ಮಂಗಳೂರಿನ ಎಂಆರ್‌ಪಿಎಲ್ ಸ್ಫೋಟ ದುರಂತ ಬೆನ್ನಲ್ಲೇ ಇದೀಗ ತಿರುಪತಿಯಲ್ಲಿ ಫಾರ್ಮಾ ಫ್ಯಾಕ್ಟರಿಯಲ್ಲಿ ಸಂಭವಿಸಿದ ಸ್ಫೋಟಕ್ಕೆ 5 ಮಂದಿ ಮೃತಪಟ್ಟರೆ, ಹಲವರು ಗಾಯಗೊಂಡ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ತಿರುಪತಿ (ಅ.03) ಮಂಗಳೂರಿನ ಎಂಆರ್‌ಪಿಎಲ್ ಘಟಕದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಓರ್ವ ಉದ್ಯೋಗಿ ಮೃತಪಟ್ಟು ಕೆಲವರು ಗಾಯಗೊಂಡ ಘಟನೆ ಇತ್ತೀಚೆಗೆ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಆಂಧ್ರ ಪ್ರದೇಶದ ತಿರುಪತಿಯ ಶ್ರೀ ಸಿಟಿಯಲ್ಲಿರುವ ಮೆಡಿಕಲ್ ಫಾರ್ಮಾ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಪರಿಣಾಮ 5 ಮಂದಿ ಮೃತಪಟ್ಟರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಆತಂಕ ತೀವ್ರಗೊಳ್ಳುತ್ತಿದೆ.

ರಾತ್ರಿ ಶಿಫ್ಟ್ ಉದ್ಯೋಗಿಳಿರುವಾಗ ಸ್ಫೋಟ

ಇಂದು ಬೆಳಗ್ಗೆ 8 ಗಂಟೆ ಸುಂಾರಿಗೆ ಟಿಐಎಲ್ ಫಾರ್ಮಾ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ. ರಾತ್ರಿ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಸ್ಥಳದಲ್ಲೆ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಗಂಭೀರ ಗಾಯಗೊಂಡ ಉದ್ಯೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಸ್ಫೋಟದ ಶಬ್ಧ ಕೇಳಿಸುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಇದೇ ವೇಳೆ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಇದೀಗ ರಕ್ಷಣಾ ಕಾರ್ಯಾಚರಣೆಗಳು ಸಾಗುತ್ತಿದೆ.

ಫಾರ್ಮಾ ಫ್ಯಾಕ್ಟರಿಯ ಬಾಯ್ಲರ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ದುರಂತದ ತೀವ್ರತೆ ಹೆಚ್ಚಾಗಿದೆ. ರಾತ್ರಿ ಪಾಳಿಯ ಉದ್ಯೋಗಿಗಳು ಇನ್ನೇನು ಕೆಲವೇ ಹೊತ್ತಲ್ಲೇ ನಿರ್ಗಮಿಸಬೇಕಿತ್ತು. ಈ ವೇಳೆ ದುರಂತ ಸಂಭವಿಸಿದೆ. ಘಟನೆ ಸಂಬಂದ ಸಚಿವ ನಾರಾ ಲೋಕೇಶ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಹಲವರು ಮೃತಪಟ್ಟಿರುವುದಾಗಿ ವರದಿಯಾಗಿದೆ, ಕೆಲ ಉದ್ಯೋಗಿಗಳು ಗಾಯಗೊಂಡಿದ್ದಾರೆ. ಸರ್ಕಾರದಿಂದ ಎಲ್ಲಾ ನೆರವು ನೀಡುವುದಾಗಿ ಹೇಳಿದ್ದಾರೆ. ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಧಾವಿಸಿದ್ದಾರೆ.

ಇದೇ ವೇಳೆ ಸ್ಥಳೀಯ ಜಿಲ್ಲಾ ಆಡಳಿತಕ್ಕೆ ಸಚಿವರು ಸೂಚನೆ ನೀಡಿದ್ದು, ಅಗತ್ಯಬಿದ್ದಲ್ಲಿ ಉತ್ತಮ ಆಸ್ಪತ್ರೆಗೆ ಗಾಯಾಗಳುಗಳ ರವಾನೆಗೆ ಸೂಚಿಸಲಾಗಿದೆ. ಇದೇ ವೇಳೆ ಮೃತರು ಹಾಗೂ ಗಾಯಾಳುಗಳ ಕುಟುಂಬದ ಜೊತೆ ನಿಲ್ಲಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಘಟನೆ ಕಾರಣವೇನು ಅನ್ನೋ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಶ್ರೀಕಾಲಹಸ್ತಿ ನಾಯಕ ಬೊಜ್ಜಾಲ ಸುಧೀರ್ ರೆಡ್ಡಿ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಗಾಯಗೊಂಡ ಉದ್ಯೋಗಿಗಳು ಶೀಘ್ರದಲ್ಲೇ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಇತ್ತ ವೈಎಸ್‌ಆರ್‌ಸಿಪಿ ಸಂಸದ ಡಾ.ಎಂ ಗುರುಮೂರ್ತಿ ಘಟನೆ ಸಂಬಂಧ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಹೆಲ್ತ್‌ಕೇರ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ್ದು ಹೇಗೆ? ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.