ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜು ಜನತಾದಳದ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ಖಾಸಗಿ ವಿವಾಹ ಸಮಾರಂಭವು ಮೇ 3 ರಂದು ಜರ್ಮನಿಯ ಬರ್ಲಿನ್‌ನಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ.
ನವದೆಹಲಿ (ಜೂ.5): ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಬಿಜು ಜನತಾದಳದ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಖಾಸಗಿ ವಿವಾಹ ಸಮಾರಂಭವು ಮೇ 3 ರಂದು ಜರ್ಮನಿಯ ಬರ್ಲಿನ್‌ನಲ್ಲಿ ನಡೆದಿದೆ. ಮೊಯಿತ್ರಾ ಈ ಹಿಂದೆ ಡ್ಯಾನಿಶ್ ಫೈನಾನ್ಸರ್ ಲಾರ್ಸ್ ಬ್ರೋರ್ಸನ್ ಅವರನ್ನು ವಿವಾಹವಾಗಿದ್ದರು.
ಮದುವೆಯ ಬಗ್ಗೆ ಯಾವುದೇ ಪ್ರಕಟಣೆ ನೀಡಿರಲಿಲ್ಲ. ಮಹುವಾ ಮೊಯಿತ್ರಾ ಮತ್ತು ಪಿನಾಕಿ ಮಿಶ್ರಾ ಇಬ್ಬರೂ ಸಮಾರಂಭದ ಬಗ್ಗೆ ಮೌನವಾಗಿದ್ದಾರೆ. ಈ ಮಾಹಿತಿಯ ಸತ್ಯಾಸತ್ಯತೆಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಸ್ವತಂತ್ರವಾಗಿ ಪರಿಶೀಲಿಸಿಲ್ಲ.
ಮೊಯಿತ್ರಾ ವಿರೋಧ ಪಕ್ಷದ ಜನಪ್ರಿಯ ನಾಯಕಿಯರಲ್ಲಿ ಒಬ್ಬರು. ಸಂಸತ್ತಿನಲ್ಲಿ ಅವರ ಉತ್ಸಾಹಭರಿತ ಭಾಷಣಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದಾರೆ. ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿದ್ದ ಮಹುವಾ ಮೊಯಿತ್ರಾ, ನಂತರ ರಾಜಕೀಯಕ್ಕೆ ಬಂದಿದ್ದರು.
ಇಂಡಿಯಾ ಟುಡೇ ವಿವಾಹ ಸಮಾರಂಭದ ಫೋಟೋಗಳನ್ನು ಪ್ರಕಟಿಸಿದ್ದು, ಮೊಯಿತ್ರಾ ಮತ್ತು ಮಿಶ್ರಾ ಇಬ್ಬರೂ ನಗುತ್ತಿರುವಂತೆ ಕಂಡಿದೆ. ಅವರಿಬ್ಬರೂ ಚಿನ್ನದ ಆಭರಣಗಳನ್ನು ಧರಿಸಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ಹಾಗಿದ್ದರೂ, ಅವರು ಸೇರಿರುವ ರಾಜಕೀಯ ಪಕ್ಷಗಳಾದ ಬಿಜೆಡಿ ಮತ್ತು ಟಿಎಂಸಿ ಈ ಬೆಳವಣಿಗೆಯ ಬಗ್ಗೆ ಮೌನವನ್ನು ಕಾಯ್ದುಕೊಂಡಿವೆ.
ಯಾರೀತ ಪಿನಾಕಿ ಮಿಶ್ರಾ?
1. 1959 ರಲ್ಲಿ ಜನಿಸಿದ 65 ವರ್ಷದ ಪಿನಾಕಿ ಮಿಶ್ರಾ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದು, ಈ ಹಿಂದೆ ಮೊಯಿತ್ರಾ ಅವರ ವಕೀಲರಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅವರನ್ನು ಪ್ರತಿನಿಧಿಸಿದ್ದರು.
2. ಪಿನಾಕಿ ಮಿಶ್ರಾ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ (ಎಲ್‌ಎಲ್‌ಬಿ) ಪೂರ್ಣಗೊಳಿಸಿದ್ದು, ನಂತರ ರಾಜಕೀಯ ವೃತ್ತಿಜೀವನದತ್ತ ಸಾಗಿದ್ದರು.
3. ಪಿನಾಕಿ ಮಿಶ್ರಾ ಅವರು 2009ರಿಂದ 2019ರವರೆಗೆ ಪುರಿ ಕ್ಷೇತ್ರದ ಸಂಸದರಾಗಿದ್ದರು/ ಬಿಜೆಡಿಯನ್ನು ಪ್ರತಿನಿಧಿಸಿದ್ದರು. ಸಂಸತ್ತಿನಲ್ಲಿ, ಮಿಶ್ರಾ ಹಣಕಾಸು ಸ್ಥಾಯಿ ಸಮಿತಿ ಮತ್ತು ವ್ಯವಹಾರ ಸಲಹಾ ಸಮಿತಿ ಮತ್ತು ಅಂತಹ ಹಲವಾರು ಉನ್ನತ ಸಮಿತಿಗಳ ಭಾಗವಾಗಿದ್ದರು.
4. ನಾಲ್ಕು ಬಾರಿ ಸಂಸದರಾಗಿರುವ ಅವರು 1996 ರಲ್ಲಿ ಪುರಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಮಾಜಿ ಕೇಂದ್ರ ಸಚಿವ ಬ್ರಜ ಕಿಶೋರ್ ತ್ರಿಪಾಠಿ ವಿರುದ್ಧ ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆದ್ದರು. ಅವರು 2009, 2014 ಮತ್ತು 2019 ರಲ್ಲಿ ಸತತ ಮೂರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
5. ಅವರು ಈ ಹಿಂದೆ ಸಂಗೀತಾ ಮಿಶ್ರಾ ಅವರನ್ನು ವಿವಾಹವಾಗಿದ್ದರು, ಮತ್ತು ಅವರ ಹಿಂದಿನ ಮದುವೆಯಿಂದ ಒಬ್ಬ ಮಗ ಮತ್ತು ಮಗಳನ್ನು ಹೊಂದಿದ್ದಾರೆ.
