ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ ಮಹುವಾ ಮೊಯಿತ್ರಾ ಆರೋಪ
ಸೊಹ್ರಾಬುದ್ದೀನ್ ಕೇಸಿನ ತನಿಖೆ ನಡೆಸುತ್ತಿದ್ದ ನ್ಯಾಯಾಧೀಶ ಲೋಯಾ ಸಾವಿನ ಹಿಂದೆ ಸಂಚು ಇದೆ ಎಂಬ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪ ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಈ ಆರೋಪಕ್ಕೆ ಬಿಜೆಪಿ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನವದೆಹಲಿ: ಕೇಂದ್ರ ಸಚಿವ ಅಮಿತ್ ಶಾ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಕೇಸಿನ ವಿಚಾರಣೆ ನಡೆಸುತ್ತಿದ್ದ ಮಹಾರಾಷ್ಟ್ರ ವಿಶೇಷ ಕೋರ್ಟ್ ನ್ಯಾಯಾಧೀಶ ಬಿ.ಎಚ್. ಲೋಯಾ ಸಾವಿನ ಹಿಂದೆ ಸಂಚು ಇತ್ತು ಎಂಬರ್ಥದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮಾಡಿದ ಆರೋಪ ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿ ಕಲಾಪ ಮುಂದೂಡಿಕೆ ಆಯಿತು.ಶುಕ್ರವಾರ ಸಂವಿಧಾನದ ಮೇಲಿನ ಚರ್ಚೆ ವೇಳೆ ಮಹುವಾ ಈ ಆರೋಪ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಹಾಗೂ ಬಿಜೆಪಿ ಸಂಸದ ನಿಶಿಕಾಂತ ದುಬೆ, ‘ಸುಪ್ರೀಂ ಕೋರ್ಟು ಲೋಯಾ ಸಾವು ಸಹಜ ಎಂದು ತೀರ್ಪು ನೀಡಿತ್ತು. ಹೀಗಾಗಿ ಅನಗತ್ಯ ವಿಷಯ ಕೆದಕಿರುವ ಮಹುವಾ ಸೂಕ್ತ ಸಂಸದೀಯ ಶಿಕ್ಷೆ ಎದುರಿಸಬೇಕಾಗುತ್ತದೆ’ ಎಂದರು ಹಾಗೂ ಸ್ಪೀಕರ್ ಓಂ ಬಿರ್ಲಾ ಈ ವಿಷಯ ಪರಿಶೀಲಿಸುವೆ ಎಂದರು. ಆಗ ಮಹುವಾ ರಿಜಿಜು ವಿರುದ್ಧ ಹರಿಹಾಯ್ದಾಗ ಕೋಲಾಹಲ ಉಂಟಾಗಿ ಸದನ ಮುಂದೂಡಿತು.
2014ರಲ್ಲಿ ಲೋಯಾ ಸಾವು ಸಂಭವಿಸಿತ್ತು. ಅವರ ಸಾವು ಸಹಜವಲ್ಲ. ಅವರು ಸೂಕ್ಷ್ಮ ಸಿಬಿಐ ಕೇಸುಗಳ ವಿಚಾರಣೆ ನಡೆಸುತ್ತಿದ್ದ ಕಾರಣ ಏನೋ ಸಂಚು ಇದೆ ಎಂಬ ಸಂದೇಹ ಉಂಟಾಗಿತ್ತು. ಆದರೆ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ‘ಲೋಯಾ ಸಾವು ಸಹಜ. ಸಂಚು ಇಲ್ಲ’ ಎಂದು ತೀರ್ಪು ನೀಡಿತ್ತು.
ಇದನ್ನೂ ಓದಿ: ಸಂವಿಧಾನ ಆರ್ಎಸ್ಎಸ್ ಪುಸ್ತಕ ಅಲ್ಲ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಚಾಟಿ