡಿ ಎಳೆದುಕೊಂಡು ಹೋಗಿದ್ದಾನೆ. ಛತ್ತೀಸ್‌ಗಢದ ಕಂಕೇರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಹಾವಿನ ಮೇಲೆ ಈ ರೀತಿಯ ಕ್ರೌರ್ಯವೆಸಗಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ವನ್ಯಜೀವಿಯಾದ ಹಾವಿನ ಮೇಲೆ ಈ ರೀತಿ ಹಿಂಸಾಚಾರ ಎಸಗಿರುವುದಕ್ಕೆ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನೇಕರು ಆಗ್ರಹಿಸಿದ್ದಾರೆ.
ಅನೇಕರು ಇದು ಪ್ರಾಣಿ ಹಿಂಸೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನನ್ನು ಇದೇ ರೀತಿ ಬೈಕ್‌ಗೆ ಕಟ್ಟಿ ಎಳೆಯುವಂತೆ ಕೆಲವರು ಆಗ್ರಹಿಸಿದ್ದಾರೆ. ಇದು ಮೂಕ ಪ್ರಾಣಿಗಳ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದ್ದು, ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.
ವೀಡಿಯೋ ವೈರಲ್ ಆದ ನಂತರ ಅರಣ್ಯ ಇಲಾಖೆ ಘಟನೆ ಬಗ್ಗೆ ತನಿಖೆ ಶುರು ಮಾಡಿದೆ. ಪ್ರಾಥಮಿಕ ವರದಿಗಳ ಪ್ರಕಾರ ಈ ಯುವಕ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಹಾವನ್ನು ಬೈಕ್‌ಗೆ ಕಟ್ಟಿ ಎಳೆದುಕೊಂಡು ಬಂದಿದ್ದಾನೆ. ಗ್ರಾಮದಲ್ಲಿ ಸಿಕ್ಕಿದ ಹಾವನ್ನು ಅಲ್ಲಿ ಅಪಾಯ ಉಂಟು ಮಾಡದಂತೆ ತಡೆಯುವುದಕ್ಕಾಗಿ ಬೇರೆಡೆ ಸಾಗಣೆ ಮಾಡಿದ್ದಾಗಿ ಯುವಕ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆದರೆ ಆತ ಹಾವನ್ನು ತೆಗೆದುಕೊಂಡು ಬಂದ ರೀತಿ ವನ್ಯಜೀವಿ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸುಮ್ಮನಿದ್ದ ಹಸುಗಳ ಕೆಣಕಿ ಒದೆಸಿಕೊಂಡ ಪ್ರವಾಸಿಗ
ಹಾಗೆಯೇ ಚೀನಾದಿಂದ ವೈರಲ್ ಆದ ಮತ್ತೊಂದು ವೀಡಿಯೋವೊಂದರಲ್ಲಿ ತಮ್ಮನ್ನು ಕೆಣಕಿದ ಪ್ರವಾಸಿಗನನ್ನು ಹಸುಗಳ ಗುಂಪೊಂದು ನೆಲಕ್ಕೆ ಕೆಡವಿ ಮೂಳೆ ಮುರಿಯುವಂತೆ ಮಾಡಿವೆ. ಪ್ರವಾಸಿಗನ ಮೇಲೆ ಸವಾರಿ ಮಾಡಿ ಕೆಡವಿ ಕೆಡವಿ ಕೊಂಬಿನಲ್ಲಿ ಕುತ್ತಿ ಗಂಭೀರವಾಗಿ ಹಾನಿ ಮಾಡಿರುವ ವೀಡಿಯೋ ವೈರಲ್ ಆಗಿದೆ. ಸುಮ್ಮನೆ ಮಲಗಿದ್ದ ಹಸುಗಳನ್ನು ಕೋಲಿನಲ್ಲಿ ಕುತ್ತಿ ಪ್ರವಾಸಿಗರು ಎಬ್ಬಿಸಿದ್ದಾರೆ. ಇದಾದ ನಂತರ ರೊಚ್ಚಿಗೆದ್ದ ಹಸುಗಳು ನಂತರ ಅಲ್ಲಿಗೆ ಬಂದ ಪ್ರವಾಸಿಗರ ಮೇಲೆ ಚಾರ್ಜ್ ಮಾಡಿದ್ದು, ಓರ್ವ ಪ್ರವಾಸಿಗನನ್ನು ನೆಲಕ್ಕೆ ಕೆಡವಿ 4 ರಿಂದ 5 ಹಸುಗಳು ಆತನನ್ನು ಕೊಂಬಿನಿಂದ ಕುತ್ತಿ ಆತನ ಮೈಮೇಲೆ ಹತ್ತಿ ಕುಣಿದಾಡಿವೆ.
ಪ್ರವಾಸಿಗರೇ ಸುಮ್ಮನಿದ್ದ ಹಸುಗಳನ್ನು ಕೆಣಕಿದ ನಂತರ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದು, ಘಟನೆಯ ಬಳಿಕ ಹಲವು ಪ್ರವಾಸಿಗರು ಹಸುಗಳ ದಾಳಿಗೆ ಸಿಲುಕಿ ಮೂಳೆ ಮುರಿದುಕೊಂಡಿದ್ದಾರೆ. ಹೀಗೆ ಸುಮ್ಮನಿರುವ ವನ್ಯಜೀವಿಗಳ ಕೆಣಕಲು ಹೋದ ಪ್ರವಾಸಿಗರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ಪ್ರವಾಸಿಗರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಸುಗಳು ಒಳ್ಳೆ ಕೆಲಸ ಮಾಡಿವೆ ಎಂದಿದ್ದಾರೆ. ಹಸುಗಳು ಸಾಧು ಪ್ರಾಣಿಗಳು ಹೀಗಾಗಿ ಅವುಗಳು ಸುಮ್ಮನೆ ಹಾಗೆ ಮಾಡಿರಲು ಸಾಧ್ಯವಿಲ್ಲ, ಈ ಪ್ರವಾಸಿಗರು ಏನೋ ಎಡವಟಟು ಮಾಡಿರಲೇಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
